ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆಶ್ಲೇಷ ಬಲಿ ಪೂಜೆಯ ‘ದಿಟ್ಟಂ’ ಬದಲಾವಣೆ: ಸಾಮೂಹಿಕ ಸಂಕಲ್ಪದ ವಿರುದ್ಧ ಭಕ್ತರ ಆಕ್ರೋಶ!

Picture of Savistara

Savistara

Bureau Report

ಕುಕ್ಕೆ ಸುಬ್ರಹ್ಮಣ್ಯ: ನಾಗಾರಾಧನೆಯ ಪುಣ್ಯಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ನಡೆಯುವ ಪವಿತ್ರ ಆಶ್ಲೇಷ ಬಲಿ ಪೂಜೆಯ ಪದ್ಧತಿಯಲ್ಲಿ ಮಾಡಿರುವ ಬದಲಾವಣೆಗೆ ಭಕ್ತ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.ತುಳುನಾಡಿನಲ್ಲಿ ‘ಬಲಿ’ ಎಂದರೆ ದೇವರ ಆರಾಧನೆ. ನಾಗ ಸಾನಿಧ್ಯ ಇರುವ ಕ್ಷೇತ್ರದಲ್ಲಿ ಈ ಆಶ್ಲೇಷ ಬಲಿ ಪೂಜೆಯನ್ನು ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಗುತ್ತದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಪೂಜೆಗೆ ಹಲವು ಕಾರಣಗಳಿವೆ – ಈ ಜನ್ಮದಲ್ಲಿ ಅಥವಾ ಹಿಂದಿನ ಜನ್ಮದಲ್ಲಿ ಹಾವನ್ನು ಕೊಂದಿದ್ದರೆ, ಹಾವಿನ ಮೊಟ್ಟೆ ಅಥವಾ ಹುತ್ತವನ್ನು ಒಡೆದಿದ್ದರೆ ಸರ್ಪದೋಷ, ಮನೆ ಕಟ್ಟುವಾಗ ನಾಗಸ್ಥಾನಕ್ಕೆ ತೊಂದರೆಯಾದರೆ ನಾಗದೋಷ, ಜಾತಕದಲ್ಲಿ ಎಲ್ಲಾ ಗ್ರಹಗಳು ರಾಹು-ಕೇತು ನಡುವೆ ಸಿಲುಕಿದ್ದರೆ ಕಾಲಸರ್ಪ ದೋಷ, ವಿವಾಹ ವಿಳಂಬಕ್ಕೆ ಕುಜದೋಷ/ಮಂಗಳದೋಷ, ಸಂತಾನ ಭಾಗ್ಯಕ್ಕೆ ಸಂತಾನ ದೋಷ ಹಾಗೂ ಚರ್ಮರೋಗ ನಿವಾರಣೆಗಾಗಿ ಈ ಪೂಜೆಯನ್ನು ಜ್ಯೋತಿಷಿಗಳು ಸೂಚಿಸುತ್ತಾರೆ. ಇಲ್ಲಿ ಅರ್ಚಕರು ಪ್ರತಿ ನಾಗನ ಹೆಸರು ಹೇಳಿ ಬಲಿ ನೀಡಿ ಸಂತೃಪ್ತಿ ಪಡಿಸುತ್ತಾರೆ.

ಪ್ರತ್ಯೇಕ ಸಂಕಲ್ಪವೇ ಈ ಪೂಜೆಯ ಆತ್ಮ!

ಈ ಪೂಜೆಯಲ್ಲಿ ಪ್ರತ್ಯೇಕ ಸಂಕಲ್ಪ ಅತ್ಯಂತ ಅಗತ್ಯ. ಏಕೆಂದರೆ ಪ್ರತಿಯೊಬ್ಬ ಭಕ್ತರ ಸಮಸ್ಯೆ ಬೇರೆ ಬೇರೆಯಾಗಿರುತ್ತದೆ. ಒಬ್ಬರಿಗೆ ಮದುವೆಯಾಗಬೇಕು, ಇನ್ನೊಬ್ಬರಿಗೆ ಮಕ್ಕಳಾಗಬೇಕು, ಮತ್ತೊಬ್ಬರಿಗೆ ಸರ್ಪದೋಷ ನಿವಾರಣೆಯಾಗಬೇಕು. ಎಲ್ಲರಿಗೂ ಒಂದೇ ಸಾಮೂಹಿಕ ಸಂಕಲ್ಪ ಹೇಗೆ ಸಾಧ್ಯ?ಆದರೆ ಇತ್ತೀಚೆಗೆ ದೇವಾಲಯದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದೆ ಎಂಬ ಕಾರಣ ನೀಡಿ, ಪ್ರತ್ಯೇಕ ಸಂಕಲ್ಪವನ್ನು ಕೈಬಿಟ್ಟು ಸಾಮೂಹಿಕ ಸಂಕಲ್ಪವನ್ನು ಆರಂಭಿಸಲಾಗಿದೆ. ಇದು ಖಂಡನೀಯ.

ದೇವಾಲಯ ಯಾರದ್ದೂ ಸ್ವಂತ ಆಸ್ತಿಯಲ್ಲ!

ದೇವಾಲಯಕ್ಕೆ ಹಿಂದಿನಿಂದ ಬಂದ ‘ದಿಟ್ಟಂ’ ಇದೆ. ದಿಟ್ಟಂ ಎಂದರೆ ಪರಂಪರಾಗತವಾಗಿ ಬರೆದಿಟ್ಟಿರುವ ಪೂಜಾ ಪದ್ಧತಿ, ರೀತಿ-ರಿವಾಜುಗಳು. ಅದನ್ನು ಯಾರೋ ಒಬ್ಬರ ಇಷ್ಟದಂತೆ ಬದಲಾಯಿಸಲು ಸಾಧ್ಯವಿಲ್ಲ. ದೇವಾಲಯ ಯಾರದ್ದೋ ಸ್ವಂತ ಆಸ್ತಿಯಲ್ಲ, ಅದು ಸಮಸ್ತ ಹಿಂದೂ ಸಮಾಜದ ಆಸ್ತಿ.ಇಲ್ಲಿ ಆಡಳಿತ ನಡೆಸುವ ಅಧಿಕಾರಿಗಳು ನೆನಪಿಡಬೇಕು, ದೇವರು ನಿಮ್ಮ ಅಧೀನದಲ್ಲಿ ಇಲ್ಲ. ಆ ದೇವರ ಹಣದಲ್ಲಿ ಸಂಬಳ ಪಡೆಯುವವರು ನೀವು. ದೇವರಿಗೆ ಅದರದ್ದೇ ಆದ ರೀತಿಯಲ್ಲಿ ಪೂಜಾ ಪದ್ಧತಿಗಳು ನಡೆಯಲೇಬೇಕು ಎಂಬುದು ಭಕ್ತರ ಒತ್ತಾಯ.

ಸಂಕಲ್ಪ ಮಾಡುವವರಿಂದ ತೊಂದರೆ ಇದ್ದರೆ ಅವರನ್ನು ಬದಲಾಯಿಸಿ, ಅವರನ್ನು ಮನೆಗೆ ಕಳುಹಿಸಿ. ಅದು ಬಿಟ್ಟು ಸಂಕಲ್ಪವನ್ನೇ, ದೇವಾಲಯದ ಪದ್ಧತಿಯನ್ನೇ ವಿರೂಪಗೊಳಿಸಲು ನೀವು ಯಾರು? ಸಂಕಲ್ಪ ಮಾಡುವವರು ಸರಿಯಿಲ್ಲ ಎಂದರೆ ಅವರನ್ನು ಬದಲಾಯಿಸಿ, ಪದ್ಧತಿಯನ್ನು ಬದಲಾಯಿಸಬೇಡಿ!ಈ ಸರ್ಕಾರ ಬಂದ ನಂತರ ಹಿಂದೂ ದೇವಾಲಯಗಳನ್ನು ಹಣ ಮಾಡುವ ವ್ಯಾಪಾರ ಕೇಂದ್ರಗಳಂತೆ ನೋಡಲಾಗುತ್ತಿದೆ. ದೇವಾಲಯದ ಹಣವನ್ನು ದುಂದುವೆಚ್ಚ ಮಾಡುವುದನ್ನು ಬಿಟ್ಟು, ಭಕ್ತರ ಸೌಕರ್ಯಕ್ಕೆ ಮತ್ತು ದೇವಾಲಯದ ಅಭಿವೃದ್ಧಿಗೆ ಬಳಸಬೇಕು.

ನಮ್ಮ ಒತ್ತಾಯಗಳು:

1. ಆಶ್ಲೇಷ ಬಲಿ ಪೂಜೆಯಲ್ಲಿ ಪ್ರತ್ಯೇಕ ಸಂಕಲ್ಪ ಪದ್ಧತಿಯನ್ನು ತಕ್ಷಣ ಮರುಜಾರಿ ಮಾಡಬೇಕು.

2. ದೇವಾಲಯದ ದಿಟ್ಟಂಗೆ ವಿರುದ್ಧವಾಗಿರುವ ಸಾಮೂಹಿಕ ಸಂಕಲ್ಪ ಪದ್ಧತಿಯನ್ನು ಕೂಡಲೇ ಕೈಬಿಡಬೇಕು.

3.ಭಕ್ತರ ಸಂಖ್ಯೆ ಹೆಚ್ಚಾಗಿದೆ ಎಂಬ ಕಾರಣಕ್ಕೆ ಪದ್ಧತಿ ಬದಲಾಯಿಸಬಾರದು, ಬದಲಿಗೆ ವ್ಯವಸ್ಥೆಯನ್ನು ಹೆಚ್ಚಿಸಬೇಕು.

4.ದೇವಾಲಯದ ಹಣವನ್ನು ಭಕ್ತರ ಸೌಕರ್ಯ ಮತ್ತು ದೇವಾಲಯದ ಅಭಿವೃದ್ಧಿಗೆ ಬಳಸಬೇಕು.ಈ ಬೇಡಿಕೆಗಳನ್ನು ಈಡೇರಿಸದಿದ್ದರೆ, ಭಕ್ತರೊಂದಿಗೆ ಸೇರಿ ನ್ಯಾಯಬದ್ಧ ಹೋರಾಟ ನಡೆಸಲಾಗುವುದು.ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯರುರಾದ ಪ್ರಸನ್ನ ದರ್ಬೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

[t4b-ticker]
error: Content is protected !!