ತಿರುವನಂತಪುರ : ದೇವಸ್ಥಾನ ಪ್ರವೇಶಿಸುವ ಮುನ್ನ ಪುರುಷ ಭಕ್ತರು ಮೇಲಂಗಿ ತೆಗೆಯಬೇಕೆಂಬ ನಿಯಮವನ್ನು ಕೈಬಿಡಲು ಕೇರಳದ ದೇವಸ್ವಂ ಆಡಳಿತ ಮಂಡಳಿ ಯೋಜನೆ ರೂಪಿಸುತ್ತಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬುಧವಾರ ತಿಳಿಸಿದ್ದಾರೆ.
ಸಾಮಾಜಿಕ ಸುಧಾರಕ ಶ್ರೀ ನಾರಾಯಣ ಗುರು ಅವರು ಸ್ಥಾಪಿಸಿದ ಶಿವಗಿರಿ ಮಠದ ಮುಖ್ಯಸ್ಥ ಸ್ವಾಮಿ ಸಚ್ಚಿದಾನಂದ ಅವರ ಹೇಳಿಕೆಯ ಬೆನ್ನಲ್ಲೇ ದೇವಸ್ವಂ ಆಡಳಿತ ಮಂಡಳಿ ಈ ನಿರ್ಧಾರ ತೆಗೆದುಕೊಂಡಿದೆ.
ಮಂಗಳವಾರ ನಡೆದ ಶಿವಗಿರಿ ಯಾತ್ರಾರ್ಥಿಗಳ ಸಮ್ಮೇಳನದಲ್ಲಿ ಮಾತನಾಡಿದ ಸ್ವಾಮಿ ಸಚ್ಚಿದಾನಂದ ಅವರು, ಈ ಪದ್ಧತಿ ಸಾಮಾಜಿಕ ಅನಿಷ್ಠ ಎಂದು ಬಣ್ಣಿಸಿದರು. ಅಲ್ಲದೆ, ಇದರ ನಿರ್ಮೂಲನೆಗೆ ಕರೆ ನೀಡಿದರು.
ಸಮಾವೇಶವನ್ನು ಉದ್ಘಾಟಿಸಿದ್ದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸ್ವಾಮಿ ಸಚ್ಚಿದಾನಂದರ ಅವರು ನೀಡಿದ ಕರೆಯನ್ನು ಅನುಮೋದಿಸಿದ್ದರು. ಅಲ್ಲದೆ, ಅಂತಹ ಹೆಜ್ಜೆಯನ್ನು ಸಾಮಾಜಿಕ ಸುಧಾರಣೆಯಲ್ಲಿ ಮಹತ್ವದ ಹಸ್ತಕ್ಷೇಪವೆಂದು ಪರಿಗಣಿಸಬೇಕು ಎಂದು ಹೇಳಿದ್ದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಪಿಣರಾಯಿ ವಿಜಯನ್, 'ದೇವಸ್ವಂ ಆಡಳಿತ ಮಂಡಳಿಯ ಪ್ರತಿನಿಧಿ ನನ್ನನ್ನು ಭೇಟಿಯಾದರು. ನಾವು ಈ ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದು ಅವರು ಹೇಳಿದರು. ನಾನು ಒಳ್ಳೆಯದಾಯಿತು... ಅತ್ಯುತ್ತಮ ಸಲಹೆ ಎಂದು ಹೇಳಿದೆ" ಎಂದಿದ್ದಾರೆ.
ಆದರೆ, ಯಾವ ದೇವಸ್ವಂ ಆಡಳಿತ ಮಂಡಳಿ ಈ ನಿರ್ಧಾರವನ್ನು ಅನುಷ್ಠಾನಗೊಳಿಸುತ್ತದೆ ಎಂಬುದನ್ನು ಪಿಣರಾಯಿ ವಿಜಯನ್ ನಿರ್ದಿಷ್ಟಪಡಿಸಿಲ್ಲ. ಗುರುವಾಯುರು, ತಿರುವಾಂಕೂರು. ಮಲಬಾರ್, ಕೊಚ್ಚಿನ್ ಹಾಗೂ ಕೂಡಲಮಾನಿಕ್ಯಂ ಸೇರಿದಂತೆ ಕೇರಳದಲ್ಲಿ ಐದು ದೇವಸ್ವಂ ಆಡಳಿತ ಮಂಡಳಿಗಳಿವೆ. ಇವು ಸಂಘಟಿತವಾಗಿ 3,000 ದೇವಾಲಯಗಳನ್ನು ನಿರ್ವಹಿಸುತ್ತವೆ.
Post a Comment