ಬೆಳ್ತಂಗಡಿ: ಮ್ಯಾಟ್ರಿಮೋನಿ ಆ್ಯಪ್ ನಲ್ಲಿ ಪರಿಚಯ- ಉದ್ಯಮಿಗೆ 87.22 ಲಕ್ಷ ಪಂಗನಾಮ ಹಾಕಿದ ಮಹಿಳೆ

Picture of Savistara

Savistara

Bureau Report

ಬೆಳ್ತಂಗಡಿ : ಮ್ಯಾಟ್ರಿಮೋನಿ ಆ್ಯಪ್ ಮೂಲಕ ಉದ್ಯಮಿಯೊಬ್ಬರ ಜೊತೆ ಸಲುಗೆ ಬೆಳೆಸಿಕೊಂಡು, ನಾನಾ ನೆಪಗಳನ್ನು ಹೇಳಿ ಹಂತ ಹಂತವಾಗಿ ಬರೋಬ್ಬರಿ ₹87.22 ಲಕ್ಷಕ್ಕೂ ಅಧಿಕ ಹಣವನ್ನು ವರ್ಗಾಯಿಸಿಕೊಂಡು ಮಹಿಳೆಯೊಬ್ಬಳು ವಂಚಿಸಿರುವ ಘಟನೆ ಬೆಳ್ತಂಗಡಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.ಬೆಳ್ತಂಗಡಿ ನಿವಾಸಿಯಾಗಿರುವ ಉದ್ಯಮಿಯೊಬ್ಬರಿಗೆ 2024 ರ ಮೇ ತಿಂಗಳಿನಲ್ಲಿ ಮ್ಯಾಟ್ರಿಮೋನಿ ಆ್ಯಪ್ ಮೂಲಕ ಅನಿಷಾ ಪಾಲನ್ನ (35) ಎಂಬಾಕೆ ಪರಿಚಯವಾಗಿದ್ದಳು. ಇಬ್ಬರೂ ಮೊಬೈಲ್ ಕರೆಗಳ ಮೂಲಕ ನಿರಂತರ ಸಂಪರ್ಕದಲ್ಲಿದ್ದರು.

ಸಂಪರ್ಕದಲ್ಲಿದ್ದ ದಿನಾಂಕ 26-09-2024 ರಿಂದ 20-01-2025 8 ಅವಧಿಯಲ್ಲಿ ಆರೋಪಿ ಅನಿಷಾ ಪಾಲನ್ನ, ಉದ್ಯಮಿಗೆ ಕರೆ ಮಾಡಿ ವಿವಿದ ತುರ್ತು ನೆಪ ಹಾಗೂ ವೈಯಕ್ತಿಕ ಕಾರಣಗಳನ್ನು ನೀಡಿದ್ದಳು. ಇದನ್ನು ನಿಜವೆಂದು ನಂಬಿದ ಉದ್ಯಮಿ, ಆಕೆಯ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 87,22,710 (ಎಂಬತ್ತೇಳು ಲಕ್ಷದ ಇಪ್ಪತ್ತೆರಡು ಸಾವಿರದ ಏಳು ನೂರು ಹತ್ತು ರೂಪಾಯಿ) ಹಣವನ್ನು ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿದ್ದಾರೆ.

ಹಣ ಪಡೆದ ಬಳಿಕ ಆರೋಪಿತೆ ಅನಿಷಾ ಹಣವನ್ನೂ ವಾಪಸ್ ನೀಡದೆ, ಮೊಬೈಲ್ ಸಂಪರ್ಕಕ್ಕೂ ಸಿಗದೆ ತಲೆಮರೆಸಿಕೊಂಡಿದ್ದಾಳೆ. ತಾನು ಮೋಸ ಹೋಗಿರುವುದು ಅರಿವಿಗೆ ಬರುತ್ತಿದ್ದಂತೆ ಸಂತ್ರಸ್ತ ಉದ್ಯಮಿ ಪೊಲೀಸರ ಮೊರೆ ಹೋಗಿದ್ದಾರೆ. ದೂರಿನನ್ವಯ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

[t4b-ticker]
error: Content is protected !!