ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿರುವ ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆಯನ್ನು ಸಿಸಿಬಿ (CCB) ಪೊಲೀಸರು ತೀವ್ರಗೊಳಿಸಿದ್ದು, ಒಂದೊಂದೇ ರೋಚಕ ಸತ್ಯಗಳು ಹೊರಬರುತ್ತಿವೆ. ವಿಡಿಯೋದಲ್ಲಿ ಕಾಣಿಸಿಕೊಂಡಿದ್ದ ಮಹಿಳೆ ವಿಚಾರಣೆ ವೇಳೆ ಮಹತ್ವದ ಸುಳಿವು ನೀಡಿದ್ದರೆ, ತಾಂತ್ರಿಕ ಸಾಕ್ಷ್ಯ ಆಧರಿಸಿ ದೆಹಲಿ ಮೂಲದ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ತನಿಖೆಯಲ್ಲಿ ಬಯಲಾದ ಅಚ್ಚರಿಯ ಸಂಗತಿಗಳು:ಮಹಿಳೆಯ ಸ್ಪಷ್ಟನೆ: ವಿಡಿಯೋದಲ್ಲಿ ಕಾಣಿಸಿಕೊಂಡಿದ್ದ ಮಹಿಳೆಯನ್ನು ವಿಚಾರಣೆ ನಡೆಸಿದಾಗ, “ಮುಖ್ಯಮಂತ್ರಿ ಸಿದ್ದರಾಮಯ್ಯ ಪರಿಚಯವಿದ್ದರೂ ವೈಯಕ್ತಿಕ ನಂಟಿಲ್ಲ. ನನ್ನೊಂದಿಗೆ ಅವರ ಹೆಸರಿಸಿ ಬರುತ್ತಿರುವ ಮಾತುಗಳು ಕೇಳಿ ಆಶ್ಚರ್ಯವಾಗಿದೆ” ಎಂದು ಆಕೆ ಸಿಸಿಬಿ ಮುಂದೆ ನುಡಿದಿದ್ದಾರೆ. ಇದು ರಾಜಕೀಯ ದುರುದ್ದೇಶದ ಪಿತೂರಿ ಎಂಬ ಶಂಕೆ ಮೂಡಿಸಿದೆ.
ಹಣಕ್ಕಾಗಿ ವಿಡಿಯೋ ಅಪ್‌ಲೋಡ್: ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಸಿಬಿ, ಯೂಟ್ಯೂಬ್‌ನಲ್ಲಿ ವಿಡಿಯೋ ಅಪ್‌ಲೋಡ್ ಮಾಡಿದ್ದ ದೆಹಲಿ ಮೂಲದ ರಿತೇಶ್ ಪಾಂಡೆ ಎಂಬಾತನನ್ನು ಬಂಧಿಸಿದೆ.
ಸೆಕೆಂಡ್ ಹ್ಯಾಂಡ್ ಮೊಬೈಲ್ ತಂತ್ರ: ಸಿಮ್ ಕಾರ್ಡ್ ಇಲ್ಲದ ಅಥವಾ ಕೆಲಸ ಮಾಡದ ಹಳೆಯ ಮೊಬೈಲ್ ಅನ್ನು ಕರೋಲ್ ಬಾಗ್ ಮಾರುಕಟ್ಟೆಯಲ್ಲಿ ₹15,000 ನೀಡಿ ಖರೀದಿಸಿದ್ದ ಆರೋಪಿ, ವೈ-ಫೈ ಬಳಸಿ ‘ಕರ್ನಾಟಕ ಹನಿಟ್ರ್ಯಾಪ್’ ಖಾತೆ ತೆರೆದು ವಿಡಿಯೋ ಅಪ್‌ಲೋಡ್ ಮಾಡಿದ್ದ.
ಮುಂಗಡ ಹಣ ಸಂದಾಯ: ಪೆನ್‌ಡ್ರೈವ್‌ನಲ್ಲಿದ್ದ ವಿಡಿಯೋವನ್ನು ಒಟಿಜಿ ಕನೆಕ್ಟರ್ ಮೂಲಕ ಹಾಕಿ ಈ ಕೃತ್ಯ ಎಸಗಲಾಗಿದ್ದು, ಈ ಕೆಲಸಕ್ಕಾಗಿ ಆತನಿಗೆ ಮುಂಗಡವಾಗಿ ₹50,000 ಹಣ ಸಂದಾಯವಾಗಿತ್ತು ಎಂಬ ಶಂಕೆ ವ್ಯಕ್ತವಾಗಿದೆ.ಈ ಷಡ್ಯಂತ್ರದ ಹಿಂದೆ ಅಸಲಿ ಸೂತ್ರಧಾರರು ಯಾರು ಎಂಬುದರ ಬಗ್ಗೆ ಸಿಸಿಬಿ ಪೊಲೀಸರು ತೀವ್ರ ಶೋಧ ಮುಂದುವರಿಸಿದ್ದಾರೆ.












































