ಪ್ರತ್ಯೇಕ ಕಾಯ್ದೆಯ ಮೂಲಕ ನಿಯಂತ್ರಣಕ್ಕೆ ಸರ್ಕಾರ ಚಿಂತನೆ
ಬೆಂಗಳೂರು: ಅನಧಿಕೃತ ಆನ್‌ಲೈನ್ ಗೇಮಿಂಗ್‌ಗೆ ತಡೆಹಾಗೂ ಅಧಿಕೃತ ಗೇಮಿಂಗ್ ಸಂಸ್ಥೆಗಳ ಅನೈತಿಕ ಪ್ರಚಾರ ವೈಖರಿಗೆ ಕಡಿವಾಣ ಹಾಕುವುದಕ್ಕೆ ಇದೀಗ ರಾಜ್ಯ ಸರ್ಕಾರ ಮುಂದಾಗಿದ್ದು, ಈ ಸಂಬಂಧ ಪ್ರತ್ಯೇಕ ಕಾಯ್ದೆಯ ಮೂಲಕ ನಿಯಂತ್ರಣ ಹೇರಲು ಮುಂದಾಗಿದೆ.ಗೃಹ ಸಚಿವ ಡಾ.ಜಿ.ಪರಮೇಶ್ವರ್, ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್.ಕೆ.ಪಾಟೀಲ್, ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳ ಲಾಗಿದೆ. ಮುಂದಿನ 1 ತಿಂಗಳೊಳಗಾಗಿ ನಿಯಮ ರೂಪಿಸಿ ಸಾರ್ವಜನಿಕ ಚರ್ಚೆಗೆ ಬಿಡಲು ನಿರ್ಧರಿಸಲಾಗಿದೆ. ಕಾಯ್ದೆಯ ಸ್ವರೂಪ ಹೇಗಿರಬೇಕೆಂಬುದನ್ನೂ ಸದ್ಯದಲ್ಲೇ ನಿರ್ಧರಿಸಲಾಗುತ್ತದೆ.ಅಧಿಕೃತ ಗೇಮಿಂಗ್ ಸಂಸ್ಥೆಗಳು ನಡೆಸುತ್ತಿ ರುವ ಕೆಲ ಕಾನೂನು ಬಾಹಿರ ವರ್ತನೆಗಳು ಹಾಗೂ ಅನಧಿಕೃತ ಸಂಸ್ಥೆಗಳ ಬಗ್ಗೆ ದೂರುಗಳು ಬಂದಿದ್ದವು. ಚೀನಾ ಹಾಗೂ ಪಶ್ಚಿಮ ಯುರೋಪಿಯನ್ ರಾಷ್ಟ್ರಗಳ ಬ್ರೌಸಿಂಗ್ ವೆಬ್‌ಸೈಟ್ ಬಳಸಿಕೊ ಂಡು ಈ ಅನಧಿಕೃತ ಗೇಮಿಂಗ್ ಸಂಸ್ಥೆಗಳು ವ್ಯವಹಾರ ನಡೆಸುತ್ತಿದ್ದು, ಇವುಗಳಿಂದ ಸಾರ್ವಜನಿಕರಿಗೆ ಮೋಸವಾಗುವ ಜತೆಗೆ ಸರ್ಕಾರಕ್ಕೆ ಬರುವ ಆದಾಯದಲ್ಲೂ ನಷ್ಟವಾಗುತ್ತಿತ್ತು.
ಅಧಿಕೃತ ಸಂಸ್ಥೆಗಳಿಗೆ ಮಾರ್ಗಸೂಚಿ: ಈ ಹಿನ್ನೆಲೆಯಲ್ಲಿ ಅಧಿಕೃತ ಸಂಸ್ಥೆಗಳಿಗೆ ಮಾರ್ಗಸೂಚಿ ರಚಿಸುವುದು, ಅನಧಿಕೃತ ಗೇಮಿಂಗ್ ಸಂಸ್ಥೆಗಳನ್ನು ಬ್ಯಾನ್ ಮಾಡುವ ಉದ್ದೇಶದಿಂದ ಈ ಸಭೆ ನಡೆಸಲಾಗಿದೆ.ಕಳೆದ ವರ್ಷ ಆನ್‌ಲೈನ್ ಗೇಮಿಂಗ್ ಉದ್ಯಮದಿಂದ 1350 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿತ್ತು. ಸೂಕ್ತ ನಿಯಮ ಜಾರಿಗೆ ತಂದರೆ ಈ ಮೊತ್ತವನ್ನು 4ರಿಂದ 5 ಸಾವಿರ ಕೋಟಿ ರೂ.ಗೆ ಹೆಚ್ಚಿಸುವುದಕ್ಕೆ ಅವಕಾಶವಿದೆ. ಗೇಮಿಂಗ್ ಮೇಲೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶೇ.24ರಷ್ಟು ಜಿಎಸ್‌ಟಿ ವಿಧಿಸುತ್ತವೆ.













































