ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಸಭಾಂಗಣದಲ್ಲಿ ಫೆಬ್ರವರಿ ೨೧ ಮತ್ತು ೨೨ ರಂದು ನಡೆಯುವ ೨೭ನೇ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹಿರಿಯ ಸಾಹಿತಿ ಡಾ. ಪ್ರಭಾಕರ ಶಿಶಿಲ ಅವರನ್ನು ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ ಅವರು ಪ್ರಕಟಿಸಿದ್ದಾರೆ.
ಡಾ. ಪ್ರಭಾಕರ ಶಿಶಿಲ ಕುರಿತು:
ಸುಳ್ಯ ತಾಲೂಕಿನ ಕೂತುಕುಂಜ ಕಜೆ ಎಂಬಲ್ಲಿ ಹುಟ್ಟಿ ಬೆಳ್ತಂಗಡಿ ತಾಲೂಕಿನ ಶಿಶಿಲದಲ್ಲಿ ಬೆಳೆದು, ಸುಳ್ಯದಲ್ಲಿ ಬದುಕುತ್ತಿರುವ ಡಾ. ಪ್ರಭಾಕರ ಶಿಶಿಲರು ಕನ್ನಡದ ವಿಶಿಷ್ಟ ಪ್ರತಿಭೆ ಹಾಗೂ ಶ್ರೇಷ್ಠ ಸಾಹಿತಿ.
ಕನ್ನಡದಲ್ಲಿ ೧೦ ಕಾದಂಬರಿ, ೮ ಕಥಾ ಸಂಕಲನ ೫ ಪ್ರವಾಸ ಕಥನ ಸೇರಿ ಒಟ್ಟು ೫೪ ಸೃಜನಶೀಲ ಕೃತಿಗಳನ್ನು ಹಾಗೂ ೧೬೫ ಅರ್ಥಶಾಸ್ತ್ರ ವಿಚಾರ ಸಾಹಿತ್ಯ ಕೃತಿಗಳನ್ನು ಹಾಗೂ ಆಂಗ್ಲ ಭಾಷೆಯಲ್ಲಿ ೧೦ ಅರ್ಥಶಾಸ್ತ್ರ ಕೃತಿಗಳ ರಚಸಿದ್ದಾರೆ. ಕನ್ನಡ ದಿನ ಪತ್ರಿಕೆಗಳು ಹಾಗೂ ನಿಯತಾಕಾಲಿಕಗಳಲ್ಲಿ ೨೫೦ಕ್ಕೂ ಮಿಕ್ಕಿ ಲೇಖನ, ಕತೆ, ವಿಡಂಬನೆ ಇತ್ಯಾದಿಗಳ ಪ್ರಕಟಿಸಿರುತ್ತಾರೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಶತಮಾನದ ಕವಿಗಳು ಕೃತಿಯಲ್ಲಿ ಸ್ಥಾನ ಪಡೆದಿದ್ದಾರೆ. ಇವರ ಕವಿತೆಗಳು ಮಂಗಳೂರು ಆಕಾಶವಾಣಿಯಿಂದ ಪ್ರಸಾರವಾಗಿದೆ. ಅನೇಕ ಲಾವಣಿ ಮತ್ತು ಗೀಗೀ ಪದ ರಚಿಸಿದ್ದಾರೆ.
ಇವರು ಬರೆದ ಪುಂಸ್ತ್ರೀ ಕೃತಿ ಸಂಸ್ಕೃತ, ಹಿಂದಿ, ಮಲೆಯಾಳಂ, ತೆಲುಗು, ತಮಿಳು, ತುಳು, ಕೊಂಕಣಿ, ಮರಾಠಿ, ಅರೆಭಾಷೆ, ಕೊಡವ, ಗುಜರಾಥಿ, ಬೆಂಗಾಲಿ, ಪಂಜಾಬಿ, ಇಂಗ್ಲೀಷ್ ಭಾಷೆಗಳಿಗೆ ಅನುವಾದಗೊಂಡು ಜನಮನ್ನಣೆ ಪಡೆದಿದೆ. ಮತ್ಸ್ಯಗಂಧಿ, ಕಪಿಲಳ್ಳಿಯ ಕತೆಗಳು, ಮೂಡಣದ ಕೆಂಪುಕಿರಣ,ಇರುವುದೆಲ್ಲವ ಬಿಟ್ಟು ಕೃತಿಗಳೂ ಅನ್ಯ ಭಾಷೆಗೆ ಅನುವಾದಗೊಂಡಿವೆ. ಯಕ್ಷಗಾನ ಹಾಗೂ ರಂಗಭೂಮಿಗೂ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಅನೇಕ ಸಂಘ-ಸಂಸ್ಥೆಗಳಲ್ಲಿ ತಮ್ಮನ್ನು ಗುರುತಿಸಿಕೊಂಡು ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡು ಜನರ ಪ್ರೀತಿ ಸಂಪಾದಿಸಿದ್ದಾರೆ. ಇವರ ಸಾಹಿತ್ಯ ಸೇವೆಗೆ ಅನೇಕ ಪ್ರಶಸ್ತಿಗಳು ಅರಸಿ ಬಂದಿವೆ.
Post a Comment