ಬೆಂಗಳೂರು: ರಾಜ್ಯದಲ್ಲಿ ಅಧಿಕಾರ ಹಂಚಿಕೆಯ ವಿಚಾರ ಮುನ್ನಲೆಗೆ ಬಂದು, ಔತಣಕೂಟ 'ರಾಜಕೀಯ' ಸದ್ದು ಮಾಡುತ್ತಿರುವಂತೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು 'ಸರ್ವಶತ್ರು ಸಂಹಾರಿಣಿ' ಎಂದೇ ಪ್ರಸಿದ್ದಿ ಪಡೆದಿರುವ ಕುಂಭಕೋಣಂನ ಅಯ್ಯವಾಡಿ ಪ್ರತ್ಯಂಗಿರಾ ದೇವಿಯ ಮೊರೆ ಹೋಗಿರುವುದು ಗಮನಸೆಳೆದಿದೆ.
ರಾಜಕೀಯ ಮಹತ್ವಾಕಾಂಕ್ಷೆ ಉಳ್ಳವರು ಪ್ರತ್ಯಂಗಿರಾ ದೇವಿಯ ಪೂಜೆ ಮಾಡಿಸುವುದು ನಂಬಿಕೆ. ದಕ್ಷಿಣ ಭಾರತದಲ್ಲಿ ಈ ದೇವಿಯ ಆರಾಧನೆಗೆ ಮಹತ್ವ ಇದೆ. ರಾಜಕೀಯ ಮಹತ್ವಾಕಾಂಕ್ಷಿಯಾಗಿರುವ ಶಿವಕುಮಾರ್ ಅವರು ತಮ್ಮ ಪತ್ನಿ ಜೊತೆ ಗುರುವಾರ (ಜ. 9) ಈ ದೇಗುಲಕ್ಕೆ ಭೇಟಿ ನೀಡಿದ್ದಾರೆ.
ಪ್ರತ್ಯಂಗಿರಾ ದೇವಿಗೆ ಸಂಕಲ್ಪ ಸಹಿತವಾಗಿ ವಿಶೇಷ ಪೂಜೆ ಸಲ್ಲಿಸಿದ ಶಿವಕುಮಾರ್ ಅವರಿಗೆ ದೇಗುಲದ ಅರ್ಚಕರು ತಿಲಕವಿಟ್ಟು, ಪ್ರಸಾದ ನೀಡಿದರು.
ಮುಖ್ಯಮಂತ್ರಿ ಸ್ಥಾನದ ಮೇಲೆ ಶಿವಕುಮಾರ್ ಕಣ್ಣು ನೆಟ್ಟಿದೆ. 'ಅಧಿಕಾರ ಹಂಚಿಕೆ' ಒಪ್ಪಂದಂತೆ ತಮ್ಮ ಹಕ್ಕು ಅನ್ನು ಅವರು ಈಗಾಗಲೇ ಪ್ರತಿಪಾದಿಸಿದ್ದಾರೆ. ಈ ಮಧ್ಯೆ, ಸಿದ್ದರಾಮಯ್ಯ ಸಂಪುಟದ ದಲಿತ ಸಚಿವರ ಔತಣಕೂಟ ರಾಜಕೀಯವು 'ದಲಿತ ಮುಖ್ಯಮಂತ್ರಿ' ವಿಚಾರವನ್ನು ಮುಂಚೂಣಿಗೆ ತಂದಿದೆ.
ಕುಂಭಕೋಣಂಗೆ ಗುರುವಾರ ಹೆಲಿಕಾಪ್ಟರ್‌ನಲ್ಲಿ ಬಂದಿಳಿದ ಡಿ.ಕೆ. ಶಿವಕುಮಾರ್ ಅವರನ್ನು ಸ್ಥಳೀಯ ಮೇಯರ್ ಶರವಣನ್, ತಂಜಾವೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲೋಕನಾಥನ್, ಕಾಂಗ್ರೆಸ್ ಮುಖಂಡರಾದ ಕೃಷ್ಣಸ್ವಾಮಿ, ವೆಂಕಟೇಶ್ ಮತ್ತಿತರರು ಬರಮಾಡಿಕೊಂಡರು.
ತಮಿಳುನಾಡಿನ ಕಾಂಚಿಪುರಂ ವರದರಾಜು ಪೆರುಮಾಳ್ ದೇಗುಲಕ್ಕೂ ಡಿ.ಕೆ. ಶಿವಕುಮಾರ್ ಅವರ ಪತ್ನಿ ಜೊತೆ ತೆರಳಿ ಪೂಜೆ ಸಲ್ಲಿಸಿದರು.
'ಬಿಜೆಪಿಯೇತರ ಸರ್ಕಾರಗಳಿರುವ ರಾಜ್ಯಗಳಿಗೆ ಅನ್ಯಾಯ'
ಕುಂಭಕೋಣಂ: 'ಬಿಜೆಪಿಯೇತರ ಸರ್ಕಾರಗಳಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರ ಅನುದಾನ ನೀಡದೆ ಅನ್ಯಾಯ ಮಾಡುತ್ತಿದೆ' ಎಂದು ಆರೋಪಿಸಿದ ಡಿ.ಕೆ. ಶಿವಕುಮಾರ್ ಈ ಕಾರಣಕ್ಕೆ ರಾಜ್ಯಗಳು 'ನಮ್ಮ ತೆರಿಗೆ ನಮ್ಮ ಹಕ್ಕು' ಹೋರಾಟ ಮಾಡುತ್ತಿವೆ' ಎಂದರು. ಪ್ರತ್ಯಂಗಿರಾ ದೇವಿ ದೇಗುಲಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು 'ಬಿಜೆಪಿ ಸರ್ಕಾರ ಇಲ್ಲದ ರಾಜ್ಯಗಳ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ. ಕೇಂದ್ರ ಸರ್ಕಾರಕ್ಕೆ ನಾವು ನೀಡುವ ತೆರಿಗೆಗೆ ತಕ್ಕನಾಗಿ ನಮಗೆ ಅನುದಾನ ಬರುತ್ತಿಲ್ಲ. ಈ ವಿಚಾರದಲ್ಲಿ ಬಿಜೆಪಿಯೇತರ ಸರ್ಕಾರಗಳಿರುವ ರಾಜ್ಯಗಳು ಒಟ್ಟಿಗೆ ಹೋರಾಟ ಮಾಡಬೇಕಿದೆ' ಎಂದರು.
Post a Comment