ಬೆಂಗಳೂರು: ಶಿಶುಗಳಿಗೆ ನೀಡಲಾಗುವ ಫಾರ್ಮುಲಾ ಆಹಾರ ಉತ್ಪನ್ನಗಳ ವಿಚಾರದಲ್ಲಿ ಪೋಷಕರು ತೀವ್ರ ಎಚ್ಚರಿಕೆ ವಹಿಸಬೇಕಾದ ಅಗತ್ಯ ಎದುರಾಗಿದೆ. ಬೆಂಗಳೂರಿನ ಪ್ರಸಿದ್ಧ ‘ಬ್ರಿಟಿಷ್ ಲೈಫ್‌ಸೈನ್ಸಸ್’ (M/s British Lifesciences Pvt. Ltd.) ಸಂಸ್ಥೆಯ ಮೇಲೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದು, ಮಿಸ್ ಬ್ರಾಂಡೆಡ್ ಶಿಶು ಆಹಾರ ಉತ್ಪನ್ನಗಳನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ.
ಪ್ರಾಧಿಕಾರದ ನಿಯಮಗಳನ್ನು ಗಾಳಿಗೆ ತೂರಿ, ಗ್ರಾಹಕರನ್ನು ದಾರಿತಪ್ಪಿಸುವ ಹಾಗೂ ಅಪೂರ್ಣ ಪೌಷ್ಟಿಕಾಂಶ ವಿವರಗಳ ಲೇಬಲ್ ಹೊಂದಿದ್ದ ಶಿಶು ಆಹಾರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆಹಾರ ಉತ್ಪನ್ನಗಳ ಲೇಬಲಿಂಗ್‌ನಲ್ಲಿ ಕಡ್ಡಾಯ ಮಾಹಿತಿಯನ್ನು ಮರೆಮಾಚಿ ನಿಯಮ ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಸಂಸ್ಥೆಯ ವಿರುದ್ಧ ಎಫ್.ಎಸ್.ಎಸ್ ಆಕ್ಟ್ ಅಡಿಯಲ್ಲಿ ತನಿಖೆ ಹಾಗೂ ಕಾನೂನು ಕ್ರಮ ಜರುಗಿಸಲಾಗಿದೆ.ಸಾಮಾನ್ಯವಾಗಿ ವೈದ್ಯರ ಸಲಹೆಯ ಮೇರೆಗೆ, ವಿಶೇಷವಾಗಿ ಅವಧಿಗೂ ಮುನ್ನ ಜನಿಸುವ (Premature) ಶಿಶುಗಳಿಗೆ ಪೌಷ್ಟಿಕಾಂಶ ಪೂರೈಕೆಗಾಗಿ ಫಾರ್ಮುಲಾ ಆಹಾರ ಹಾಗೂ ತರಕಾರಿ/ಧಾನ್ಯಗಳ ಹಿಟ್ಟು (Cereals) ನೀಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಎಫ್‌ಎಸ್‌ಎಸ್‌ಎಐ ಅಧಿಕಾರಿಗಳು ನಗರದಲ್ಲೆಡೆ Infant Formula ಹಾಗೂ ನ್ಯೂಟ್ರಿಷನ್ ಉತ್ಪನ್ನಗಳ ಗುಣಮಟ್ಟದ ಕುರಿತು ತೀವ್ರ ಪರಿಶೀಲನೆ ನಡೆಸುತ್ತಿದ್ದಾರೆ.
















































