ರಾಜ್ಯಗೀತೆಯ ಬಳಿಕ ರಾಷ್ಟ್ರಗೀತೆ ಹಾಡದ ಕಾರಣ ಔಪಚಾರಿಕ ಭಾಷಣ ಮಾಡದೇ ತಮಿಳುನಾಡಿನ ರಾಜ್ಯಪಾಲ ಸದನದಿಂದ ಹೊರನಡೆದ ಪ್ರಸಂಗ ನಡೆಯಿತು.
ಚೆನ್ನೈ(ತಮಿಳುನಾಡು): ಇಂದಿನಿಂದ ತಮಿಳುನಾಡು ವಿಧಾನಸಭೆಯ ಅಧಿವೇಶನ ಆರಂಭವಾಗಿದೆ. ಮೊದಲ ದಿನ ರಾಜ್ಯಪಾಲರು ತಮ್ಮ ಔಪಚಾರಿಕ ಭಾಷಣ ಮಾಡದೆ ಸದನದಿಂದ ಹೊರನಡೆದಿದ್ದಾರೆ. ಡಿಎಂಕೆ ನೇತೃತ್ವದ ಸರ್ಕಾರ ರಾಷ್ಟ್ರಗೀತೆಗೆ ಅವಮಾನ ಮಾಡಿದೆ ಎಂದು ರಾಜ್ಯಪಾಲ ಆರ್.ಎನ್.ರವಿ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.
ಬೆಳಗ್ಗೆ 9.29ಕ್ಕೆ ರಾಜ್ಯಪಾಲ ರವಿ ಅಧಿವೇಶನಕ್ಕೆ ಆಗಮಿಸಿದರು. ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಜೊತೆಗಿದ್ದರು. ಸದನ ಆರಂಭವಾಗುತ್ತಿದ್ದಂತೆ ಯಾವುದೇ ಸರ್ಕಾರಿ ಕಾರ್ಯಕ್ರಮದಲ್ಲಿ ಹಾಡುವಂತೆ ರಾಜ್ಯಗೀತೆ ತಮಿಳು ತಾಯಿ ವಾಳ್ತು ಅನ್ನು ಹಾಡಲಾಯಿತು.
ಆದರೆ, ರಾಜ್ಯಗೀತೆಯ ಬಳಿಕ ರಾಷ್ಟ್ರಗೀತೆ ಹಾಡಲಿಲ್ಲ. ಇದರಿಂದ ಅಸಮಾಧಾನಗೊಂಡ ರಾಜ್ಯಪಾಲರು, ಔಪಚಾರಿಕ ಭಾಷಣ ಮಾಡದೇ ಸದನದಿಂದ ಹೊರನಡೆದರು. ಸ್ಪೀಕರ್ ಎಂ.ಅಪ್ಪವು ಪ್ರತಿಕ್ರಿಯಿಸಿ, ರಾಜ್ಯಪಾಲರು ಸದನದಲ್ಲಿ ಹೇಳಿರುವ ಯಾವುದೇ ಮಾತು ಕಡತದಲ್ಲಿ ದಾಖಲಾಗುವುದಿಲ್ಲ ಎಂದು ಘೋಷಿಸಿದರು.
ತನ್ನ ಸಾಧನೆ ಮತ್ತು ಹೊಸ ವರ್ಷದ ನೀತಿಗಳ ಕುರಿತು ರಾಜ್ಯ ಸರ್ಕಾರ ಭಾಷಣ ಸಿದ್ಧಪಡಿಸಿತ್ತು.
ರಾಜ್ಯಪಾಲರು ಸದನ ತೊರೆಯುತ್ತಿದ್ದಂತೆ ಎಐಎಡಿಎಂಕೆ ಶಾಸಕರು ಪ್ರತಿಭಟಿಸಿ, ಕಲಾಪಕ್ಕೆ ಅಡ್ಡಿಪಡಿಸಿದರು. ತಮ್ಮ ಆಸನದಲ್ಲಿ ಕುಳಿತುಕೊಳ್ಳುವಂತೆ ಸ್ಪೀಕರ್ ತಿಳಿಸಿದರೂ ಕಲಾಪಕ್ಕೆ ಅಡ್ಡಿ ಮುಂದುವರೆಸಿದರು. ನಂತರ ಪ್ರತಿಭಟನಾನಿರತ ಶಾಸಕರನ್ನು ಸದನದಿಂದ ಹೊರ ಕಳುಹಿಸಲಾಯಿತು.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ತಮಿಳುನಾಡು ರಾಜಭವನ, "ತಮಿಳುನಾಡು ಸದನದಲ್ಲಿ ಕೇವಲ ರಾಜ್ಯಗೀತೆಯನ್ನು ಹಾಡಲಾಗಿದ್ದು, ರಾಷ್ಟ್ರಗೀತೆ ಹಾಡಲಿಲ್ಲ. ಇದನ್ನು ಗಮನಿಸಿದ ರಾಜ್ಯಪಾಲರು ರಾಷ್ಟ್ರಗೀತೆ ಹಾಡುವಂತೆ ಸಿಎಂ ಮತ್ತು ಸ್ಪೀಕರ್ಗೆ ತಿಳಿಸಿದರು. ಸದನದ ಆರಂಭ ಮತ್ತು ಮುಕ್ತಾಯದಲ್ಲಿ ರಾಷ್ಟ್ರಗೀತೆ ಹಾಡುವ ಕುರಿತು ಅವರು ನೆನಪಿಸಿದರು. ಆದರೆ, ರಾಜ್ಯಪಾಲರ ಮಾತನ್ನು ನಿರಾಕರಿಸಿದರು. ರಾಷ್ಟ್ರಗೀತೆಗೆ ಅವಮಾನ ಮಾಡಿದ ಸದನದ ಕ್ರಮಕ್ಕೆ ರಾಜ್ಯಪಾಲರು ಬೇಸರ ವ್ಯಕ್ತಪಡಿಸಿದರು" ಎಂದು ತಿಳಿಸಲಾಗಿದೆ.
ಈ ಹಿಂದೆ ಕೂಡ ಸದನ ತೊರೆದಿದ್ದ ರಾಜ್ಯಪಾಲ: 2024ರಲ್ಲೂ ಕೂಡ ರಾಜ್ಯಪಾಲ ರವಿ, ಸರ್ಕಾರ ಸಿದ್ಧಪಡಿಸಿದ ಭಾಷಣ ಓದುವ ಮೊದಲೇ ಸದನದಿಂದ ಹೊರನಡೆದಿದ್ದರು. ಆಗಲೂ ಅವರು ರಾಷ್ಟ್ರಗೀತೆಯನ್ನು ಸದನದಲ್ಲಿ ಹಾಡದ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು.
Post a Comment