ನವದೆಹಲಿ: 'ಇಂಡಿಯಾ' ಮೈತ್ರಿಕೂಟವನ್ನು ವಿಸರ್ಜಿಸಬೇಕು ಎಂಬ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿಕೆ ಕುರಿತು ನ್ಯಾಷನಲ್ ಕಾನ್ನರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಪ್ರತಿಕ್ರಿಯಿಸಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೈತ್ರಿಯ ಪ್ರಾಮುಖ್ಯತೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಫಾರೂಕ್ ಅಬ್ದುಲ್ಲಾ, 'ಮೈತ್ರಿಗಳು ಕೇವಲ ಚುನಾವಣಾ ಸ್ಪರ್ಧೆಗಳಿಗೆ ಸೀಮಿತವಾಗಿರುವುದಿಲ್ಲ. ಬದಲಾಗಿ ದೇಶವನ್ನು ಬಲಪಡಿಸಲು ಮತ್ತು ದ್ವೇಷ ಹರಡುವವರನ್ನು ಮಟ್ಟಹಾಕಲು ಉದ್ದೇಶಿಸಲಾಗಿದೆ' ಎಂದು ಒತ್ತಿ ಹೇಳಿದರು.
'ಇಂಡಿಯಾ' ಮೈತ್ರಿಕೂಟವನ್ನು ಕೇವಲ ಲೋಕಸಭಾ ಚುನಾವಣೆಗಾಗಿ ಮಾತ್ರ ರಚಿಸಲಾಗಿದೆ ಎಂದು ಭಾವಿಸುವವರು ಈ ತಪ್ಪು ಕಲ್ಪನೆಯಿಂದ ಹೊರಬರಬೇಕು ಎಂದು ಒಮರ್ ಅಬ್ದುಲ್ಲಾ ಹೆಸರನ್ನು ನೇರವಾಗಿ ಉಲ್ಲೇಖಿಸದೆ ತಿರುಗೇಟು ನೀಡಿದ್ದಾರೆ.
'ಇಂಡಿಯಾ' ಮೈತ್ರಿಕೂಟದ ಉದ್ದೇಶವು ಚುನಾವಣೆಗಳನ್ನು ಮೀರಿ ವಿಸ್ತರಿಸಿದೆ. ರಾಷ್ಟ್ರೀಯ ಏಕತೆಯ ಮೇಲೆ ಕೇಂದ್ರೀಕರಿಸಿದೆ ಎಂದು ಫಾರೂಕ್ ಪ್ರತಿಪಾದಿಸಿದ್ದಾರೆ.
ಒಮರ್ ಅಬ್ದುಲ್ಲಾ ಹೇಳಿದ್ದೇನು?
'ಇಂಡಿಯಾ' ಮೈತ್ರಿಕೂಟವನ್ನು ಕೇವಲ ಲೋಕಸಭೆ ಚುನಾವಣೆ ಸಲುವಾಗಿ ಮಾತ್ರ ರಚನೆ ಮಾಡಲಾಗಿದೆ. ಸದ್ಯ ನಾಯಕತ್ವ ಮತ್ತು ರಾಜಕೀಯ ಕಾರ್ಯಸೂಚಿ ಬಗ್ಗೆ ಸ್ಪಷ್ಟತೆಯ ಕೊರತೆ ಇರುವುದರಿಂದ ಮೈತ್ರಿಕೂಟವನ್ನು ವಿಸರ್ಜಿಸುವುದು ಉತ್ತಮ ಎಂದು ನ್ಯಾಷನಲ್ ಕಾನ್ನರೆನ್ಸ್‌ನ (ಎನ್‌ಸಿ) ಉಪಾಧ್ಯಕ್ಷರೂ ಆಗಿರುವ ಒಮರ್ ಅಬ್ದುಲ್ಲಾ ಹೇಳಿದ್ದರು.
ದೆಹಲಿ ವಿಧಾನಸಭಾ ಚುನಾವಣೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು, '2024ರ ಲೋಕಸಭೆ ಚುನಾವಣೆಗಾಗಿ ಮಾತ್ರ 'ಇಂಡಿಯಾ' ಮೈತ್ರಿಕೂಟವನ್ನು ರಚನೆ ಮಾಡಿದ್ದರೆ, ಅದನ್ನು ವಿಸರ್ಜಿಸುವುದು ಅನಿವಾರ್ಯ. ದೆಹಲಿ ಚುನಾವಣೆಯಲ್ಲಿ ಆಮ್ ಆದ್ಮ ಪಕ್ಷ (ಎಎಪಿ), ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ' ಎಂದು ಅವರು ತಿಳಿಸಿದ್ದರು.
“ನನಗೆ ನೆನಪಿರುವಂತೆ 'ಇಂಡಿಯಾ' ಮೈತ್ರಿಕೂಟಕ್ಕೆ ಯಾವುದೇ ಕಾಲಮಿತಿ ಎಂಬುದು ಇರಲಿಲ್ಲ. ಆದರೆ, ಲೋಕಸಭೆ ಚುನಾವಣೆ ಬಳಿಕ ಇದುವರೆಗೆ ಯಾವುದೇ ಸಭೆ ನಡೆಯದಿರುವುದು ದುರದೃಷ್ಟಕರ. ಮೈತ್ರಿಕೂಟವನ್ನು ಯಾರು ಮುನ್ನಡೆಸುತ್ತಾರೆ? ಅಜೆಂಡಾ ಏನು? ಮೈತ್ರಿ ಹೇಗೆ ಮುಂದುವರಿಯುತ್ತದೆ? ನಾವು ಒಗ್ಗಟ್ಟಾಗಿ ಇರುತ್ತೇವೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ' ಎಂದು ಅಬ್ದುಲ್ಲಾ ಬೇಸರ ಹೊರಹಾಕಿದ್ದರು.
Post a Comment