ಕಾಬೂಲ್: 4 ಪತ್ನಿಯರು ಹಾಗೂ ಬರೋಬ್ಬರಿ 58 ಮಕ್ಕಳನ್ನು ಹೊಂದಿರುವ 57 ವರ್ಷದ ವ್ಯಕ್ತಿಯೊಬ್ಬ ಕುಟುಂಬವನ್ನು ಸಲಹಲಾಗದೇ ತೀವ್ರ ಬಡತನದಿಂದಾಗಿ ಕಣ್ಣೀರಿಡುತ್ತಿರುವ ದುರಂತ ಕಥೆಯೊಂದು ಅಫ್ಘಾನಿಸ್ತಾನದಲ್ಲಿ ಬೆಳಕಿಗೆ ಬಂದಿದೆ. ಉರುಜ್ಗನ್ ಪ್ರಾಂತ್ಯದ ನಿವಾಸಿ ಮಹಮ್ಮದ್ ಸಾದಿಕ್ ಎಂಬಾತನೇ ಈ ಕಷ್ಟದಲ್ಲಿದ್ದ ತಂದೆ.
ಬಿಬಿಸಿ ವರದಿಯ ಪ್ರಮುಖ ಮುಖ್ಯಾಂಶಗಳು:ಹೆಸರು ನೆನಪಿಡಲೂ ಕಷ್ಟ: ಮನೆಯಲ್ಲಿ ಒಟ್ಟು 58 ಮಕ್ಕಳಿದ್ದು, ಸಾದಿಕ್ ಅವರಿಗೆ ಮಕ್ಕಳ ಹೆಸರುಗಳನ್ನು ನೆನಪಿಟ್ಟುಕೊಳ್ಳುವುದೇ ಸವಾಲಾಗಿದೆ. ಊಟದ ಸಮಯದಲ್ಲಿ ಮಕ್ಕಳನ್ನು ಎಣಿಸುವಾಗ ಒಂದು ಮಗು ಕಾಣೆಯಾಗಿದ್ದರೂ ಗಾಬರಿಯಾಗುವ ಪರಿಸ್ಥಿತಿಯಿದೆ.
ಸಾಲದ ಸುಳಿಯಲ್ಲಿ ಬದುಕು: ಕಾರ್ ಶೋರೂಂ ಒಂದರಲ್ಲಿ ಕೆಲಸ ಮಾಡುವ ಸಾದಿಕ್ಗೆ ಕಾರು ಮಾರಾಟವಾದರೆ ದೊರೆಯುವುದು ಕೇವಲ ₹1,475 (1,000 ಅಫ್ಘನ್) ಕಮಿಷನ್.
ಈ ಅಲ್ಪ ಹಣದಿಂದ ಬೃಹತ್ ಕುಟುಂಬದ ಹೊಟ್ಟೆ ತುಂಬಿಸುವುದು ಅಸಾಧ್ಯವಾಗಿದೆ.
ಮಕ್ಕಳೂ ದುಡಿತಕ್ಕೆ: ಬಡತನದ ಕಾರಣಕ್ಕೆ ಸಣ್ಣ ವಯಸ್ಸಿನ ಮಕ್ಕಳೂ ಸಹ ಕೆಲಸಕ್ಕೆ ಇಳಿದಿದ್ದು, ಪ್ಲಾಸ್ಟಿಕ್ ಹಾಗೂ ಕಾಗದ ಸಂಗ್ರಹಿಸಿ ತರುತ್ತಿದ್ದಾರೆ.
14 ಮಕ್ಕಳ ಸಾವು: ಪೋಷಣೆ ಮತ್ತು ಸರಿಯಾದ ವೈದ್ಯಕೀಯ ಸೌಲಭ್ಯ ಸಿಗದೆ ವರ್ಷಗಳ ಅವಧಿಯಲ್ಲಿ ಈಗಾಗಲೇ 14 ಮಕ್ಕಳು ಮೃತಪಟ್ಟಿದ್ದಾರೆ.ಒಂದೇ ಕಂಬಳಿಯಲ್ಲಿ 6-7 ಮಕ್ಕಳು: ಚಳಿಗಾಲದಲ್ಲಿ ಕನಿಷ್ಠ ಸೌಲಭ್ಯವೂ ಇಲ್ಲದೆ 6 ರಿಂದ 7 ಮಕ್ಕಳು ಒಂದೇ ತೆಳುವಾದ ಕಂಬಳಿಯನ್ನು ಹಂಚಿಕೊಂಡು ಮಲಗುವ ಸ್ಥಿತಿಯಿದೆ.
ಪ್ರವಾದಿ ಮೊಹಮ್ಮದರ ಅನುಯಾಯಿಗಳ ಸಂಖ್ಯೆ ಹೆಚ್ಚಿಸುವ ಉದ್ದೇಶದಿಂದ ದೊಡ್ಡ ಕುಟುಂಬ ಬೆಳೆಸಿದೆ ಎಂದು ಹೇಳುವ ಸಾದಿಕ್, ಈಗ ಮಕ್ಕಳಿಗೆ ಕನಿಷ್ಠ ಎರಡು ಹೊತ್ತಿನ ಊಟ ನೀಡಲೂ ಸಾಧ್ಯವಾಗದೆ ನೆರವಿಗಾಗಿ ಸರ್ಕಾರ ಹಾಗೂ ಸ್ವಯಂಸೇವಾ ಸಂಸ್ಥೆಗಳ ಮುಂದೆ ಕಣ್ಣೀರಿಡುತ್ತಿದ್ದಾರೆ.












































