ಉತ್ತರ ಪ್ರದೇಶ ಸರ್ಕಾರಿ ಶಾಲೆಗಳಲ್ಲಿ ಇನ್ಮುಂದೆ ದಿನಪತ್ರಿಕೆ ಓದು ಕಡ್ಡಾಯ

Picture of Savistara

Savistara

Bureau Report

ಲಕ್ಕೋ: ಮಕ್ಕಳಲ್ಲಿ ಮೊಬೈಲ್ ಬಳಕೆಯನ್ನು ತಗ್ಗಿಸುವುದು ಮತ್ತುಬಾಲ್ಯದಿಂದಲೇ ಓದುವ ಹವ್ಯಾಸವನ್ನು ರೂಢಿಸಲು ಎಲ್ಲಾ ಶಾಲೆಗಳಲ್ಲಿ ಪ್ರತಿನಿತ್ಯ 10 ನಿಮಿಷ ದಿನ ಪತ್ರಿಕೆಗಳನ್ನು ಓದುವುದನ್ನು ಉತ್ತರ ಪ್ರದೇಶ ಸರ್ಕಾರ ಕಡ್ಡಾಯಗೊಳಿಸಿದೆ. ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಪ್ರಾರ್ಥನೆಯ ವೇಳೆ ವಿದ್ಯಾರ್ಥಿಗಳಿಂದಲೇ ಪತ್ರಿಕೆ ಓದಿಸಬೇಕು ಎಂದು ಸೂಚಿಸಿದೆ.

ಡಿ.23ರಂದು ಈ ಆದೇಶವನ್ನು ಉತ್ತರ ಪ್ರದೇಶ ಸರ್ಕಾರ ಹೊರಡಿಸಿದ್ದು, ಹಿಂದಿ ಮತ್ತು ಇಂಗ್ಲಿಷ್ ಪತ್ರಿಕೆಗಳನ್ನು ಓದಬೇಕು ಎಂದು ಸೂಚಿಸಿದೆ. ಇದಕ್ಕಾಗಿ ಕಡ್ಡಾಯವಾಗಿ 10 ನಿಮಿಷವನ್ನು ಎಲ್ಲಾ ಶಾಲೆಗಳು ಮೀಸಲಿಡಬೇಕು. ಪತ್ರಿಕೆಗಳಲ್ಲಿರುವ ಪ್ರಮುಖ ಅಂಶಗಳನ್ನು ವಿದ್ಯಾರ್ಥಿಗಳು ಓದಬೇಕು. ಅದರಲ್ಲಿ ಪ್ರಮುಖವಾಗಿ ಸಂಪಾದಕೀಯ, ರಾಜ್ಯ, ರಾಷ್ಟ್ರ ಮತ್ತು ಕ್ರೀಡಾ ಸುದ್ದಿಗಳಿರಬೇಕು ಎಂದು ಸೂಚಿಸಿದೆ.

ಓದುವ ಹವ್ಯಾಸ ಬೆಳೆಸಲು ಈ ನಿರ್ಧಾರ:

ಬಾಲ್ಯದಿಂದಲೇ ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸಲು ಈ ನಿರ್ಧಾರ ಕೈಗೊಂಡಿರುವುದಾಗಿ ಉತ್ತರ ಪ್ರದೇಶ ರಾಜ್ಯ ಸರ್ಕಾರ ಹೇಳಿದೆ. ಕಡ್ಡಾಯವಾಗಿ ಪತ್ರಿಕೆಯನ್ನು ಕೈಯಲ್ಲಿ ಹಿಡಿದು ಓದಲು ಸೂಚಿಸಿರುವುದರಿಂದ ಮಕ್ಕಳು ಮೊಬೈಲ್ ಬಳಕೆ ಮಾಡುವುದನ್ನು ಕಡಿಮೆ ಮಾಡಬಹುದು ಎಂದು ಹೇಳಿದೆ. ಇದರಿಂದಾಗಿ ಮಕ್ಕಳಲ್ಲಿ ಸಾಮಾನ್ಯ ಜ್ಞಾನ, ಪದ ಜ್ಞಾನ, ಬರವಣಿಗೆ, ಯೋಚಿಸುವ ಸಾಮರ್ಥ್ಯ ಹೆಚ್ಚಲಿದೆ. ಪ್ರಪಂಚದಲ್ಲಿ ಏನಾಗುತ್ತಿದೆ ಎಂಬ ಅರಿವು ಮಕ್ಕಳಿಗೆ ಬೆಳಯಲಿದೆ ಎಂದು ರಾಜ್ಯ ಸರ್ಕಾರ ಹೇಳಿದೆ.

ಪ್ರತಿನಿತ್ಯದ ಕಾರ್ಯಕ್ರಮ:

ಪತ್ರಿಕೆ ಓದುವುದನ್ನು ಪ್ರತಿನಿತ್ಯ ಕಡ್ಡಾಯವಾಗಿ ನಡೆಸಲು ಸೂಚಿಸಲಾಗಿದೆ. ಶಾಲೆಯ ಗ್ರಂಥಾಲಯಗಳಲ್ಲಿ ಎಲ್ಲಾ ಪ್ರಮುಖ ಪತ್ರಿಕೆಗಳನ್ನು ಇಡಬೇಕು. ಪ್ರಾರ್ಥನೆಯ ಸಮಯದಲ್ಲಿ 10 ನಿಮಿಷ ಪತ್ರಿಕೆ ಓದಲು ಮೀಸಲಿಡಬೇಕು. ಪ್ರತಿನಿತ್ಯ 5 ಕಷ್ಟದ ಪದಗಳನ್ನು ಆಯ್ಕೆ ಮಾಡಿ ಅವುಗಳನ್ನು ಮಕ್ಕಳಿಗೆ ಕಲಿಸಬೇಕು. ಅವುಗಳನ್ನು ದಿನಪೂರ್ತಿ ಶಾಲೆಯ ನೋಟಿಸ್ ಬೋರ್ಡ್‌ಗಳಲ್ಲಿ ಬರೆದಿಡಬೇಕು. ತಿಂಗಳಿಗೊಮ್ಮೆ ವಿದ್ಯಾರ್ಥಿಗಳಿಂದಲೇ ಶಾಲೆಯ ಬಗ್ಗೆ ಪತ್ರಿಕೆ ರೂಪಿಸಬೇಕು. ಪ್ರಮುಖ ಸುದ್ದಿಗಳ ಬಗ್ಗೆ ಚರ್ಚೆ ನಡೆಸಲು ಅವಕಾಶ ಕೊಡಬೇಕು ಎಂದು ಸೂಚನೆಯಲ್ಲಿ ತಿಳಿಸಲಾಗಿದೆ.

ಏನಿದು ಆದೇಶ?

ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ನಿತ್ಯ ಪ್ರಾರ್ಥನೆಯ ಸಮಯದಲ್ಲಿ ಪತ್ರಿಕೆ ಓದುವುದನ್ನು ಉತ್ತರ ಪ್ರದೇಶ ಸರ್ಕಾರ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಅದರಂತೆ, ಪ್ರತಿದಿನ ಬೆಳಗ್ಗೆ ಹಿಂದಿ, ಇಂಗ್ಲಿಷ್ ಪತ್ರಿಕೆ ಓದುವುದನ್ನು ಕಡ್ಡಾಯ ಮಾಡಲಾಗಿದೆ. ಅಲ್ಲದೇ ಪತ್ರಿಕೆಗಳಲ್ಲಿನ ಕಷ್ಟದ ಪದಗಳನ್ನು ಆಯ್ಕೆ ಮಾಡಿ ಅದನ್ನು ವಿದ್ಯಾರ್ಥಿಗಳಿಗೆ ಕಲಿಸಲು ಸೂಚಿಸಲಾಗಿದೆ.

ಯಾಕೆ ಆದೇಶ?

ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಲು

ಸಾಮಾನ್ಯ ಜ್ಞಾನ, ಪದಜ್ಞಾನ ಹೆಚ್ಚಿಸಲು

ಭಾಷೆಯ ಬಳಕೆಯ ಮೇಲೆ ಹಿಡಿತ ಸಾಧಿಸಲು

ಮಕ್ಕಳನ್ನು ಸಮಾಜಮುಖಿಯಾಗಿಸಲು

ಮಕ್ಕಳಲ್ಲಿ ಯೋಚನಾ ಸಾಮರ್ಥ್ಯವನ್ನು ಹೆಚ್ಚಿಸಲು

ಮಕ್ಕಳ ಸ್ಟೀನ್ ಸಮಯವನ್ನು ತಗ್ಗಿಸಲು

[t4b-ticker]
error: Content is protected !!