ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಪಕ್ಷದ ಮಾಜಿ ಶಾಸಕರು, ಪರಿಷತ್ ಸದಸ್ಯರು ಹಾಗೂ ಪಕ್ಷದ ಪ್ರಮುಖರ ಸಭೆ ನಡೆಯಿತು.
ಬೆಂಗಳೂರು: ಪಕ್ಷ ಬಲವರ್ಧನೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಧ್ಯಕ್ಷತೆಯಲ್ಲಿ ಇಂದು ಬಿಜೆಪಿ ಮಾಜಿ ಶಾಸಕರು ಮತ್ತು ಮಾಜಿ ಪರಿಷತ್ ಸದಸ್ಯರ ಮಹತ್ವದ ಸಭೆ ನಡೆಯಿತು.
ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತು ಮಾಜಿ ಸಿಎಂ ಡಿ.ವಿ. ಸದಾನಂದಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಪಿ.ವಿ.ಕೃಷ್ಣ ಭಟ್ ಮತ್ತಿತರರು ಭಾಗವಹಿಸಿದ್ದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಕರೆಯಲಾಗಿದ್ದ ಮಾಜಿ ಶಾಸಕರು, ಮಾಜಿ ವಿಧಾನ ಪರಿಷತ್ ಸದಸ್ಯರು ಹಾಗೂ ಪಕ್ಷದ ಕೆಲವು ಪದಾಧಿಕಾರಿಗಳಿಗೆ ಮಾತ್ರ ಭೋಜನಕೂಟಕ್ಕೆ ಆಹ್ವಾನ ಕೊಡಲಾಗಿತ್ತು. ವಿಜಯೇಂದ್ರ ರಾಜ್ಯಾಧ್ಯಕ್ಷರಾದ ನಂತರ ನಡೆದ ಮೊದಲ ಭೋಜನಕೂಟಕ್ಕೆ ಮಾಜಿ ಶಾಸಕರು, ಮಾಜಿ ವಿಧಾನ ಪರಿಷತ್ ಸದಸ್ಯರು, ಪಕ್ಷದ ಪ್ರಮುಖರು ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಭಾಗಿಯಾಗಿದ್ದರು.
ಮುಂಬರುವ 2028ರ ವಿಧಾನಸಭಾ ಚುನಾವಣೆವರೆಗೂ ವಿಜಯೇಂದ್ರ ನಾಯಕತ್ವ ಬದಲಾವಣೆ ಮಾಡಬಾರದು. ಅವರ ಮುಂದಾಳತ್ವದಲ್ಲೇ ಚುನಾವಣೆ ಎದುರಿಸೋಣ. ಸಾಧ್ಯವಾದರೆ ಪಕ್ಷದ ವರಿಷ್ಠರನ್ನು ಭೇಟಿಯಾಗಿ ಮನವರಿಕೆ ಮಾಡಿಕೊಡಬೇಕು ಎಂದು ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಗೊತ್ತಾಗಿದೆ.
ಬಿ.ವೈ.ವಿಜಯೇಂದ್ರ ಪ್ರತಿಕ್ರಿಯೆ: ನಾನು ಅಧ್ಯಕ್ಷನಾದ ಮೇಲೆ ಕೆಲಸದ ಒತ್ತಡ, ಬೇರೆ ಬೇರೆ ಕಾರಣಕ್ಕೆ ಸಭೆ ಮಾಡಲು ಆಗಿರಲಿಲ್ಲ. ಹಾಗಾಗಿ, ಮಾಜಿ ಶಾಸಕರು ಹಾಗೂ ಎಂಎಲ್ಸಿಗಳ ಸಭೆ ಕರೆಯಲಾಗಿತ್ತು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಜಿಲ್ಲಾ, ತಾಲೂಕು ಹಾಗೂ ಬಿಬಿಎಂಪಿ ಚುನಾವಣೆ ಎದುರಿಸಬೇಕೆಂದು ಚರ್ಚೆ ಮಾಡಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ಸಭೆ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಸಣ್ಣ ಪುಟ್ಟ ಗೊಂದಲ, ವ್ಯತ್ಯಾಸಗಳು ಇರುತ್ತವೆ. ಅದೆಲ್ಲವನ್ನೂ ವರಿಷ್ಠರು ಗಮನಿಸುತ್ತಿದ್ದಾರೆ. ಯಡಿಯೂರಪ್ಪ ಸೇರಿ ಹಿರಿಯರು ಎಲ್ಲಾ ಮಾರ್ಗದರ್ಶನ ಕೊಟ್ಟಿದ್ದಾರೆ. ರಾಜ್ಯದ ರಾಜಕೀಯ ಪರಿಸ್ಥಿತಿಗಳ ಬಗ್ಗೆಯೂ ಚರ್ಚೆ ಮಾಡಿದ್ದೇವೆ. ಇವತ್ತಿನ ಸಭೆ ಯಾವುದೇ ಬಲ ಪ್ರದರ್ಶನ, ಯಾರನ್ನೋ ಪಕ್ಷದಿಂದ ಉಚ್ಛಾಟನೆ ಮಾಡಬೇಕು ಅಂತಾ ಮಾಡಿರುವುದಲ್ಲ ಎಂದರು.
ಇವತ್ತಿನ ಸಭೆಯಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಹೋಗುವ ಬಗ್ಗೆ ಚರ್ಚೆ ಆಗಿದೆ. ಸರ್ಕಾರದ ವಿರುದ್ಧ ಹೋರಾಟದ ಬಗ್ಗೆಯೂ ಚರ್ಚಿಸಿದ್ದೇವೆ. ಪಕ್ಷವನ್ನು ಹೇಗೆ ಸರಿಪಡಿಸಬೇಕು ಎನ್ನುವ ಪ್ರಜ್ಞೆ ನನಗೂ ಇದೆ. ಈ ನಿಟ್ಟಿನಲ್ಲಿ ಹಿರಿಯರು ನಮಗೆ ಸಲಹೆ ಕೊಟ್ಟಿದ್ದಾರೆ. ಇದೆಲ್ಲ ಬದಿಗಿಟ್ಟು ಪಕ್ಷದ ಸಂಘಟನೆಗೆ ಒತ್ತು ಕೊಟ್ಟು ಈ ಸಭೆ ನಡೆಸಲಾಗಿದೆ ಎಂದರು.
ಕಾಂಗ್ರೆಸ್ ಒಳ ಪಾಲಿಟಿಕ್ಸ್ಗೆ ವಿಜಯೇಂದ್ರ ಟಾಂಗ್ : ಅಧಿಕಾರವನ್ನು ಒದ್ದು ಕಿತ್ಕೋಬೇಕು ಅಂತ ಡಿ.ಕೆ.ಶಿವಕುಮಾರ್ ಅವರಿಗೆ ಅವರ ಗುರುಗಳು ಹಿಂದೊಮ್ಮೆ ಹೇಳಿದ್ದರಂತೆ. ಈ ಮಾತನ್ನು ಚಳಗಾಲದ ಅಧಿವೇಶನದಲ್ಲಿ ಡಿಕೆಶಿ ನೆನಪಿಸಿಕೊಂಡರು. ಈ ಮಾತಿನ ಮರ್ಮ, ಅರ್ಥ ಏನು ಅಂತ ಅರ್ಥ ಮಾಡ್ಕೊಳ್ಳಿ. ಪವರ್ ಶೇರಿಂಗ್ ಫಾರ್ಮುಲಾ ಏನಿದೆ ಅಂತ ಸಿದ್ದರಾಮಯ್ಯ, ಡಿಕೆಶಿ ಹೇಳಬೇಕು. ಆದರೆ, ನಮಗಿರುವ ಮಾಹಿತಿ ಸಿದ್ದರಾಮಯ್ಯ ಅವಧಿ ಮುಗಿಯುತ್ತಿದೆ. ಹಾಗಾಗಿ ಸಿದ್ದರಾಮಯ್ಯ ದಾಳ ಉರುಳಿಸುತ್ತಿದ್ದಾರೆ. ಬೇರೆ ಬೇರೆ ಸಚಿವರ ಮೂಲಕ ಡಿನ್ನರ್ ಪಾಲಿಟಿಕ್ಸ್ ಮಾಡಿಸ್ತಿದ್ದಾರೆ. ಬರುವ ದಿನಗಳಲ್ಲಿ ಕಾಂಗ್ರೆಸ್ ಕಿತ್ತಾಟ ಬೀದಿಗೆ ಬರಲಿದೆ ಎಂದು ಹೇಳಿದರು.
Post a Comment