ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ: ಸೌರಫಲಕ ಅಳವಡಿಕೆಗೆ ನಿರಾಸಕ್ತಿ

 ಐದು ಸಾವಿರ ಮನೆಗಳಲ್ಲಿ ಮಾತ್ರ ಅಳವಡಿಕೆ * 4,407 ಮಂದಿಗಷ್ಟೇ ಸಹಾಯಧನ ಬಿಡುಗಡೆ



ಬೆಂಗಳೂರು: ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯಡಿ ಮನೆಯ ಛಾವಣಿ ಮೇಲೆ ಸೌರಫಲಕ ಅಳವಡಿಸಿ ವಿದ್ಯುತ್ ಉತ್ಪಾದಿಸಲು ರಾಜ್ಯದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯೋಜನೆ ಆರಂಭವಾಗಿ ಹತ್ತು ತಿಂಗಳು ಕಳೆದರೂ ಐದು ಸಾವಿರ ಮನೆಗಳಲ್ಲಿ ಮಾತ್ರ ಸೌರ ಫಲಕಗಳ ಅಳವಡಿಕೆಯಾಗಿದೆ.

ಸೂರ್ಯ ಘ‌ರ್ ಯೋಜನೆಯಡಿ ನೋಂದಣಿಗೆ ಕಾಣಿಸಿದ್ದ ಆಸಕ್ತಿ ಅರ್ಜಿ ಸಲ್ಲಿಕೆಯಲ್ಲಿ ಕ್ಷೀಣಿಸಿತ್ತು. ಸೌರ ಫಲಕಗಳ ಅಳವಡಿಕೆಯ ಸ್ಥಿತಿ ಕುಂಟುತ್ತಾ ಸಾಗಿದೆ. 5.72 ಲಕ್ಷ ಮಂದಿ ನೋಂದಾಯಿಸಿಕೊಂಡಿದ್ದರು. ಅವರಲ್ಲಿ 1.72 ಲಕ್ಷ ಮಂದಿಯ ಅರ್ಜಿಗಳು ಆಯ್ಕೆಯಾಗಿದ್ದರೆ, ಸೌರ ಫಲಕಗಳನ್ನು ಅಳವಡಿಸಿದವರು 5,274 ಮಂದಿ ಮಾತ್ರ. ಘಟಕ ಅಳವಡಿಸಿದವರಲ್ಲೂ 4,407 ಮಂದಿಗಷ್ಟೇ ಕೇಂದ್ರ ಸರ್ಕಾರದಿಂದ ಸಹಾಯಧನ ಬಿಡುಗಡೆ ಆಗಿದೆ.



ಈ ಯೋಜನೆಯಡಿಯಲ್ಲಿ ಗ್ರಾಹಕರು ತಮ್ಮ ಮನೆಯ ತಾರಸಿ ಮೇಲೆ ಸೌರ ಫಲಕಗಳನ್ನು ಅಳವಡಿಸಿಕೊಂಡು ವಿದ್ಯುತ್ ಉತ್ಪಾದಿಸಿ ಮನೆ ಬಳಕೆಗೆ ಉಪಯೋಗಿಸಿಕೊಳ್ಳಬಹುದು. ವಿದ್ಯುತ್ ಲಭ್ಯತೆ ಹೆಚ್ಚಿದ್ದರೆ ಅದನ್ನು ತಮ್ಮ ವ್ಯಾಪ್ತಿಯ ಎಸ್ಕಾಂಗಳಿಗೆ ಮಾರಾಟ ಮಾಡಬಹುದು. ಒಂದು ಕಿಲೊ ವಾಟ್ ಸಾಮರ್ಥ್ಯದ ಘಟಕದಿಂದ ಪ್ರತಿ ಯೂನಿಟ್‌ಗೆ ₹2.25, ಎರಡು ಕಿಲೋ ವಾಟ್ ಸಾಮರ್ಥ್ಯದ ಘಟಕದ ಪ್ರತಿ ಯೂನಿಟ್‌ಗೆ ₹2.43 ಹಾಗೂ ಮೂರು ಕಿಲೊ ವಾಟ್ ಸಾಮರ್ಥ್ಯ ಘಟಕದ ಪ್ರತಿ ಯೂನಿಟ್‌ಗೆ ₹2.62 ದರ ನಿಗದಿ ಮಾಡಿ ಎಸ್ಕಾಂಗಳು ಖರೀದಿಸುತ್ತವೆ.

ಒಂದು ಕಿಲೋ ವಾಟ್ ಸಾಮರ್ಥ್ಯದ ಘಟಕಕ್ಕೆ ₹30 ಸಾವಿರ, ಎರಡು ಕಿಲೊ ವಾಟ್ ಸಾಮರ್ಥ್ಯದ ಘಟಕ್ಕೆ ₹60 ಸಾವಿರ ಹಾಗೂ ಮೂರು ಕಿಲೋ ವಾಟ್‌ಗಿಂತ ಹೆಚ್ಚು ಸಾಮರ್ಥ್ಯದ ಘಟಕ ಸ್ಥಾಪಿಸಲು ಗರಿಷ್ಠ ₹78 ಸಾವಿರ ಸಹಾಯಧನವನ್ನು ಕೇಂದ್ರ ಸರ್ಕಾರದ ನೀಡಲಿದೆ. ಸಹಾಯಧನ ಹಾಗೂ ಫಲಾನುಭವಿಯ ವಂತಿಗೆ ಆಧಾರದ ಮೇಲೆ ಗ್ರಾಹಕರು ತಮ್ಮ ಮನೆಯ ತಾರಸಿ ಮೇಲೆ ಸೌರ ಫಲಕಗಳನ್ನು ಅಳವಡಿಸಿಕೊಳ್ಳಬಹುದು.

'ರಾಜ್ಯದಲ್ಲಿ ಸುಮಾರು 37 ಲಕ್ಷ ಗೃಹ ಜ್ಯೋತಿ ಸೌಲಭ್ಯ ಪಡೆಯದ ಗ್ರಾಹಕರಿಗೆ ಸೂರ್ಯ ಘರ್ ಯೋಜನೆ ತಲುಪಿಸುವ ಉದ್ದೇಶದಿಂದ ರಾಜ್ಯದ ನೋಡಲ್ ಏಜೆನ್ಸಿಯಾಗಿ ಬೆಸ್ಕಾಂ ಕಾರ್ಯನಿರ್ವಹಿಸುತ್ತಿದೆ. ಸೌರ ಫಲಕಗಳನ್ನು ಅಳವಡಿಸಿಕೊಳ್ಳಲು ಕೇಂದ್ರ ಸರ್ಕಾರ ಸಹಾಯಧನ ಮಾತ್ರ ನೀಡುತ್ತದೆ. ಉಳಿದ ಹಣವನ್ನು ಗ್ರಾಹಕರೇ ಭರಿಸಬೇಕು. ಆದ್ದರಿಂದ, ಸಾರ್ವಜನಿಕರು ಆಸಕ್ತಿ ತೋರುತ್ತಿಲ್ಲ' ಎಂದು ಬೆಸ್ಕಾಂನ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.


'1.72 ಲಕ್ಷ ಗ್ರಾಹಕರಿಗೂ ಸೌಲಭ್ಯ ವಿಸ್ತರಣೆ'


'ಸೂರ್ಯ ಘರ್ ಯೋಜನೆ ಅಡಿಯಲ್ಲಿ ಇದುವರೆಗೂ 1.72 ಲಕ್ಷ ಗ್ರಾಹಕರು ಅರ್ಜಿ ಸಲ್ಲಿಸಿದ್ದಾರೆ. 2025ರ ಮಾರ್ಚ್‌ ಒಳಗೆ ಇವರೆಲ್ಲರ ಮನೆಗಳ ಮೇಲೆ ಸೌರ ಫಲಕ ಅಳವಡಿಸುವ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು' ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬೀಳಗಿ 'ಪ್ರಜಾವಾಣಿ'ಗೆ ತಿಳಿಸಿದರು.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget