ಪ್ರಯಾಗರಾಜ್: ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಮಹಾ ಕುಂಭ ಮೇಳವನ್ನು ಆಯೋಜಿಸಲಾಗಿದೆ. ಇಂದಿನಿಂದ ಮಹಾ ಕುಂಭ ಮೇಳ ಪ್ರಾರಂಭವಾಗಿದೆ. ನಾಗ ಸಾಧುಗಳು ಸನಾತನ ಧರ್ಮದ ವೈಶಿಷ್ಟ್ಯ ಮತ್ತು ಅತ್ಯಂತ ತಪಸ್ವಿ ಸಂಪ್ರದಾಯದ ಭಾಗವಾಗಿದ್ದು, ಅವರು ಮಹಾ ಕುಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ನಾಗ ಸಾಧುಗಳ ನಿಗೂಢ ಜೀವನದಿಂದಾಗಿ ಅವರನ್ನು ಸಾಮಾಜಿಕವಾಗಿ ಕುಂಭಮೇಳದಲ್ಲಿ ಮಾತ್ರ ಕಾಣಲು ಸಾಧ್ಯ. ಅವರು ಕುಂಭಮೇಳಕ್ಕೆ ಎಲ್ಲಿಂದ ಬರುತ್ತಾರೆ? ಮತ್ತು ಎಲ್ಲಿಗೆ ಹೋಗುತ್ತಾರೆ? ಎಂಬುದು ಯಾರಿಗೂ ತಿಳಿದಿಲ್ಲ. ಮಹಾ ಕುಂಭದ ಸಮಯದಲ್ಲಿ ನಾಗ ಸಾಧುಗಳು ಆಕರ್ಷಣೆಯ ಕೇಂದ್ರವಾಗಿದ್ದಾರೆ. ಇಲ್ಲಿ ಹೆಚ್ಚಿನ ಸಂಖ್ಯೆಯ ನಾಗ ಸಾಧುಗಳು ಕಂಡುಬರುತ್ತಾರೆ. ಆದರೆ, ಮಹಾಕುಂಭದ ನಂತರ ಈ ನಾಗ ಸಾಧುಗಳು ಎಲ್ಲಿಯೂ ಕಂಡುಬರುವುದಿಲ್ಲ. ಇದಾದ ನಂತರ ಅವರು ಎಲ್ಲಿ ಕಣ್ಮರೆಯಾಗುತ್ತಾರೆ ಎಂಬುದು ನಿಮಗೆ ಗೊತ್ತಾ? ವಿಶೇಷವೆಂದರೆ, ಲಕ್ಷಾಂತರ ನಾಗಾ ಸಾಧುಗಳು ಯಾವುದೇ ವಾಹನವನ್ನು ಬಳಸದೆ ಮತ್ತು ಜನರ ಕಣ್ಣಿಗೆ ಬೀಳದೆ ಈ ಮಹಾ ಕುಂಭವನ್ನು ತಲುಪುತ್ತಾರೆ. ಅವರು ಹಿಮಾಲಯದಲ್ಲಿ ವಾಸಿಸುತ್ತಾರೆ ಮತ್ತು ಕುಂಭಮೇಳದ ಸಮಯದಲ್ಲಿ ಮಾತ್ರ ಸಾಮಾನ್ಯ ಜನರಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ನಂಬಲಾಗಿದೆ. ನಾಗ ಸಾಧುಗಳು ಹೆಚ್ಚಾಗಿ ತ್ರಿಶೂಲಗಳನ್ನು ಹೊತ್ತುಕೊಂಡು ತಮ್ಮ ದೇಹವನ್ನು ಬೂದಿಯಿಂದ ಮುಚ್ಚಿಕೊಳ್ಳುತ್ತಾರೆ. ಅವರು ರುದ್ರಾಕ್ಷಿ ಮಣಿಗಳು ಮತ್ತು ಪ್ರಾಣಿಗಳ ಚರ್ಮದಿಂದ ಮಾಡಿದ ಬಟ್ಟೆಗಳನ್ನು ಧರಿಸುತ್ತಾರೆ. ಕುಂಭಮೇಳದಲ್ಲಿ ಮೊದಲು ಸ್ನಾನ ಮಾಡುವ ಹಕ್ಕು ಅವರಿಗೆ ಇದೆ. ಅದರ ನಂತರವೇ ಉಳಿದ ಭಕ್ತರಿಗೆ ಸ್ನಾನ ಮಾಡಲು ಅವಕಾಶವಿರುತ್ತದೆ. ಆದರೆ, ಈ ಮಹಾಕುಂಭದ ನಂತರ ಎಲ್ಲರೂ ತಮ್ಮ ನಿಗೂಢ ಲೋಕಗಳಿಗೆ ಮರಳುತ್ತಾರೆ. ಕುಂಭಮೇಳದ ಸಮಯದಲ್ಲಿ ನಾಗ ಸಾಧುಗಳು ತಮ್ಮ ಅಖಾಡಗಳನ್ನು ಪ್ರತಿನಿಧಿಸುತ್ತಾರೆ. ಕುಂಭದ ನಂತರ, ಅವರು ತಮ್ಮ ತಮ್ಮ ಅಖಾಡಗಳಿಗೆ ಹಿಂತಿರುಗುತ್ತಾರೆ. ಅಖಾಡಗಳು ಭಾರತದ ವಿವಿಧ ಭಾಗಗಳಲ್ಲಿವೆ. ಈ ಸಾಧುಗಳು ಅಲ್ಲಿ ಧ್ಯಾನ, ಸಾಧನ ಮತ್ತು ಧಾರ್ಮಿಕ ಶಿಕ್ಷಣವನ್ನು ಒದಗಿಸುತ್ತಾರೆ. ನಾಗ ಸಾಧುಗಳು ತಮ್ಮ ತಪಸ್ವಿ ಜೀವನಶೈಲಿಗೆ ಹೆಸರುವಾಸಿಯಾಗಿದ್ದಾರೆ. ಕುಂಭದ ನಂತರ, ಅನೇಕ ನಾಗ ಸಾಧುಗಳು ಧ್ಯಾನ ಮತ್ತು ತಪಸ್ಸಿಗಾಗಿ ಹಿಮಾಲಯ, ಕಾಡುಗಳು ಮತ್ತು ಇತರ ಶಾಂತ ಮತ್ತು ಏಕಾಂತ ಸ್ಥಳಗಳಿಗೆ ಹೋಗುತ್ತಾರೆ. ಅವರು ಕಠಿಣ ತಪಸ್ಸು ಮತ್ತು ಧ್ಯಾನದಲ್ಲಿ ಸಮಯವನ್ನು ಕಳೆಯುತ್ತಾರೆ. ಕುಂಭಮೇಳ ಅಥವಾ ಇತರ ಧಾರ್ಮಿಕ ಕಾರ್ಯಕ್ರಮಗಳು ನಡೆದಾಗ ಮಾತ್ರ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆ.
Post a Comment