ಸೌಜನ್ಯ ಪ್ರಕರಣ: ತಾಯಿ ಕುಸುಮಾವತಿಯಿಂದಲೇ ಮರುತನಿಖೆ ಆರಂಭಿಸಿದ ಎಸ್ಐಟಿ!

Picture of Savistara

Savistara

Bureau Report

ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿರುವ ಧರ್ಮಸ್ಥಳ ಗ್ರಾಮದಲ್ಲಿ ನಡೆದ ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣದ ಮರುತನಿಖೆ ಹೊಸ ಆಯಾಮಕ್ಕೆ ಹೆಜ್ಜೆಯಿರಿಸಿದೆ.ಹಿಂದಿನ ತನಿಖೆಯ ವರದಿಗಳು, ಕಡತಗಳ ಪರಿಶೀಲನೆ ಪೂರ್ಣಗೊಳಿಸಿರುವ ವಿಶೇಷ ತನಿಖಾ ತಂಡ, ಸೌಜನ್ಯಾ ತಾಯಿ ಕುಸುಮಾವತಿ ಅವರ ರಕ್ತದ ಮಾದರಿ ಸಂಗ್ರಹಿಸುವ ಮೂಲಕ ತನಿಖಾ ಪ್ರಕ್ರಿಯೆ ಚುರುಕುಗೊಳಿಸಿದೆ.

ಯಾಕಾಗಿ ಈ ರಕ್ತದ ಮಾದರಿ?

ಪ್ರಕರಣದ ಮುಖ್ಯ ತನಿಖಾಧಿಕಾರಿ ಎಸ್. ಲೋಕೇಶ್‌ ಪಿ. ಜಗಲಾಸರ್‌ ಮತ್ತು ಸಹಾಯಕ ತನಿಖಾಧಿಕಾರಿ ಎಸಿಪಿ ಮನೋಜ್ ಕುಮಾರ್ ನಾಯಕ್ ನೇತೃತ್ವದ ಎಸ್‌ಐಟಿ ತಂಡವು ಲ್ಯಾಪ್‌ಟಾಪ್ ಹಾಗೂ ಅಗತ್ಯ ತಾಂತ್ರಿಕ ಸಲಕರಣೆಗಳೊಂದಿಗೆ ಬೆಳ್ತಂಗಡಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಆಗಮಿಸಿ ನ್ಯಾಯಾಧೀಶರಾದ ಶಶಾಂಕ್ ನಾಗೇಂದ್ರ ಭಟ್ ಹಾಗೂ ಇಬ್ಬರು ಸರ್ಕಾರಿ ಪಂಚರ ಸಮ್ಮುಖದಲ್ಲಿ ಸೌಜನ್ಯ ತಾಯಿ ಕುಸುಮಾವತಿ ಅವರ ರಕ್ತದ ಮಾದರಿಯನ್ನು ಸಂಗ್ರಹಿಸಿದೆ.

ಈ ರಕ್ತದ ಮಾದರಿಯನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗುತ್ತಿದ್ದು, ಸೌಜನ್ಯಾ ಶವ ಪತ್ತೆಯಾದ ಸ್ಥಳದಲ್ಲಿ ಸಿಕ್ಕಿರುವ ಜೈವಿಕ ಮಾದರಿಯ ಡಿಎನ್ ಎ ಹೊಂದಾಣಿಕೆ ಪರಿಶೀಲನೆಗೆ ಇದು ಪ್ರಮುಖ ಹೆಜ್ಜೆಯಾಗಿದೆ.

ಘಟನಾ ಸ್ಥಳಕ್ಕೆ ಎಸ್‌ಐಟಿ

ತನಿಖೆಯ ಮುಂದಿನ ಭಾಗವಾಗಿ, 14 ವರ್ಷಗಳ ಹಿಂದೆ ಸೌಜನ್ಯಳ ಮೃತದೇಹ ಪತ್ತೆಯಾಗಿದ್ದ ಘಟನಾ ಸ್ಥಳಕ್ಕೆ ಎಸ್‌ಐಟಿ ಅಧಿಕಾರಿಗಳ ತಂಡ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅಧಿಕಾರಿಗಳು ಇಲ್ಲಿ ಘಟನೆಗಳ ಮರು ಸೃಷ್ಟಿ ನಡೆಸುವ ಸಾಧ್ಯತೆ ಇದೆ.

3 ತಿಂಗಳ ಡೆಡ್‌ಲೈನ್ಸು

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರ ಪೀಠವು ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣದ ಮರುತನಿಖೆಗೆ ಆದೇಶಿಸಿತ್ತು. ಈ ಹಿಂದೆ ಪ್ರಕರಣದ ತನಿಖೆ ನಡೆಸಿದ್ದ ಯಾವುದೇ ಅಧಿಕಾರಿಯನ್ನು ಹೊಸ ತಂಡದಲ್ಲಿ ಸೇರಿಸಿಕೊಳ್ಳಬಾರದು ಎಂದು ಕಟ್ಟುನಿಟ್ಟಿನ ಸೂಚನೆ ಕೂಡಾ ನೀಡಿದ್ದ ನ್ಯಾಯಾಲಯ, ಮುಂದಿನ 3 ತಿಂಗಳ ಒಳಗಾಗಿ ಸಮಗ್ರ ತನಿಖೆ ಪೂರ್ಣಗೊಳಿಸಿ ವರದಿಯನ್ನು ಸಲ್ಲಿಸುವಂತೆ ಮಹತ್ವದ ಗಡುವು ವಿಧಿಸಿತ್ತು.ಸುಪ್ರೀಂ ಕೋರ್ಟ್‌ ಈ ಕಠಿಣ ಆದೇಶದಿಂದಾಗಿ ದಶಕದ ಹಿಂದಿನ ಸೌಜನ್ಯ ಕೊಲೆ ಪ್ರಕರಣದ ತನಿಖೆಗೆ ಈಗ ದೊಡ್ಡ ತಿರುವು ಸಿಕ್ಕಂತಾಗಿದೆ.

[t4b-ticker]
error: Content is protected !!