ರಮೇಶ್ ಜಾರಕಿಹೊಳಿ ಅವರು ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರಗೆ ಬಚ್ಚಾ ಎಂಬ ಪದ ಬಳಕೆ ಮಾಡಿರುವುದು ತಪ್ಪು, ಅವರ ಪದ ಬಳಕೆಯನ್ನು ಒಪ್ಪಲಾಗದು.
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ‘ಬಚ್ಚಾ’ (ಮಗು) ಎಂದು ಕರೆದಿದ್ದ ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿ ಅವರನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಕಟುವಾಗಿ ಟೀಕಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಅವರು ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರಗೆ ಬಚ್ಚಾ ಎಂಬ ಪದ ಬಳಕೆ ಮಾಡಿರುವುದು ತಪ್ಪು, ಅವರ ಪದ ಬಳಕೆಯನ್ನು ಒಪ್ಪಲಾಗದು ಎಂದು ಹೇಳಿದರು.
ವಿಜಯೇಂದ್ರ ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದು, ಆ ನಿರ್ಧಾರವನ್ನು ಎಲ್ಲರೂ ಗೌರವಿಸಬೇಕು. ಇದನ್ನು ಯಾರೂ ಮರೆಯಬಾರದು. ಶಾಸಕರೊಬ್ಬರು ಈ ರೀತಿ ಮಾತನಾಡಿರುವುದು ತಪ್ಪು. ಇದನ್ನು ಒಪ್ಪಲಾಗದು ಎಂದು ತಿಳಿಸಿದರು.
ನಿನ್ನೆಯಷ್ಟೇ ಹೇಳಿಕೆ ನೀಡಿದ್ದ ರಮೇಶ್ ಜಾರಕಿಹೊಳಿಯವರು, ವಿಜಯೇಂದ್ರ ನನ್ನ ಬಗ್ಗೆ ಹಗುರವಾಗಿ ಮಾತನಾಡಿದ್ದಾನೆ. ಅವನಿಗೆ ನಾನು ಎಚ್ಚರಿಕೆ ಕೊಡುತ್ತೇನೆ. ನೀನು ಇನ್ನೂ ಬಚ್ಚಾ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷನಾಗಲು ಯೋಗ್ಯನಲ್ಲ ಎಂದು ಹೇಳಿದ್ದರು.
ನಾನು ನಿಮ್ಮ ಅಪ್ಪನನ್ನು ಮುಖ್ಯಮಂತ್ರಿ ಮಾಡುವ ಸಲುವಾಗಿ ಬಿಜೆಪಿಗೆ ಬಂದಿದ್ದೇನೆ ವಿಜಯೇಂದ್ರ. ನನ್ನ ಕ್ಷೇತ್ರದ ಜನ ನನ್ನೊಂದಿಗೆ ಗಟ್ಟಿಯಾಗಿ ನಿಂತಿದ್ದಾರೆ. ಯಾರ ಭಯವೂ ಇಲ್ಲ. ನನಗೆ ಯಡಿಯೂರಪ್ಪ ಬಗ್ಗೆ ಅಪಾರ ಗೌರವವಿದೆ. ಈಗಲೂ ಅವರೇ ನಮ್ಮ ನಾಯಕ. ಆದರೆ, ನಾಯಕನಾಗುವ ಯೋಗ್ಯತೆ ವಿಜಯೇಂದ್ರಗೆ ಇಲ್ಲ. ಅದಕ್ಕಾಗಿಯೇ ಅವನನ್ನು ಕೆಳಗಿಳಿಸಲು ಹೋರಾಡುತ್ತಿದ್ದೇವೆ ಎಂದು ಏಕವಚನದಲ್ಲೇ ಮಾತಾಡಿದ್ದರು.
ಯಡಿಯೂರಪ್ಪ ವಿರುದ್ಧ ಮಾತನಾಡಿದರೆ ರಾಜ್ಯದಲ್ಲಿ ಓಡಾಡುವುದು ಕಷ್ಟವಾಗುತ್ತದೆ’ ಎಂದು ವಿಜಯೇಂದ್ರ ಹೇಳಿದ್ದಾನೆ. ನಾನು ನೇರಾನೇರ ‘ಚಾಲೇಂಜ್’ ಮಾಡುತ್ತಿದ್ದೇನೆ. ವಿಜಯೇಂದ್ರ ನೀನು ದಿನಾಂಕ ‘ಫಿಕ್ಸ್’ ಮಾಡಿ ಹೇಳು. ಶಿಕಾರಿಪುರದಲ್ಲೇ ಪ್ರವಾಸ ಮಾಡುತ್ತೇನೆ. ನಾನು ರಕ್ಷಣೆಗೆ ಪೊಲೀಸ್ ಪಡೆ ಅಥವಾ ಗನ್ ತರುವುದಿಲ್ಲ. ಒಬ್ಬನೇ ಬರುತ್ತೇನೆ. ಆ ತಾಕತ್ತು ನನಗಿದೆ. ಆದರೆ, ನಿನ್ನನ್ನು ರಾಜ್ಯದಲ್ಲಿ ಓಡಾಡದ ಹಾಗೆ ಮಾಡುವ ತಾಕತ್ತನ್ನೂ ದೇವರು ನನಗೆ ಕೊಟ್ಟಿದ್ದಾನೆ. ಯಡಿಯೂರಪ್ಪ ಅವರಿಗೂ ನಾನು ಹೇಳುವುದು ಒಂದೇ, ವಿಜಯೇಂದ್ರನ ಬೆನ್ನು ಹತ್ತಿ ಹಾಳಾಗುತ್ತಿದ್ದೀರಿ. ಬಿಜೆಪಿ ರಾಜ್ಯ ಘಟಕಕ್ಕೆ ಒಳ್ಳೆಯ ಅಧ್ಯಕ್ಷ ಬರಲು ಅವಕಾಶ ಕೊಡಿ. ಅವರಿಗೆ ಮಾರ್ಗದರ್ಶನ ಮಾಡಿ. ನಿಮ್ಮಿಂದ ಪಕ್ಷಕ್ಕೆ ಒಳ್ಳೆಯದಾಗಿದೆ. ಆದರೆ, ನೀವು ಪಕ್ಷದಿಂದ ಸಾವಿರಪಟ್ಟು ಲಾಭ ಪಡೆದಿದ್ದೀರಿ ಎಂದು ಹೇಳಿದ್ದರು.
Post a Comment