ಪ್ರವಾಸಿಗರ ನೆಚ್ಚಿನ ತಾಣ ಎನಿಸಿರುವ ಸ್ವಿಜರ್ಲ್ಯಾಂಡಿನಲ್ಲಿ 2025ರ ಜನವರಿ 1ರಿಂದಲೇ ಬುರ್ಖಾ ನಿಷೇಧ ಕಾನೂನು ಜಾರಿಯಾಗಿದೆ. ಯಾರಾದ್ರೂ ಬುರ್ಖಾ ನಿಷೇಧ ಕಾನೂನು ಉಲ್ಲಂಘಿಸಿದರೆ ಒಂದು ಸಾವಿರ ಸ್ವಿಸ್ ಫ್ರಾಂಕ್ (1444 ಡಾಲರ್) ದಂಡ ಕಟ್ಟಬೇಕಾಗುತ್ತದೆ.
ನವದೆಹಲಿ,ಜ.2: ಪ್ರವಾಸಿಗರ ನೆಚ್ಚಿನ ತಾಣ ಎನಿಸಿರುವ ಸ್ವಿಜರ್ಲ್ಯಾಂಡಿನಲ್ಲಿ 2025ರ ಜನವರಿ 1ರಿಂದಲೇ ಬುರ್ಖಾ ನಿಷೇಧ ಕಾನೂನು ಜಾರಿಯಾಗಿದೆ. ಯಾರಾದ್ರೂ ಬುರ್ಖಾ ನಿಷೇಧ ಕಾನೂನು ಉಲ್ಲಂಘಿಸಿದರೆ ಒಂದು ಸಾವಿರ ಸ್ವಿಸ್ ಫ್ರಾಂಕ್ (1444 ಡಾಲರ್) ದಂಡ ಕಟ್ಟಬೇಕಾಗುತ್ತದೆ.
2021ರಲ್ಲಿ ಬುರ್ಖಾ ಮತ್ತು ನಿಕಾಬ್ ಬಗ್ಗೆ ಬಹಿರಂಗವಾಗಿ ಬೇಕೋ, ಬೇಡವೋ ಎನ್ನುವ ಬಗ್ಗೆ ಜನರ ಮಧ್ಯೆ ವೋಟಿಂಗ್ ನಡೆದಿತ್ತು. ಸ್ವಿಸ್ ಜನರು 51 ಶೇಕಡಾ ಮಂದಿ ಬುರ್ಖಾ ನಿಷೇಧ ಪರವಾಗಿ ಮತ ಚಲಾಯಿಸಿದ್ದಾರೆ. ಅದರಂತೆ, 2025ರ ಜನವರಿ 1ರಿಂದಲೇ ಸ್ವಿಜರ್ಲ್ಯಾಂಡ್ ನಲ್ಲಿ ಮುಸ್ಲಿಂ ಮಹಿಳೆಯರು ಧರಿಸುವ ಬುರ್ಖಾಗೆ ನಿಷೇಧ ಹೇರಲಾಗಿದೆ.
ಮುಖವನ್ನು ಮುಚ್ಚುವ ಬುರ್ಖಾ ನಿಷೇಧಕ್ಕಾಗಿ ಬಲಪಂಥೀಯ ವಿಚಾರಧಾರೆಯುಳ್ಳ ಸ್ವಿಸ್ ಪೀಪಲ್ ಪಾರ್ಟಿ (ಎಸ್ ಪಿಪಿ) ವತಿಯಿಂದ ಅಭಿಯಾನ ನಡೆಸಲಾಗಿತ್ತು. ಮೂಲಭೂತವಾದ ನಿಲ್ಲಿಸಿ ಎಂದು ನಡೆದ ಅಭಿಯಾನಕ್ಕೆ ಜನರಿಂದಲೂ ಬೆಂಬಲ ವ್ಯಕ್ತವಾಗಿತ್ತು. ಇಸ್ಲಾಂ ಅಥವಾ ಮುಸ್ಲಿಂ ಮಹಿಳೆಯರ ಬಗ್ಗೆ ನೇರ ಉಲ್ಲೇಖ ಇಲ್ಲದಿದ್ದರೂ ಮುಖ ಮುಚ್ಚುವ ಮಾಸ್ಕ್ ಅಥವಾ ಇನ್ನಾವುದೇ ವಸ್ತ್ರಗಳನ್ನು ಬಳಸುವ ಬಗ್ಗೆ ವಿರೋಧ ವ್ಯಕ್ತವಾಗಿತ್ತು. ಜನರು ಬೀದಿಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಪ್ರತಿಭಟನೆಯನ್ನೂ ಮಾಡಿದ್ದರು. ಆದರೆ ಸ್ವಿಸ್ ಸರಕಾರವು ಮಹಿಳೆಯರು ಏನು ಹಾಕಬೇಕು, ಏನು ಹಾಕಬಾರದು ಎನ್ನುವ ಬಗ್ಗೆ ನಾವು ನಿರ್ಧರಿಸುವಂತಿಲ್ಲ ಎಂದು ಹೇಳಿತ್ತು.
ಸ್ವಿಜರ್ಲ್ಯಾಂಡಿನ ಒಟ್ಟು 8.6 ಮಿಲಿಯನ್ ಜನರಲ್ಲಿ 5 ಶೇಕಡಾ ಮಂದಿ ಮುಸ್ಲಿಮರಿದ್ದಾರೆ. ಇವರು ಟರ್ಕಿ, ಬೋಸ್ನಿಯಾ, ಕೊಸೊವೋ ಮೂಲದವರು. ಆದರೆ, ಇವರಲ್ಲಿ ಹೆಚ್ಚಿನವರು ಬುರ್ಖಾ ಧರಿಸುವುದಿಲ್ಲ. ಕೆಲವೊಂದಷ್ಟು ಜನ ಮಾತ್ರ ನಿಕಾಬ್ ಧರಿಸುತ್ತಾರೆ ಎಂದು ಈ ಬಗ್ಗೆ ಅಧ್ಯಯನ ನಡೆಸಿದ ಜರ್ಮನಿಯ ಲೂಸರ್ನ್ ಯುನಿವರ್ಸಿಟಿ ವರದಿ ನೀಡಿತ್ತು.
ಬುರ್ಖಾ ನಿಷೇಧ ಕಾಯ್ದೆ ಬಗ್ಗೆ ಮಾನವ ಹಕ್ಕು ಸಂಘಟನೆಗಳು ಮತ್ತು ಅಮೆಸ್ಟಿ ಇಂಟರ್ನ್ಯಾಶನಲ್ ಸಂಸ್ಥೆ ವಿರೋಧಿಸಿದ್ದು, ಇದು ಮಹಿಳೆಯರ ಹಕ್ಕುಗಳನ್ನು ಉಲ್ಲಂಘಿಸುವ ಡೇಂಜರಸ್ ಕಾನೂನು. ಜನರ ಅಭಿಪ್ರಾಯ ಸ್ವಾತಂತ್ರ್ಯ ಮತ್ತು ಧಾರ್ಮಿಕ ಹಕ್ಕನ್ನು ಉಲ್ಲಂಘನೆ ಮಾಡುತ್ತದೆ ಎಂದು ತಿಳಿಸಿದೆ.
ಸ್ವಿಜರ್ಲ್ಯಾಂಡ್ ನಲ್ಲಿ ಪ್ರಜಾಪ್ರಭುತ್ವ ಸರಕಾರ ಇದ್ದರೂ, ಇಂಥ ವಿವಾದಾತ್ಮಕ ವಿಚಾರಗಳ ಬಗ್ಗೆ ಜನರಿಂದಲೇ ನಿರ್ಧಾರ ಪಡೆಯುವ ಪದ್ಧತಿ ಇದೆ. ಬುರ್ಖಾ ನಿಷೇಧ ಬಗ್ಗೆ ಪರವಾಗಿ ಜನಾದೇಶ ಬಂದಿರುವುದರಿಂದ 2023ರ ಸೆಪ್ಟೆಂಬರ್ ನಲ್ಲಿ ಸ್ವಿಸ್ ಸಂಸತ್ತು ನಿರ್ಣಯ ಅಂಗೀಕರಿಸಿತ್ತು. 2024ರ ನವೆಂಬರ್ ನಲ್ಲಿ ಈ ಕಾಯ್ದೆ 2025ರ ಜನವರಿಯಿಂದ ಚಾಲ್ತಿಗೆ ಬರಲಿದೆ ಎಂದು ಸರಕಾರ ಹೇಳಿತ್ತು. ಈ ಕಾಯ್ದೆ ಪ್ರಕಾರ, ಸಾರ್ವಜನಿಕ ಪ್ರದೇಶ ಮತ್ತು ಜನರು ಭಾಗವಹಿಸುವ ಖಾಸಗಿ ಕಟ್ಟಡ ಇನ್ನಿತರ ಪ್ರದೇಶಗಳಲ್ಲಿ ಕಣ್ಣು, ಮೂಗು, ಬಾಯಿ ಮುಚ್ಚಿ ಕೊಳ್ಳುವುದು ಅಪರಾಧವಾಗುತ್ತದೆ. ಆದರೆ ಧಾರ್ಮಿಕ ಸ್ಥಳಗಳಲ್ಲಿ, ವಿಮಾನ ಪ್ರಯಾಣ ಅಥವಾ ಹವಾಮಾನ ವೈಪರೀತ್ಯ ಸಂದರ್ಭಗಳಲ್ಲಿ ಬುರ್ಖಾ ಅಥವಾ ಮುಖ ಮುಚ್ಚಿಕೊಳ್ಳಲು ಅವಕಾಶ ನೀಡಲಾಗಿದೆ.
Post a Comment