ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಿಷೇಧಿತ ಚೈನೀಸ್ ಮಾಂಜಾ ದಾರಗಳ ಅಟ್ಟಹಾಸ ಮುಂದುವರಿದಿದ್ದು, ಗಾಳಿಪಟದ ಮಾರಕ ದಾರಕ್ಕೆ ಸಿಲುಕಿ ಬೈಕ್ ಸವಾರರೊಬ್ಬರ ಕುತ್ತಿಗೆ ಭೀಕರವಾಗಿ ಸೀಳಿರುವ ದಾರುಣ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
5 ದಿನಗಳ ಬಳಿಕ ಬೆಳಕಿಗೆ ಬಂದ ಭೀಕರ ಘಟನೆ:
ನಗರದ ಹೆಗಡೆನಗರದ ಮಲ್ಟಿ-ಪ್ಲೈ ಓವರ್ ಮೇಲೆ 5 ದಿನಗಳ ಹಿಂದೆ ಬೈಕ್ ಸವಾರರೊಬ್ಬರು ಪ್ರಯಾಣಿಸುತ್ತಿದ್ದಾಗ ಗಾಳಿಯಲ್ಲಿ ತಲಾಟೆಯಾಡುತ್ತಿದ್ದ ತೆಳುವಾದ ಚೈನೀಸ್ ಮಾಂಜಾ ದಾರ ಕುತ್ತಿಗೆಗೆ ತಗುಲಿದೆ. ಬೈಕ್ ವೇಗದಲ್ಲಿದ್ದ ಕಾರಣ ದಾರವು ಕುತ್ತಿಗೆಯನ್ನು ಆಳವಾಗಿ ಸೀಳಿದ್ದು, ತೀವ್ರ ರಕ್ತಸ್ರಾವ ಉಂಟಾಗಿದೆ. ಸವಾರ ಸಮಯಪ್ರಜ್ಞೆ ಮೆರೆದು ತಕ್ಷಣ ಬೈಕ್ ಪಕ್ಕಕ್ಕೆ ನಿಲ್ಲಿಸಿದ್ದರಿಂದ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಿಷೇಧವಿದ್ದರೂ ನಿಯಂತ್ರಣವಿಲ್ಲ: ನೆಟ್ಟಿಗರ ಆಕ್ರೋಶ
ಹೈಕೋರ್ಟ್ ಹಾಗೂ ಸರ್ಕಾರ ಕಟ್ಟುನಿಟ್ಟಾಗಿ ನಿಷೇಧಿಸಿದ್ದರೂ ನಗರದ ಹಲವೆಡೆ ಅಕ್ರಮವಾಗಿ ನೈಲಾನ್ ಹಾಗೂ ಗಾಜಿನ ಪುಡಿ ಲೇಪಿತ ಮಾಂಜಾ ಮಾರಾಟವಾಗುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಫ್ಲೈ ಓವರ್ಗಳ ಬದಿಯಲ್ಲಿ ಸುರಕ್ಷತಾ ಜಾಲರಿ ಅಳವಡಿಸಲು ಹಾಗೂ ಮಾಂಜಾ ಮಾರಾಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸ್ಥಳೀಯರು ಆಗ್ರಹಿಸಿದ್ದಾರೆ.
ಬೈಕ್ ಸವಾರರಿಗೆ ಸುರಕ್ಷತಾ ಸಲಹೆಗಳು:
ಕುತ್ತಿಗೆಯ ರಕ್ಷಣೆ: ಫ್ಲೈ ಓವರ್ಗಳಲ್ಲಿ ಸಂಚರಿಸುವಾಗ ಕುತ್ತಿಗೆಗೆ ದಪ್ಪನೆಯ ಸ್ಕಾರ್ಫ್ ಅಥವಾ ನೆಕ್ ಗಾರ್ಡ್ ಧರಿಸಿ.
ಹೆಲ್ಮೆಟ್ ವೈಸರ್: ಪ್ರಯಾಣದ ಸಮಯದಲ್ಲಿ ಹೆಲ್ಮೆಟ್ ಗ್ಲಾಸ್ ಅನ್ನು ಸಂಪೂರ್ಣವಾಗಿ ಮುಚ್ಚಿರಿ.
ವೇಗ ನಿಯಂತ್ರಣ: ಗಾಳಿಪಟ ಹಾರಿಸುವ ಪ್ರದೇಶಗಳಲ್ಲಿ ವಾಹನದ ವೇಗ ಹತೋಟಿಯಲ್ಲಿರಲಿ.












































