ಮೈಸೂರು: ಸಾಂಸ್ಕೃತಿಕ ನಗರಿಯ ಹೆಗ್ಗುರುತುಗಳಲ್ಲಿ ಒಂದಾದ ಲಲಿತಮಹಲ್ ಅರಮನೆಯನ್ನು ಖಾಸಗಿ ತೆಕ್ಕೆಗೆ ವಹಿಸಲು ಸರ್ಕಾರ ಉತ್ಸುಕವಾಗಿದ್ದು, ಅಂದುಕೊಂಡಂತೆ ಆದಲ್ಲಿ ಇದರ ನಿರ್ವಹಣೆಯು ಖಾಸಗಿ ಕಂಪನಿಗಳ ಕೈಗೆ ಸಿಗಲಿದೆ.ವೆಚ್ಚದ ವಿಚಾರದಲ್ಲಿ ಬಿಳಿಯಾನೆಯಂತಾಗಿರುವ ಈ ಅರಮನೆಯ ನಿರ್ವಹಣೆಯು ಸರ್ಕಾರಕ್ಕೂ ಸವಾಲಾಗಿದ್ದು, ಖಾಸಗಿ ಕಂಪನಿಗಳಿಗೆ ಇಂತಿಷ್ಟು ವರ್ಷ ಗುತ್ತಿಗೆ ನೀಡಲು ಜಾಗತಿಕ ಟೆಂಡರ್ ಆಹ್ವಾನಿಸುತ್ತ ಬಂದಿದೆ. ಇದೀಗ ಮತ್ತೆ ಟೆಂಡರ್ ಪ್ರಕ್ರಿಯೆ ನಡೆದಿದೆ.ಪ್ರತಿ ವರ್ಷಕ್ಕೆ ಸುಮಾರು ₹4 ಕೋಟಿಯಂತೆ 30 ವರ್ಷದ ಅವಧಿಗೆ ಗುತ್ತಿಗೆ ನೀಡುವ ಷರತ್ತನ್ನು ಸರ್ಕಾರ ವಿಧಿಸಿದೆ. ಗುತ್ತಿಗೆ ಪಡೆಯುವ ಕಂಪನಿಯು ಇದರ ಪಾರಂಪರಿಕತೆಗೆ ಧಕ್ಕೆ ಆಗದಂತೆ ನಡೆಸಿಕೊಂಡು ಹೋಗುವ ನಿರ್ಬಂಧವನ್ನೂ ಹಾಕಲಾಗಿದೆ. ಆದರೆ ಸರ್ಕಾರದ ದರ ಹಾಗೂ ನಿಯಮಗಳು ಒಪ್ಪಿಗೆಯಾಗದ ಕಾರಣಕ್ಕೆ ಹೆಚ್ಚು ಕಂಪನಿಗಳು ಆಸಕ್ತಿ ತೋರಿಸುತ್ತಿಲ್ಲ. ಹೀಗಾಗಿ ಹಲವು ಬಾರಿ ಟೆಂಡರ್ ಪ್ರಕ್ರಿಯೆ ಮುಂದೂಡುತ್ತಲೇ ಇದೆ.ಐಷಾರಾಮಿ ಆತಿಥ್ಯಕ್ಕೆ ಹೆಸರಾದ ಲಲಿತಮಹಲ್ ಅರಮನೆಯ ನಿರ್ವಹಣೆಯನ್ನು ಖಾಸಗಿಯವರಿಗೆ ನೀಡುವ ಪ್ರಯತ್ನ ಈ ಹಿಂದೆಯೂ ನಡೆದಿತ್ತು. ಟಾಟಾ ಗ್ರೂಪ್ ಹಾಗೂ ರಾಜ್ಯ ಸರ್ಕಾರದ ನಡುವೆ ಈ ಸಂಬಂಧ ಮಾತುಕತೆಯೂ ಆಗಿತ್ತು. ಆದರೆ ನಂತರದಲ್ಲಿ ಅದು ಫಲಪ್ರದ ಆಗಿರಲಿಲ್ಲ.
ಮೈಸೂರು ಅರಸರ ಕಾಲದಲ್ಲಿ ನಿರ್ಮಾಣವಾದ ಈ ಅರಮನೆಯನ್ನು 1974ರಲ್ಲಿ ಐಷಾರಾಮಿ ಹೋಟೆಲ್ ಆಗಿ ಪರಿವರ್ತಿಸಲಾಯಿತು. ಭಾರತೀಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು (ಐಟಿಡಿಸಿ) ನಾಲ್ಕು ದಶಕ ಕಾಲ ಇದನ್ನು ನಿರ್ವಹಿಸಿದ್ದು, ನಿರ್ವಹಣೆ ವೆಚ್ಚ ದುಬಾರಿಯಾದ ಕಾರಣಕ್ಕೆ 2018ರಲ್ಲಿ ಸರ್ಕಾರಕ್ಕೆ ಹಿಂತಿರುಗಿಸಿತ್ತು. ಅಂದಿನಿಂದ ರಾಜ್ಯ ಸರ್ಕಾರದ ಸ್ವಾಮ್ಯದ ಜಂಗಲ್ ಲಾಡ್ವಸ್ ಅಂಡ್ ರೆಸಾರ್ಟ್ಸ್ ಸದ್ಯ ಇದನ್ನು ನಿರ್ವಹಣೆ ಮಾಡುತ್ತಿದೆ.
ಬಿಳಿಯ ಸೌಂದರ್ಯದ ಆಕರ್ಷಣೆ:
ಮೈಸೂರಿನ ಎರಡನೇ ದೊಡ್ಡ ಅರಮನೆಯಾಗಿರುವ ಲಲಿತ ಮಹಲ್ ತನ್ನ ಸೌಂದರ್ಯದಿಂದ ಪ್ರವಾಸಿಗರನ್ನು ಸೆಳೆಯುವ ಪ್ರಮುಖ ತಾಣಗಳಲ್ಲಿ ಒಂದಾಗಿದೆ. ಮೈಸೂರಿನ ಪೂರ್ವ ಭಾಗದಲ್ಲಿ, ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನಿಸರ್ಗದ ಮಡಿಲಿನಲ್ಲಿರುವ ಈ ಅರಮನೆ ಇಂದಿಗೂ ವಿದೇಶಿ ಪ್ರವಾಸಿಗರ ಅಚ್ಚುಮೆಚ್ಚಿನ ಸ್ಥಳಗಳಲ್ಲಿ ಒಂದು.
ಪಾರಂಪರಿಕ ತಾಣ:
ಮೈಸೂರು ಅರಸ ನಾಲ್ವಡಿ ಕೃಷ್ಣರಾಜ ಒಡೆಯರ್ ಇದರ ನಿರ್ಮಾತೃ. 1921ರಲ್ಲಿ ಅಡಿಪಾಯ ಹಾಕಿದ್ದು, 1931ರಲ್ಲಿ ಕಾಮಗಾರಿ ಪೂರ್ಣಗೊಂಡಿತು. ಬಾಂಬೆಯ ಪ್ರಸಿದ್ಧ ವಾಸ್ತುಶಿಲ್ಪಿ ಇ.ಡಬ್ಲ್ಯೂ, ಪ್ರಿಕ್ಸಿ ಇದರ ವಿನ್ಯಾಸ ಮಾಡಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷ್ ವೈಸರಾಯ್ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಗೂ ವಿದೇಶಿಗರಿಗೆ ಆತಿಥ್ಯಕ್ಕಾಗಿ ಈ ಐಷಾರಾಮಿ ಅತಿಥಿಗೃಹ ಬಳಕೆಯಾಗಿತ್ತು.
50ಈ ಅರಮನೆಯನ್ನು ಯುರೋಪಿನ ‘ರಿನೈಸಾನ್ಸ್’ ಶೈಲಿ ಹಾಗೂ ಇಟಾಲಿಯನ್ ‘ಪಲಾಜೊ’ ವಿನ್ಯಾಸದಲ್ಲಿ ನಿರ್ಮಿಸಲಾಗಿದೆ. ಅರಮನೆಯ ಮೇಲ್ಬಾಗದಲ್ಲಿರುವ ಬೃಹತ್ ಗುಮ್ಮಟಗಳನ್ನು ಲಂಡನ್‌ನ ಪ್ರಸಿದ್ಧ ‘ಸೇಂಟ್ ಪಾಲ್ಸ್ ಕ್ಯಾಥೆಡ್ರಲ್’ನ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ.
ಅರಮನೆಯು ಶುದ್ಧ ಬಿಳಿ ಬಣ್ಣದಲ್ಲಿದ್ದು, ದೂರದಿಂದಲೇ ಕಣ್ಣಿಗೆ ಸಳೆಯುವಂತೆ ಕಂಗೊಳಿಸುತ್ತದೆ. ಒಳಗೆ ಇಟಲಿಯಿಂದ ತರಿಸಲಾದ ಅಮೃತಶಿಲೆಯ ಸುಂದರ ಮೆಟ್ಟಿಲುಗಳಿವೆ. ಅರಮನೆಯ ಪಾಕಶಾಲೆ ಹಾಗೂ ಬ್ಯಾಲ್‌ರೂಮ್‌ನ ಮೇಲ್ಪಾವಣಿಯಲ್ಲಿ ಬೆಲ್ಟಿಯಂ ಗಾಜಿನ ಅತ್ಯಾಕರ್ಷಕ ಡೋಮ್ ಹಾಗೂ ಝೂಮರ್‌ಗಳು ಶೋಭಿಸುತ್ತವೆ.ಚಲನಚಿತ್ರ ನಿರ್ಮಾತೃಗಳಿಗೂ ಈ ತಾಣ ಅಚ್ಚುಮೆಚ್ಚು. ಕನ್ನಡದ ಜೊತೆಗೆ ಹಿಂದಿ, ತಮಿಳು ಸೇರಿದಂತೆ ಹಲವು ಭಾಷೆಗಳ ಚಲನಚಿತ್ರಗಳ ಚಿತ್ರೀಕರಣವು ಇಲ್ಲಿ ನಡೆದಿದೆ.ಆದರೆ ನಿರ್ವಹಣೆ ಮಾಡದ ಕಾರಣಕ್ಕೆ ಈ ಪಾರಂಪರಿಕ ಕಟ್ಟಡ ಸದ್ಯ ಭಾಗಶಃ ಶಿಥಿಲ ಸ್ಥಿತಿಯನ್ನು ತಲುಪಿದೆ.










































