ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರು ನಕ್ಸಲ್ ಶರಣಾಗತಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಮಂಗಳೂರು (ದಕ್ಷಿಣ ಕನ್ನಡ) : ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ನಕ್ಸಲ್ ಶರಣಾಗತಿ, ಎನ್‌ಕೌಂಟರ್ ಬಗ್ಗೆ ಅನುಮಾನ ಮೂಡುತ್ತಿದೆ. ಇಲ್ಲಿ ರಾಜಕೀಯ ಮೈಲೇಜ್ ಪಡೆಯಲು ಶರಣಾಗತಿ ಪ್ರಕ್ರಿಯೆ ನಡೆಸಲಾಗಿದೆ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಆಪಾದಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ನಕ್ಸಲ್ ಶರಣಾಗತಿ ನಿಯಮ ಬಹಳ ದೊಡ್ಡಮಟ್ಟದ ಪ್ರಕ್ರಿಯೆ. ಶರಣಾಗತಿ ಸಂದರ್ಭದಲ್ಲಿ ಕೆಲವೊಂದು ನಿಯಮಗಳಿರುತ್ತವೆ. ಆದರೆ, ಕರ್ನಾಟಕದಲ್ಲಿ ಮೊನ್ನೆ ನಡೆದ ನಕ್ಸಲ್ ಶರಣಾಗತಿ ಸ್ವಲ್ಪ ಅನುಮಾನ ಮೂಡಿಸುತ್ತಿದೆ. ನಕ್ಸಲ್ ಮುಖಂಡ ವಿಕ್ರಮ್ ಗೌಡನ ಎನ್‌ಕೌಂಟರ್‌ನಲ್ಲೂ ಅನುಮಾನವಿದೆ. ಎನ್‌ಕೌಂಟರ್ ಆದ ತಕ್ಷಣ ನಕ್ಸಲ್ ಶರಣಾದರು ಎಂದು ಸರ್ಕಾರ ಹೇಳುತ್ತಿದೆ. ನಕ್ಸಲರು ಶರಣಾಗುವಂತೆ ಯಾರು ಮಾತುಕತೆ ನಡೆಸಿದರು ಎಂಬುದು ಗೊತ್ತಿಲ್ಲ. ನಕ್ಸಲ್ ತಂಡದೊಳಗಡೆ ಇರುವ ಆಂತರಿಕ ರಾಜಕೀಯವನ್ನು ಕಾಂಗ್ರೆಸ್ ದುರ್ಬಳಕೆ ಮಾಡುತ್ತಿದೆಯೇ? ಎಂಬ ಅನುಮಾನ ಮೂಡುತ್ತಿದೆ ಎಂದು ಅವರು ಹೇಳಿದರು.
ನಕ್ಸಲರು ಶರಣಾದಾಗ ಜನರಿಗೆ ವಿಶ್ವಾಸ ಬರಬೇಕು. ನಕ್ಸಲರ ಶರಣಾಗತಿಯ ಬಗ್ಗೆ ಜನರಿಗೆ ವಿಶ್ವಾಸವಿಲ್ಲ. ಶರಣಾಗತಿಯ ಬಗ್ಗೆ ಗೃಹಸಚಿವರೇ ಮಾಹಿತಿಯ ಕೊರತೆಯಿದ್ದ ಹಾಗೆ ಉಲ್ಟಾ-ಪಲ್ಟಾ ಮಾತನಾಡುತ್ತಾರೆ. ಶರಣಾದ ನಕ್ಸಲರು ನಾಗರಿಕ ಸಮಾಜದ ಮೇಲೆ ಪ್ರಭಾವ ಬೀರುವ ಅಪಾಯವಿದೆ ಎಂದು ಹೇಳಿದರು.
ಹಿಂದಿ ಮಾತ್ರವಲ್ಲ, ಭಾರತದ ಎಲ್ಲಾ ಭಾಷೆಗಳು ರಾಷ್ಟ್ರಭಾಷೆಗಳು - ಮಾಜಿ ಕ್ರಿಕೆಟಿಗ ಆರ್. ಅಶ್ವಿನ್ ಅವರು ಹಿಂದಿ ರಾಷ್ಟ್ರಭಾಷೆಯಲ್ಲ ಎಂಬ ಹೇಳಿಕೆಯ ವಿಚಾರದಲ್ಲಿ ಮಾತನಾಡಿದ ಅವರು, ಹಿಂದಿಭಾಷೆ ಭಾರತದ ಒಂದು ಅಫಿಶಿಯಲ್ ಲ್ಯಾಂಗ್ವೇಜ್. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾರತದ ಎಲ್ಲಾ ಭಾಷೆಯೂ ರಾಷ್ಟ್ರೀಯ ಭಾಷೆ ಎಂದು ಬಹಳಷ್ಟು ಕಡೆ ಹೇಳಿದ್ದಾರೆ. ಬಿಜೆಪಿ ಸರ್ಕಾರದ ಪ್ರಕಾರ ಎಲ್ಲಾ ಭಾಷೆಯು ರಾಷ್ಟ್ರೀಯ ಭಾಷೆ. ಪ್ರಧಾನಿ ಕನ್ನಡ, ತಮಿಳು ಭಾಷೆಗಳಿಗೆ ಬಹಳ ಮರ್ಯಾದೆ ಕೊಡುತ್ತಾರೆ ಎಂದರು.
ಅಶ್ವಿನ್ ಒಂದು ದೃಷ್ಟಿಕೋನದಲ್ಲಿ ಹೇಳಿದ್ದಾರೆ. ಎಲ್ಲಿ ಕೂಡಾ ಹಿಂದಿ ರಾಷ್ಟ್ರೀಯ ಭಾಷೆಯಲ್ಲ, ಎಲ್ಲಾ ಭಾಷೆಗಳೂ ರಾಷ್ಟ್ರೀಯ ಭಾಷೆ. ಆ ಅರ್ಥದಲ್ಲಿ ಅಶ್ವಿನ್ ಹೇಳಿದ್ದಾರೆ ಅಷ್ಟೇ, ಬೇರೇನೂ ವಿಚಾರವಿಲ್ಲ ಎಂದು ಹೇಳಿದರು.
Post a Comment