ವಿಜಯೇಂದ್ರ ನೀನು ಬಚ್ಚಾ, ನೀನು ಅಧ್ಯಕ್ಷ ಸ್ಥಾನಕ್ಕೆ ನಾಲಾಯಕ್… ರಮೇಶ್ ಜಾರಕಿಹೊಳಿ‌

 


ಬೆಳಗಾವಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕೆಂಡಾಮಂಡಲರಾಗಿದ್ದು ಮಾತ್ರವಲ್ಲದೆ ಬಹಿರಂಗ ಸವಾಲೊಂದನ್ನು ಹಾಕಿದ್ದಾರೆ.

ಗೋಕಾಕ್ ನಲ್ಲಿ ಮಾತನಾಡಿದ ಜಾರಕಿಹೊಳಿ, ನಮ್ಮಲ್ಲಿ ಜಗಳ ಇರೋದು ಅಧ್ಯಕ್ಷರ ಬದಲಾವಣೆಗೆ ಅಷ್ಟೇ, ಅಧ್ಯಕ್ಷ ಚೇಂಜ್ ಆಗಿದ್ರೇ ಓಕೆ ಇಲ್ಲವಾದ್ರೆ ಪಕ್ಷ ಸಂಘಟನೆ ಮಾಡ್ತೇವಿ. ಯಡಿಯೂರಪ್ಪ ಅವರ ಬಗ್ಗೆ ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು ಎಂಬ ವಿಜಯೇಂದ್ರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಜಾರಕಿಹೊಳಿ ವಿಜಯೇಂದ್ರ ನೀನು ಬಚ್ಚಾ, ನೀನು ಅಧ್ಯಕ್ಷ ಸ್ಥಾನಕ್ಕೆ ನಾಲಾಯಕ್, ಇಂದಿಗೂ ಯಡಿಯೂರಪ್ಪ ನಮ್ಮ ನಾಯಕ ಅದರಲ್ಲಿ ಎರಡು ಮಾತಿಲ್ಲ. ಇಂದಿಗೂ ನಾನು ಯಡಿಯೂರಪ್ಪ ಮೇಲೆ ಅಗೌರವದಿಂದ ಮಾತಾಡಿಲ್ಲ. ಇಂದಿಗೂ ಅವರ ಮೇಲೆ ಗೌರವ ಇದೆ. ಆದ್ರೇ ನೀನು ಸುಳ್ಳು ಹೇಳುವುದು ಬಿಡು ಎಂದು ಕಿಡಿಕಾರಿದ್ದಾರೆ.

ನಾನು ಶಿಕಾರಿಪುರಕ್ಕೆ ಬರ್ತೇನಿ, ವಿಜಯೇಂದ್ರ ಮನೆ ಮುಂದಿನಿಂದ ಪ್ರವಾಸ ಶುರು ಮಾಡ್ತೇನಿ ನಿನ್ನ ಸವಾಲು ಸ್ವೀಕಾರ ಮಾಡಿದ್ದೇನೆ ನೀನು ದಿನಾಂಕ ನಿಗದಿ ಮಾಡು, ಬೆಂಬಲಿಗರು ಬರಲ್ಲಾ, ಗನ್ ಮ್ಯಾನ್ ಬರಲ್ಲ ನಾನು ಒಬ್ಬನೇ ಬರ್ತೇನಿ, ಅಲ್ಲಿಂದ ಪ್ರವಾಸ ಆರಂಭ ಮಾಡುತ್ತೇನೆ ಸಾಧ್ಯವಾದರೆ ತಡಿ ನೋಡೋಣ ಎಂದು ಸವಾಲ್ ಹಾಕಿದ್ದಾರೆ.

ನಿನ್ನನ್ನು ಬೇಕಾದ್ರೆ ರಾಜ್ಯದ ಮೂಲೆ ಮೂಲೆಯಲ್ಲಿ ಓಡಾಡಲು ಬಿಡದ ಶಕ್ತಿ ನನಗಿದೆ, ನಿನ್ನಷ್ಟು ಕೀಳು ಮಟ್ಟದ ರಾಜಕಾರಣಿ ನಾನು ಅಲ್ಲಾ‌. ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಗೌರವ ಇದೆ ಆದರೆ ವಿಜಯೇಂದ್ರ ಬಗ್ಗೆ ನನಗೆ ಗೌರವ ಇಲ್ಲ, ವಿಜಯೇಂದ್ರ ಬೆನ್ನು ಹತ್ರಿದ್ರೆ ಯಡಿಯೂರಪ್ಪ ನವರೇ ಹಾಳಾಗ್ತಿರಿ. ಅವರನ್ನ ಬದಲಿಸಿ ಹೊಸಬರಿಗೆ ಅವಕಾಶ ಕೊಡಿ. ಇನ್ನೇನಿದ್ದರೂ ಯಡಿಯೂರಪ್ಪ ಅವರೇ ನೀವು ಮುಖ್ಯಮಂತ್ರಿ ಆಗಲ್ಲ. ಪದೇ ಪದೇ ಸೈಕಲ್ ಮೇಲೆ ಓಡಾಡಿದ್ದೀನಿ ಅಂತಾ ಹೇಳಬೇಡಿ ಅವಮಾನ ಆಗುತ್ತೆ. ಅದರ ಎರಡು ಪಟ್ಟು ನೀವು ಲಾಭ ಪಡೆದುಕೊಂಡಿದ್ದೀರಿ. ವಾಜಪೇಯಿ, ಮೋದಿಯವರು ಇನ್ನೂ ಒಂದು ಸೈಕಲ್ ತಗೊಂಡಿಲ್ಲ, ನೀವು ಏನೇನೂ ತಗೊಂಡೀರಿ ಎಂದು ವಾಗ್ದಾಳಿ ನಡೆಸಿದರು.

ಪಕ್ಷಕ್ಕೆ ಬಂದು ಮೂರು ವರ್ಷ ಆಯ್ತು ಅಂತೀಯಾ, ನಾನು ಬಂದಿದ್ದು ನಿಮ್ಮ ಅಪ್ಪನ ಸಿಎಂ ಮಾಡಲು. ಈಗ ಅದೇ ಹರಾಮಿ ದುಡ್ಡಲ್ಲಿ ನೀನು ಓಡಾಡ್ತಿದಿ‌. ನೀನು ಇನ್ನು ಬಚ್ಚಾ ಇದೀಯಾ ವಿಜಯೇಂದ್ರ ಅಂತಾ ಎಚ್ಚರಿಕೆ‌ ನೀಡಿದರು.‌

ಒಬ್ಬ ಬಹುಸಂಖ್ಯಾತ ಯತ್ನಾಳ್ ಇದಾರೆ ಅದಕ್ಕಾಗಿ ಅವರನ್ನು ಒಪ್ಪಿಕೊಂಡಿದ್ದೇವೆ. ಲಿಂಗಾಯತರಲ್ಲಿ ಇನ್ನೂ ಸಾಕಷ್ಟು ನಾಯಕರಿದ್ದಾರೆ. ವಿಜಯೇಂದ್ರ ನೀನು ಸಣ್ಣ ಹುಡುಗಾ, ನಿನಗೆ ಅಧ್ಯಕ್ಷ ಸ್ಥಾನ ನೀಗುವದಿಲ್ಲ. ಆದ್ರೇ ಹೈಕಮಾಂಡ್ ಮುಂದುವರೆಸಿದ್ರೇ ಆಗಲಿ. ಪಕ್ಷದ ನಿರ್ಣಯ ನಾನು ಸ್ವಾಗತ ಮಾಡುತ್ತೇನೆ‌. ನೀನು ಅಧ್ಯಕ್ಷ ಸ್ಥಾನ ಬಿಟ್ಟು ಬೇರೆಯವರಿಗೆ ಅವಕಾಶ ಕೊಡು. ಸಣ್ಣ ಹುಡುಗ ಇದ್ದಿ ನಿನಗೆ ಏನು ಮಾತಾಡಬೇಕು ಗೊತ್ತಾಗಲ್ಲ. ಗೂಂಡಾಗಿರಿ ರೀತಿ ಮಾತಾಡುವುದನ್ನು ಬಿಡು. ನಮ್ಮ ಮುಂದೆ ಡ್ಯಾಶ್ ಡ್ಯಾಶ್ ಅಂತವರನ್ನು ತಂದು ಯುದ್ದಕ್ಕೆ ನಿಲ್ಲಿಸಿದ್ದಾರೆ.

ಪಕ್ಷ ಅಂತಾ ಬಂದಾಗ ಒಂದಾಗಿ ಭಿನ್ನಾಭಿಪ್ರಾಯ ಬದಿಗೊತ್ತಿ ಪಕ್ಷ ಸಂಘಟನೆ ಮಾಡ್ತೇವಿ. 2028ಕ್ಕೆ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ. ಜಾತಿ ಆಧಾರದ ಮೇಲೆ ನಾನು ರಾಜಕಾರಣ ಮಾಡಿಲ್ಲ. ಕ್ಷೇತ್ರದ ಜನರಿಗೆ ನನ್ನಿಂದ ಏನಾದ್ರೂ ತಪ್ಪಾದ್ರೇ ಯಾರಿಗಾದರೂ ಅಂದಿದ್ರೇ ಕ್ಷಮಿಸಿ ಎಂದು ಹೇಳಿದರು.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget