2007ರಲ್ಲಿ ಸೋನಿಯಾ ಗಾಂಧಿ ಅವರು ಈ ದೇಶದ ಪ್ರಧಾನಿಯಾಗಬೇಕಿತ್ತು. ಆದರೆ ಅವರು ಪ್ರಧಾನಿಯಾಗಲಿಲ್ಲ ತ್ಯಾಗ ಮಾಡಿದರು. ಅವರಂತೆ ತ್ಯಾಗ ಮಾಡಲು ಸಾಧ್ಯನಾ?
ಬೆಳಗಾವಿ: ರಾಜ್ಯ ಕಾಂಗ್ರೆಸ್ ನಲ್ಲಿ ತ್ಯಾಗದ ಮಾತು ಭಾರಿ ಸದ್ದು ಮಾಡುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನಂತರ ಇದೀಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜು ಖರ್ಗೆ ಅವರು ಸಹ ಮಂಗಳವಾರ ತ್ಯಾಗದ ಬಗ್ಗೆ ಮಾತನಾಡಿದ್ದು, ಕೈ ಪಾಳೆಯದಲ್ಲಿ ಸಂಚಲನ ಸೃಷ್ಟಿಸಿದೆ.
2007ರಲ್ಲಿ ಸೋನಿಯಾ ಗಾಂಧಿ ಅವರು ಈ ದೇಶದ ಪ್ರಧಾನಿಯಾಗಬೇಕಿತ್ತು. ಆದರೆ ಅವರು ಪ್ರಧಾನಿಯಾಗಲಿಲ್ಲ ತ್ಯಾಗ ಮಾಡಿದರು. ಅವರಂತೆ ತ್ಯಾಗ ಮಾಡಲು ಸಾಧ್ಯನಾ? ಅದೇ ರೀತಿ ನಾವು ತ್ಯಾಗ ಮಾಡಲು ಸಿದ್ದರಿದ್ದೇವೆಯೇ ಎಂದು ಯೋಚಿಸಬೇಕು ಎಂದು ಖರ್ಗೆ ಅವರು ರಾಜ್ಯ ಕಾಂಗ್ರೆಸ್ ನಾಯಕರಿಗೆ ಸಂದೇಶ ರವಾನಿಸಿದ್ದಾರೆ.
1924ರಲ್ಲಿ ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧೀವೇಶನದ ತಮಾನೋತ್ಸವದ ಸವಿನೆನಪಿಗಾಗಿ ಇಂದು ಸುವರ್ಣ ವಿಧಾನಸೌಧದ ಆವರಣದಲ್ಲಿ ಮಹಾತ್ಮಾ ಗಾಂಧೀಜಿಯ ಬೃಹತ್ ಪ್ರತಿಮೆ ಅನಾವರಣಗೊಳಿಸಿ ಖರ್ಗೆ ಮಾತನಾಡಿದರು.
ಇದು ಹೊಸ ವರ್ಷದ ಶುಭಾರಂಭ, ಜೈಬಾಪು, ಜೈಭೀಮ್, ಜೈಸಂವಿಧಾದ ರ್ಯಾಲಿ ಮಾಡುತ್ತಿದ್ದೇವೆ. ಕಳೆದ ಡಿಸೆಂಬರ್ 26 ರಂದೆ ಈ ಕಾರ್ಯಕ್ರಮ ನಡೆಯಬೇಕಿತ್ತು. ಆದರೆ ಡಾ ಮನಮೋಹನ್ ಸಿಂಗ್ ನಿಧನದಿಂದ ಕಾರ್ಯಕ್ರಮ ಮುಂದುಡಿದ್ದೆವು. ಡಾ. ಮನಮೋಹನ್ ಸಿಂಗ್‌ರಿಗೆ ಇಡೀ ದೇಶ ಶ್ರದ್ಧಾಂಜಲಿ ಸಲ್ಲಿಸಿತು. ಅವರ ಕೊಡುಗೆಯನ್ನ ಕೊಂಡಾಡಿತು ಎಂದು ಹೇಳಿದರು.
ಮನಮೋಹನ್ ಸಿಂಗ್ ಒಬ್ಬ ಆರ್ಥಿಕ ತಜ್ಞ, 2007ರಲ್ಲಿ ಸೋನಿಯಾ ಗಾಂಧಿ ಪ್ರಧಾನಿಯಾಗಬೇಕಿತ್ತು. ಅವರು ಪ್ರಧಾನಿಯಾಗಲಿಲ್ಲ ತ್ಯಾಗ ಮಾಡಿದರು ಒಬ್ಬ ಆರ್ಥಿಕ ತಜ್ಞನಿಗೆ ಆ ಸ್ಥಾನದಲ್ಲಿ ಕೂರಿಸಿದರು. ಈ ದೇಶಕ್ಕೆ ಇಂದಿರಾ ಗಾಂಧಿ ರಾಜೀವ್ ಗಾಂಧಿ, ಸೋನಿಯಾ ಗಾಂಧಿ ತ್ಯಾಗ ಮಾಡಿದ್ದಾರೆ. ಅದೇ ರೀತಿ ನಾವು ತ್ಯಾಗ ಮಾಡಲು ಸಿದ್ದರಿದ್ದೇವೆಯೇ ಎಂದು ಯೋಚಿಸಬೇಕು ಎಂದರು.
ಬೆಳಗಾವಿ ಕಿತ್ತೂರು ರಾಣಿ ಜನ್ಮ ಭೂಮಿ, ದೇಶದ ಸ್ವಾಭಿಮಾನಕ್ಕಾಗಿ ಹೋರಾಟ ಮಾಡಿದರು. ಬಿಜೆಪಿ ಮತ್ತು RSS ವಿರುದ್ಧ ಹೋರಾಟ ಮಾಡುವ ಶಕ್ತಿ ಯಾರಿಗಾದರೂ ಇದ್ದರೆ ಅದು ಪ್ರಿಯಾಂಕಾ ಗಾಂಧಿಗೆ ಮಾತ್ರ. ಪ್ರಿಯಾಂಕಾ ಗಾಂಧಿ ಯಾರಿಗೂ ಹೆದರಲ್ಲ. ಅವರು 'ಸ್ತ್ರೀ ಶಕ್ತಿ'ಯನ್ನು ಪ್ರತಿನಿಧಿಸುತ್ತಾರೆ ಎಂದ ಖರ್ಗೆ, ಅವರನ್ನು ಬ್ರಿಟಿಷರ ವಿರುದ್ಧ ಹೋರಾಡಿದ ಐಕಾನ್‌ಗಳಾದ ಕಿತ್ತೂರು ರಾಣಿ ಚೆನ್ನಮ್ಮ ಮತ್ತು 'ಝಾನ್ಸಿ ಕಿ ರಾಣಿ'ಗೆ ಹೋಲಿಸಿದರು.
ಇನ್ನು ರಾಹುಲ್ ಗಾಂಧಿ 'ಯುವ ಶಕ್ತಿ'ಯ ಸಂಕೇತವೆಂದು ಶ್ಲಾಘಿಸಿದ ಖರ್ಗೆ, "ನಮ್ಮಲ್ಲಿ ಪ್ರಿಯಾಂಕಾ ಗಾಂಧಿಯಲ್ಲಿ ಸ್ತ್ರೀ ಶಕ್ತಿ ಮತ್ತು ರಾಹುಲ್ ಗಾಂಧಿಯಲ್ಲಿ ಯುವ ಶಕ್ತಿ ಇದೆ" ಎಂದು ಹೇಳಿದರು.
ರಾಜ್ಯಸಭೆಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರನ್ನು "ಅವಮಾನಿಸಿದ್ದಕ್ಕಾಗಿ" ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ ಖರ್ಗೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಗಾಂಧಿಯ ಬಗ್ಗೆ ಗೌರವ ತೋರಿಸಿದರೂ, ಅವರು ವಾಸ್ತವವಾಗಿ ಗೋಡ್ಸೆಯನ್ನು ಪೂಜಿಸುತ್ತಾರೆ ಎಂದು ಆರೋಪಿಸಿದರು.
ಗಾಂಧಿಯನ್ನು ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆ ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಅವರ ಶಿಷ್ಯ. ನೆಹರು, ಗಾಂಧಿ, ಅಂಬೇಡ್ಕರ್ ಮಧ್ಯೆ ಇರುವ ವ್ಯತ್ಯಾಸವನ್ನ ಹೇಳಿ ಇವರು ಆಟ ಆಡಿಸ್ತಾರೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.
ಬಿಜೆಪಿ ಇಂದು ಅಂಬೇಡ್ಕರ್ ಹೆಸರನ್ನು ಜಪಿಸುವ ಮತ್ತು ಸಂವಿಧಾನದ ಮುಂದೆ ತಲೆಬಾಗುವ ನಾಟಕವಾಡುತ್ತಿದೆ.
ಸಂವಿಧಾನ ಸುಟ್ಟವರು, ಬಾಬಾ ಸಾಹೇಬರ ಪುತ್ಥಳಿ ಸುಟ್ಟವರು, ಪಂಡಿತ್ ಜವಾಹರ ಲಾಲ್ ನೆಹರು ಅವರ ಪುತ್ಥಳಿ ಸುಟ್ಟವರು ಯಾರಾದರೂ ಇದ್ದರೆ, ಅದು ಬಿಜೆಪಿಯವರು, ಆರ್.ಎಸ್.ಎಸ್ ನವರು, ಹಿಂದೂ ಮಹಾಸಭಾದವರು, ಇದನ್ನು ಎಲ್ಲಿ ಬೇಕಾದರೂ ನಿರೂಪಿಸುತ್ತೇನೆ. ಇವೆಲ್ಲವೂ ಇತಿಹಾಸದಲ್ಲಿವೆ. ಅಂಬೇಡ್ಕರ್ ಅವರ ವಿಚಾರದಲ್ಲಿ ನಮ್ಮ ನಮ್ಮ ನಡುವೆಯೇ ಜಗಳ ಹಚ್ಚಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
Post a Comment