ಭಕ್ತಿ ಮತ್ತು ಸಂಪ್ರದಾಯದ ಹೆಸರಿನಲ್ಲಿ ನಡೆಯುವ ಕೆಲವು ಆಚರಣೆಗಳು ಕೆಲವೊಮ್ಮೆ ಯಾವ ಮಟ್ಟಕ್ಕೆ ಹೋಗಿ ಮುಟ್ಟುತ್ತವೆ ಎಂಬುದಕ್ಕೆ ಕರ್ನೂಲು ಮತ್ತು ಬಳ್ಳಾರಿ ಗಡಿಭಾಗದಲ್ಲಿ ನಡೆದ ಭೀಕರ ಘಟನೆಯೇ ಸಾಕ್ಷಿಯಾಗಿದೆ. ವಿಜಯದಶಮಿಯ ಸಂಭ್ರಮದಲ್ಲಿ ನಡೆಯಬೇಕಿದ್ದ ಪರಂಪರೆಯ ಆಚರಣೆಯೊಂದು ಅಂತಿಮವಾಗಿ ರಕ್ತಸಿಕ್ತ ಕಾಳಗವಾಗಿ ಬದಲಾಗಿದ್ದು, ನೂರಾರು ಮಂದಿ ಗಾಯಗೊಂಡು, ಓರ್ವ ಯುವಕ ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ವರದಿಯಾಗಿದೆ.ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಗಡಿಭಾಗ ಹಾಗೂ ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ನೇರಣಿಕೆ ದೇವರಗುಡ್ಡದಲ್ಲಿ ಈ ಅನಾಹುತ ಸಂಭವಿಸಿದೆ. ಮಾಳ ಮಲ್ಲೇಶ್ವರ ಸ್ವಾಮಿಯ ಪ್ರಸಿದ್ಧ ಸಾಂಪ್ರದಾಯಿಕ ‘ಬಣ್ಣಿ ಮಹೋತ್ಸವ’ (ಬಡಿಗೆ ಜಾತ್ರೆ) ವೇಳೆ ಈ ಘಟನೆ ನಡೆದಿದೆ.
ಜಾತ್ರೆಯಲ್ಲಿ ನಡೆದಿದ್ದೇನು?
ದೇವರು ಮತ್ತು ಅಸುರರ ನಡುವಿನ ಯುದ್ಧದ ಸಂಕೇತವಾಗಿ ಈ ಜಾತ್ರೆಯನ್ನು ಆಚರಿಸಿಕೊಂಡು ಬರಲಾಗುತ್ತದೆ. ಈ ಬಾರಿಯ ಉತ್ಸವದಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಮಹಾರಾಷ್ಟ್ರದಿಂದ ಸುಮಾರು 4 ರಿಂದ 5 ಲಕ್ಷಕ್ಕೂ ಅಧಿಕ ಭಕ್ತರು ಸೇರಿದ್ದರು.
ವಿಜಯದಶಮಿಯ ರಾತ್ರಿ ಮಲ್ಲಯ್ಯ ಮತ್ತು ಮಾಳಮ್ಮನ ಉತ್ಸವ ಮೂರ್ತಿಗಳ ಮೆರವಣಿಗೆ ಸಾಗುತ್ತಿದ್ದ ವೇಳೆ, ಆ ಮೂರ್ತಿಗಳನ್ನು ತಮ್ಮ ತಮ್ಮ ಗ್ರಾಮಗಳಿಗೆ ಕೊಂಡೊಯ್ಯಲು ಸುತ್ತಮುತ್ತಲಿನ ಹಳ್ಳಿಗಳ ಜನರು ಮುಗಿಬಿದ್ದಿದ್ದಾರೆ. ಇದಕ್ಕೆ ನೇರಣಿಕೆ ಹಾಗೂ ಸ್ಥಳೀಯ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಸುಮಾರು 11 ಗ್ರಾಮಗಳ ಜನರ ನಡುವೆ ಭೀಕರ ಸಂಘರ್ಷ ಏರ್ಪಟ್ಟಿದೆ.
ಮೈಯಿಂದ ರಕ್ತ ಸುರಿದರೂ ಮುಂದುವರಿದ ಕಾಳಗ:ಕೈಯಲ್ಲಿ ಬಡಿಗೆಗಳು ಹಾಗೂ ಉರಿಯುವ ಪಂಜುಗಳನ್ನು ಹಿಡಿದು ರಾತ್ರಿಯಿಡಿಯಿಂದ ಮುಂಜಾನೆಯವರೆಗೆ ಎರಡು ಗುಂಪುಗಳ ನಡುವೆ ಭಾರಿ ಕಾದಾಟ ನಡೆದಿದೆ. ಕಲ್ಲು ತೂರಾಟವೂ ನಡೆದ ಪರಿಣಾಮ ಇಡೀ ಪ್ರದೇಶವು ರಣರಂಗವಾಗಿ ಮಾರ್ಪಟ್ಟಿತು. ‘ಮಲ್ಲಯ್ಯ ಉಧೋ ಉಧೋ’ ಎನ್ನುತ್ತಾ ಪರಸ್ಪರ ಬಡಿಗೆಗಳಿಂದ ಹೊಡೆದಾಡಿಕೊಂಡ ಭಕ್ತರ ಮೈಯಿಂದ ರಕ್ತ ಹರಿದರೂ, ಗಾಯಗಳಿಗೆ ಭಂಡಾರ (ಅರಿಶಿನ) ಲೇಪಿಸಿಕೊಂಡು ಉತ್ಸವವನ್ನು ಮುಂದುವರಿಸಿದ್ದು ವಿಶೇಷ ಹಾಗೂ ಆತಂಕಕಾರಿ ಸಂಗತಿಯಾಗಿದೆ.
ಈ ಘಟನೆಯಲ್ಲಿ ಒಟ್ಟು 100ಕ್ಕೂ ಹೆಚ್ಚು ಭಕ್ತರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಲ್ಲದೆ, ಆಂಧ್ರಪ್ರದೇಶದ ಆದೋನಿ ಪಟ್ಟಣದ ನಿವಾಸಿ ಪೋತರಾಜು (28) ಎಂಬ ದುರ್ದೈವಿ ಯುವಕ ಈ ಕಾದಾಟದಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ.ಸಾಮಾನ್ಯವಾಗಿ ಈ ಪಾರಂಪರಿಕ ಆಚರಣೆಯಲ್ಲಿ ಪೊಲೀಸರು ಹಸ್ತಕ್ಷೇಪ ಮಾಡುವುದಿಲ್ಲ.
ಆದರೆ ಪರಿಸ್ಥಿತಿ ಸಂಪೂರ್ಣ ಮಿತಿಮೀರಿ ಹೋಗಿದ್ದರಿಂದ ಪೊಲೀಸರು ಅನಿವಾರ್ಯವಾಗಿ ಮಧ್ಯಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು. ಬುಧವಾರ ರಾತ್ರಿಯಿಂದ ಗುರುವಾರ ಬೆಳಗಿನ ಜಾವದವರೆಗೆ ಈ ಹೈಡ್ರಾಮಾ ಮುಂದುವರಿದಿತ್ತು. ಭಕ್ತಿ ಮತ್ತು ನಂಬಿಕೆಯ ಹೆಸರಿನಲ್ಲಿ ನಡೆದ ಈ ಹಿಂಸಾಕಾಂಡವು ಸಾರ್ವಜನಿಕ ವಲಯದಲ್ಲಿ ತೀವ್ರ ಕಳಕಳಿಗೆ ಕಾರಣವಾಗಿದೆ.












































