ಕರಾವಳಿಯ ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಧಾರ್ಮಿಕ ಸೇವೆಗಳ ದರದಲ್ಲಿ ಮಹತ್ವದ ಪರಿಷ್ಕರಣೆ ನಡೆಸಲಾಗಿದ್ದು, ಭಕ್ತರಿಗೆ ಹೊಸ ದರಗಳು ಅನ್ವಯವಾಗಲಿವೆ. ದೇವಾಲಯದ ಪ್ರಮುಖ ಸೇವೆಗಳಲ್ಲಿ ಒಂದಾದ ಪಂಚಾಮೃತ ಮಹಾಭಿಷೇಕ ಸೇವೆಯ ಶುಲ್ಕವನ್ನು ಗಣನೀಯವಾಗಿ ಹೆಚ್ಚಿಸಲಾಗಿದ್ದು, ಇದರ ಜೊತೆಗೆ ನೂತನವಾಗಿ ‘ಬೆಳ್ಳಿ ರಥೋತ್ಸವ’ ಸೇವೆಯನ್ನು ಆರಂಭಿಸಲಾಗಿದೆ.
ಸೇವೆಗಳ ಹೊಸ ದರ ಮತ್ತು ವಿವರಗಳು:ಪಂಚಾಮೃತ ಮಹಾಭಿಷೇಕ ಸೇವೆ: ಈ ಹಿಂದೆ ಈ ವಿಶೇಷ ಸೇವೆಗೆ 6,000 ರೂ. ಶುಲ್ಕವಿತ್ತು. ಆದರೆ, ಇದೀಗ ಪರಿಷ್ಕೃತ ದರದನ್ವಯ ಈ ಸೇವೆಗೆ 11,000 ರೂ. ನಿಗದಿಪಡಿಸಲಾಗಿದೆ.
ಬೆಳ್ಳಿ ರಥೋತ್ಸವ ಸೇವೆ: ದೇವಾಲಯದಲ್ಲಿ ಹೊಸದಾಗಿ ಆರಂಭಿಸಲಾಗಿರುವ ಬೆಳ್ಳಿ ರಥ ಸೇವೆಗೆ 12,000 ರೂ. ದರ ನಿಗದಿಪಡಿಸಲಾಗಿದೆ.
ಬೆಳ್ಳಿ ರಥೋತ್ಸವದ ವಿಶೇಷ ನಿಯಮಗಳು:ಕಾರ್ತಿಕ ಮಾಸದ ಶುದ್ಧ ಷಷ್ಠಿಯಿಂದ ಜೇಷ್ಠ ಮಾಸದ ಶುದ್ಧ ಷಷ್ಠಿಯವರೆಗೆ ನಿರ್ದಿಷ್ಟ ದಿನಗಳಲ್ಲಿ ಮಾತ್ರ ಭಕ್ತರು ಹರಿಕೆ ಸೇವೆಯಾಗಿ ಈ ಬೆಳ್ಳಿ ರಥೋತ್ಸವವನ್ನು ನೆರವೇರಿಸಲು ಅವಕಾಶ ಕಲ್ಪಿಸಲಾಗಿದೆ. ಪ್ರತಿ ತಿಂಗಳ ಶುದ್ಧ ಮತ್ತು ಬಹುಳ ಪಕ್ಷದ ಬಿದಿಗೆ, ಚೌತಿ, ಷಷ್ಠಿ, ನವಮಿ ಹಾಗೂ ಚತುರ್ದಶಿ (ಒಟ್ಟು 10 ದಿನಗಳು) ಈ ಸೇವೆ ಲಭ್ಯವಿರಲಿದೆ.ಆದರೆ, ಬೆಳ್ಳಿ ರಥೋತ್ಸವ ಸೇವೆ ನಡೆಯುವ ದಿನಗಳಲ್ಲಿ ‘ಭಂಡಿ ರಥೋತ್ಸವ’ ಸೇವೆ ಇರುವುದಿಲ್ಲ. ಹಾಗೆಯೇ, ದೇವಾಲಯದಲ್ಲಿ ‘ಬೀದಿ ಉತ್ಸವ’ ಜರುಗುವ ವಿಶೇಷ ದಿನಗಳಂದೂ ಸಹ ಬೆಳ್ಳಿ ರಥೋತ್ಸವ ಸೇವೆ ಇರುವುದಿಲ್ಲ ಎಂದು ದೇವಾಲಯದ ಅಧಿಕೃತ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.












































