ಕೀವ್: ರಷ್ಯಾದ ರಾಜಧಾನಿ ಮಾಸ್ಕೊ ಮೇಲೆ ಉಕ್ರೇನ್ 400ಕ್ಕೂ ಹೆಚ್ಚಿನ ಡೋನ್‌ಗಳ ಮೂಲಕ ದಾಳಿ ನಡೆಸಿದೆ.
ಉಕ್ರೇನ್ ರಾಜಧಾನಿ ಕೀವ್ ಸೇರಿದಂತೆ ವಿವಿಧ ನಗರಗಳ ಮೇಲೆ ರಷ್ಯಾ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಸರಣಿ ದಾಳಿ ನಡೆಸಿದ ಕೆಲವೇ ಗಂಟೆಗಳ ನಂತರ ಪ್ರತಿದಾಳಿ ನಡೆದಿದೆ.ಈ ದಾಳಿಯಲ್ಲಿ ರಷ್ಯಾದ 10 ಜನರು ಗಾಯಗೊಂಡಿದ್ದಾರೆ. ಹಲವು ವಸತಿ ಕಟ್ಟಡಗಳು ಮತ್ತು ನಾಗರಿಕ ಮೂಲಸೌಕರ್ಯಗಳಿಗೆ ಹಾನಿಯಾಗಿದೆ.*ಉಕ್ರೇನ್ ಗಡಿಯಿಂದ 400 ಕಿ.ಮೀ. ದೂರದಲ್ಲಿರುವ ಮಾಸ್ಕೊ ಪ್ರದೇಶದ ಸರಕು ಸಾಗಣೆ ವ್ಯವಸ್ಥೆ ಮತ್ತು ಪೊಡೊಲ್ಸ್‌ನಲ್ಲಿರುವ ತೈಲ ಡಿಪೊ ಮೇಲೆ ಸೇನಾ ಪಡೆಗಳು ದಾಳಿ ನಡೆಸಿವೆ. ನಿರ್ಬಂಧಿತ ತೈಲವನ್ನು ಸಾಗಿಸುತ್ತಿದ್ದ ರಷ್ಯಾದ ರಹಸ್ಯ ನೌಕಾಪಡೆಗೆ ಸೇರಿದ ಎರಡು ಹಡಗುಗಳು ಮತ್ತು ಕಪ್ಪು ಸಮುದ್ರದಲ್ಲಿದ್ದ ನಾಲ್ಕು ಸರಕು ಸಾಗಣೆ ಹಡಗುಗಳ ಮೇಲೂ ದಾಳಿ ನಡೆಸಲಾಗಿದೆ’ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝಲೆನ್‌ಸ್ಕಿ ತಿಳಿಸಿದ್ದಾರೆ.
‘ಭಾನುವಾರ ತಡರಾತ್ರಿಯಿಂದ ಸೋಮವಾರ ಬೆಳಗಿನ ಜಾವದವರೆಗೆ 400ಕ್ಕೂ ಹೆಚ್ಚು ಡೋನ್‌ಗಳ ಮೂಲಕ ಉಕ್ರೇನ್ ದಾಳಿ ನಡೆಸಿದೆ. ಈ ಪೈಕಿ ಹೆಚ್ಚಿನ ಡೋನ್‌ಗಳನ್ನು ರಾಜಧಾನಿಯಿಂದ ಬಹಳ ದೂರದಲ್ಲಿ ಹೊಡೆದುರುಳಿಸಲಾಗಿದೆ. 85 ಡೋನ್‌ಗಳನ್ನು ಮಾಸ್ಕೊ ಬಳಿ ತಡೆಹಿಡಿಯಲಾಗಿದೆ’ ಎಂದು ಮಾಸ್ಕೊದ ಮೇಯರ್ ಸೆರ್ಗೆಯ್ ಸೊಬ್ಯಾನಿನ್ ತಿಳಿಸಿದ್ದಾರೆ.


















































