ನವದೆಹಲಿ: ಮಾಜಿ ರಾಷ್ಟ್ರಪತಿ ದಿ. ಪ್ರಣವ್ ಮುಖರ್ಜಿ ಅವರ ಸ್ಮಾರಕವನ್ನು ರಾಜ್‌ಘಾಟ್‌ನ ರಾಷ್ಟ್ರೀಯ ಸ್ಮೃತಿಯಲ್ಲಿ ನಿರ್ಮಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಸ್ಮಾರಕ ನಿರ್ಮಾಣಕ್ಕೆ ಜಾಗ ನೀಡಲು ಕೇಂದ್ರ ಒಪ್ಪಿಗೆ ನೀಡಿರುವುದನ್ನು ಸ್ವಾಗತಿಸಿರುವ ಪ್ರಣವ್ ಪುತ್ರಿ ಶರ್ಮಿಷ್ಠಾ ಮುಖರ್ಜಿ, ತಂದೆಯನ್ನು ಗೌರವಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಹೇಳಿದ್ದಾರೆ.
'2020ರ ಆ. 31ರಂದು ನಿಧನರಾದ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ಸ್ಮಾರಕ ನಿರ್ಮಾಣಕ್ಕೆ ರಾಜ್‌ಘಾಟ್‌ನ ಒಂದು ಭಾಗವಾದ ರಾಷ್ಟ್ರೀಯ ಸ್ಮೃತಿಯಲ್ಲಿ ನಿವೇಶನವನ್ನು ಸಕ್ಷಮ ಪ್ರಾಧಿಕಾರವು ಗುರುತಿಸಿ ನಿಗದಿಪಡಿಸಿದೆ' ಎಂದು ಶರ್ಮಿಷ್ಠ ಅವರಿಗೆ ಬರೆದ ಪತ್ರದಲ್ಲಿ ಕೇಂದ್ರ ತಿಳಿಸಿದೆ.
ಪತ್ರ ತಲುಪಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೆ ಸಮಯ ಕೋರಿದ ಶರ್ಮಿಷ್ಠಾ, ಅವರಿಗೆ ಧನ್ಯವಾದ ತಿಳಿಸಿದ್ದಾರೆ.`ಬಾಬಾ ಅವರ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ನಿರ್ಧಾರ ಕೈಗೊಂಡಿರುವುದು ನನ್ನ ಹೃದಯವನ್ನು ತಟ್ಟಿದೆ. ಈ ಗೌರವಕ್ಕಾಗಿ ಪ್ರಧಾನಿಗೆ ಧನ್ಯವಾದ ತಿಳಿಸಲು ಬಯಸಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿಗೆ ಅವಕಾಶ ನೀಡಿದ್ದರಿಂದ ಅವರನ್ನು ಖುದ್ದು ಭೇಟಿಯಾಗಿ ಧನ್ಯವಾದ ತಿಳಿಸಿದ್ದೇನೆ. ಅವರ ಭೇಟಿ ನಿಜಕ್ಕೂ ನನ್ನಲ್ಲಿ ಧನ್ಯತಾಭಾವ ಮೂಡಿಸಿದೆ' ಎಂದು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
'ಸರ್ಕಾರದ ಗೌರವವನ್ನು ಕೇಳಿ ಪಡೆಯಬಾರದು. ಅದು ಒಲಿಯಬೇಕು ಎಂದು ಬಾಬಾ ಸದಾ ಹೇಳುತ್ತಿದ್ದರು. ಆ ಕೆಲಸವನ್ನು ಪ್ರಧಾನಿ ಮೋದಿ ಅವರು ಮಾಡಿದ್ದಕ್ಕೆ ನಾನು ಆಭಾರಿ. ಪ್ರಶಂಸೆ ಅಥವಾ ಟೀಕೆಗಳು ಬಾಬಾ ಅವರನ್ನು ಭಾದಿಸದು. ಆದರೆ ಸರ್ಕಾರ ಅವರನ್ನು ಗೌರವಿಸಿದ ಈ ನಿರ್ಧಾರವನ್ನು ಹೊಗಳಲು ನನ್ನಲ್ಲಿ ಪದಗಳಿಲ್ಲ' ಎಂದಿದ್ದಾರೆ.
Post a Comment