ಹೈಕಮಾಂಡ್ ಹೇಳಿದರೆ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂದು ಸಚಿವ ಆರ್.ಬಿ. ತಿಮ್ಮಾಪುರ ಹೇಳಿದ್ದಾರೆ.
ಹುಬ್ಬಳ್ಳಿ: ಕಾಂಗ್ರೆಸ್ನಲ್ಲಿ ಸಿಎಂ ಕುರ್ಚಿಗಾಗಿ ಕಿತ್ತಾಟ ಜೋರಾಗಿದ್ದು, ನಾಯಕರು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ. ಇದರಿಂದ ಪಕ್ಷಕ್ಕೆ ಆಗುತ್ತಿರುವ ಮುಜುಗರ ತಡೆಯಲು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ನೇತೃತ್ವದಲ್ಲಿ ಸೋಮವಾರ ಸಭೆ ನಡೆಯಿತು. ಸಭೆಯಲ್ಲಿ ಸುರ್ಜೇವಾಲಾ, ಎಲ್ಲರೂ ಶಿಸ್ತು ಅನುಸರಿಸಬೇಕು. ಯಾರೂ ಶಿಸ್ತು ಉಲ್ಲಂಘಿಸುವಂತಿಲ್ಲ ಎಂದು ಖಡಕ್ ಸೂಚನೆಯನ್ನು ಕೊಟ್ಟಿದ್ದರು. ಇಷ್ಟಾದರೂ ಸಚಿವ ಆರ್.ಬಿ. ತಿಮ್ಮಾಪುರ, ನಾನು ದಲಿತ, ನಾನೇಕೆ ಮುಖ್ಯಮಂತ್ರಿಯಾಗಬಾರದು? ಎಂದು ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ದಲಿತರು ಯಾಕೆ ಸಿಎಂ ಆಗಬಾರದು?. ಮುಖ್ಯಮಂತ್ರಿ ಮಾಡಿದರೆ ಯಾರು ಬೇಡ ಅಂತಾರೆ. ನನಗೆ ಅಷ್ಟು ಶಕ್ತಿ ಇದೆಯೋ ಇಲ್ವೋ, ಸಿಎಲ್‌ಪಿ ಅಲ್ಲಿ ನನ್ನ ಒಪ್ಪುತ್ತಾರೋ ಇಲ್ವೋ. ಇವೆಲ್ಲವೂ ಪರಿಗಣನೆಗೆ ಬರುತ್ತದೆ. ಹೈಕಮಾಂಡ್ ಹೇಳಿದರೆ ನಾನೇ ಮುಖ್ಯಮಂತ್ರಿ ಆಗುತ್ತೇನೆ" ಎಂದು ಹೇಳಿದರು.
"ನಾನು ದಲಿತ , ನಾನು ಯಾಕೆ ಆಗಬಾರದು?. ದಲಿತರೂ ಸಿಎಂ ಆಗಬೇಕು, ಮತ್ತೊಬ್ಬರೂ ಸಿಎಂ ಆಗಬೇಕು. ಆದರೆ ಇದ್ಯಾವುದೂ ಬೆಳವಣಿಗೆ ಸದ್ಯಕ್ಕೆ ಇಲ್ಲ. ಸಿಎಲ್‌ಪಿಯಲ್ಲಿ ಎಲ್ಲವೂ ತೀರ್ಮಾನ ಆಗಬೇಕು. ಐದು ವರ್ಷ ಕಾಂಗ್ರೆಸ್ ಅಧಿಕಾರದಲ್ಲಿರುತ್ತೆ. ನಮ್ಮಲ್ಲಿ ಅಂತಹದ್ದೇನೂ ಇಲ್ಲ ಎಂದ ಅವರು, ದಲಿತ ಶಾಸಕರ ಡಿನ್ನರ್ ಸಭೆ ರದ್ದಾಗಿಲ್ಲ, ಮುಂದೂಡಿದ್ದೇವೆ" ಎಂದು ತಿಳಿಸಿದರು.
ಹಸುಗಳ ಕೆಚ್ಚಲು ಕೊಯ್ದಿದ್ದನ್ನು ವಿರೋಧಿಸಿ ಬಿಜೆಪಿಯವರು ಪ್ರತಿಭಟನೆಗೆ ಮುಂದಾಗಿರುವ ವಿಚಾರವಾಗಿ ಮಾತನಾಡಿದ ಅವರು, "ದಲಿತರ ಕೊಲೆಯಾಗುತ್ತದೆ. ಆಗ ಯಾರಾದರೂ ಪ್ರತಿಭಟನೆ ಮಾಡಿದ್ದಾರಾ?. ದುಷ್ಟರನ್ನು ಬಲಿ ಹಾಕುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಆದರೆ ಇದರಲ್ಲಿ ರಾಜಕೀಯ ಮಾಡಲಾಗುತ್ತಿದೆ" ಎಂದರು.
ಉತ್ತರ ಕರ್ನಾಟಕದವರು ಸಿಎಂ ಆದ್ರೆ ಸ್ವಾಗತ - ಎಸ್.ಆರ್. ಪಾಟೀಲ್: ಮತ್ತೊಂದೆಡೆ, ಕಾಂಗ್ರೆಸ್ ಹಿರಿಯ ಮುಖಂಡ ಎಸ್.ಆರ್. ಪಾಟೀಲ್ ಮಾತನಾಡಿ, "ಉತ್ತರ ಕರ್ನಾಟಕದವರು ಮುಖ್ಯಮಂತ್ರಿಯಾದರೆ ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಪ್ರತಿಯೊಬ್ಬ ಶಾಸಕರಿಗೂ ಮಂತ್ರಿ ಸ್ಥಾನದ ಬಗ್ಗೆ ಆಸೆ ಇರುತ್ತದೆ. ಯಾರು ಕೂಡ ಸನ್ಯಾಸಿಗಳಲ್ಲ. ಅವಕಾಶ ಮಾಡಿಕೊಡಿ ಅಂತ ಸಹಜವಾಗಿ ಎಲ್ಲರೂ ಕೇಳುತ್ತಾರೆ" ಎಂದು ಹೇಳಿದರು.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ್ ಬಹಿರಂಗವಾಗಿ ಹೇಳಿಕೆ ನೀಡಬೇಡಿ ಎಂದಿರುವ ಬಗ್ಗೆ ಪ್ರತಿಕ್ರಿಯಿಸಿ, "ಪಕ್ಷದ ಶಿಸ್ತು ಉಲ್ಲಂಘನೆ ಆದ್ರೆ ಪಕ್ಷ ಶಿಥಿಲ ಆದಂತಾಗುತ್ತೆ. ಹೀಗಾಗಿ ಮಾಧ್ಯಮದ ಎದುರು ಹೋಗಬೇಡಿ ಅಂದಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ತಮ್ಮ ವಿಚಾರಗಳನ್ನು ಹೇಳಬಹುದಲ್ಲ, ಅದರ ಬದಲು ಮಾಧ್ಯಮಗಳ ಮುಂದೆ ಹೋಗಿ ಹೇಳಿದ್ರೆ ಸಮಸ್ಯೆ ಬಗೆ ಹರಿಯೋದಿಲ್ಲ. ಆ ದೃಷ್ಟಿಯಿಂದ ಸುಜೇವಾಲಾ ಅವರು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ" ಎಂದರು.
ಅಧಿಕಾರ ಹಂಚಿಕೆ ವಿಚಾರವಾಗಿ ಮಾತನಾಡಿ, "ರಾಜಕೀಯದಲ್ಲಿ ಕಾರ್ಯಕರ್ತರು ಶಾಸಕರಾಗಬೇಕು ಅಂತಾರೆ. ಶಾಸಕರು ಮಂತ್ರಿ ಆಗಬೇಕು, ಮಂತ್ರಿಗಳು ಸಿಎಂ ಆಗಬೇಕು ಅಂತಾರೆ. ಇದು ನ್ಯಾಚುರಲ್, ಎಲ್ಲರೂ ಆಕಾಂಕ್ಷಿಗಳೇ. ಸಿದ್ದರಾಮಯ್ಯ ಅವರನ್ನ ಕೆಳಗಿಳಿಸಬೇಕು ಅನ್ನೋದು ಎಲ್ಲಿ ಚರ್ಚೆ ಆಗಿದೆ?. ಜನರ ಕಣ್ಣೀರು ಒರೆಸಲು ರಾಜಕಾರಣಕ್ಕೆ ಬರಬೇಕು .ಈಗಿನ ರಾಜಕಾರಣ ಯಾವ ಮಟ್ಟಕ್ಕೆ ಬಂದಿದೆ ಅಂತ ಹೇಳಿದ್ರೆ ನನ್ನ ಬಾಯಿ ಹೊಲಸು ಆಗುತ್ತೆ" ಎಂದು ಹೇಳಿದರು.
Post a Comment