ಕರ್ನಾಟಕ ಸೈಬರ್ ಕಮಾಂಡ್ ಪೊಲೀಸರು ಹಾಗೂ ದೂರಸಂಪರ್ಕ ಇಲಾಖೆಯು ಜಂಟಿಯಾಗಿ ಕಾರ್ಯಾಚರಣೆ ನಡೆಸಿ, ಏರ್ಟೆಲ್ ಕಂಪನಿಯ ಸಿಮ್ ಕಾರ್ಡ್ಗಳನ್ನು ಅಕ್ರಮವಾಗಿ ಬಳಸಿಕೊಂಡು ನಡೆಸುತ್ತಿದ್ದ ಬೃಹತ್ ಸಿಮ್ ಬಾಕ್ಸ್ ದಂಧೆಯ ಜಾಲವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕೃತ್ಯಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಎರಡು ಕಡೆ ಏಕಕಾಲದಲ್ಲಿ ದಾಳಿ, 10 ಸಿಮ್ ಬಾಕ್ಸ್ ಪತ್ತೆ:ಬೆಂಗಳೂರಿನ ಕಾಡುಗೋಡಿ ಮತ್ತು ಪಟ್ಟಂದೂರು ಅಗ್ರಹಾರ ಪ್ರದೇಶಗಳಲ್ಲಿ ಈ ಅಕ್ರಮ ಸಿಮ್ ಬಾಕ್ಸ್ ಜಾಲ ಕಾರ್ಯಾಚರಣೆ ನಡೆಸುತ್ತಿರುವುದು ತನಿಖೆಯಿಂದ ಬಯಲಾಗಿದೆ. ಕಾಡುಗೋಡಿಯ ಅಪಾರ್ಟ್ಮೆಂಟ್ ಒಂದರಲ್ಲಿ 192 ಸಿಮ್ಗಳ ಸಾಮರ್ಥ್ಯದ 6 ಸಿಮ್ ಬಾಕ್ಸ್ಗಳು ಪತ್ತೆಯಾದರೆ, ಪಟ್ಟಂದೂರು ಅಗ್ರಹಾರದಲ್ಲಿ ತಲಾ 4 ಸಿಮ್ ಬಾಕ್ಸ್ಗಳು ಹಾಗೂ 128 ಸಿಮ್ಗಳ ಸಾಮರ್ಥ್ಯದ ವ್ಯವಸ್ಥೆ ಪತ್ತೆಯಾಗಿದೆ. ಒಟ್ಟು 10 ಸಿಮ್ ಬಾಕ್ಸ್ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದಕ್ಕೆ ಏರ್ಟೆಲ್ ಸಿಮ್ಗಳನ್ನು ಬಳಸಿರುವುದು ತನಿಖೆಯಲ್ಲಿ ದೃಢಪಟ್ಟಿದೆ.
ಅಕ್ರಮ ಸಿಮ್ ಬಾಕ್ಸ್ ಜಾಲ ಎಂದರೇನು?
ಅಂತಾರಾಷ್ಟ್ರೀಯ ಕರೆಗಳನ್ನು ಇಂಟರ್ನೆಟ್ ಮೂಲಕ ರಹಸ್ಯವಾಗಿ ಸ್ವೀಕರಿಸಿ, ಬಳಿಕ ಅವುಗಳನ್ನು ಭಾರತದ ಸ್ಥಳೀಯ ಕರೆಗಳನ್ನಾಗಿ (Local Calls) ಪರಿವರ್ತನೆ ಮಾಡುವ ಕಾನೂನುಬಾಹಿರ ಟೆಲಿಕಾಂ ಜಾಲವೇ ಸಿಮ್ ಬಾಕ್ಸ್ ದಂಧೆಯಾಗಿದೆ. ಸ್ಥಳೀಯ ನಂಬರ್ಗಳೇ ಕಾಣಿಸುವುದರಿಂದ ಸಾರ್ವಜನಿಕರು ಸುಲಭವಾಗಿ ವಂಚಕರ ಜಾಲಕ್ಕೆ ಬೀಳುತ್ತಾರೆ.
ಡಿಜಿಟಲ್ ಅರೆಸ್ಟ್ ಹಾಗೂ ಸೆಕ್ಸ್ಟಾರ್ಷನ್ಗೆ ಲಿಂಕ್:ಈ ಸಿಮ್ ಬಾಕ್ಸ್ ಜಾಲದ ಮೂಲಕ ದೇಶಾದ್ಯಂತ ನಡೆಯುತ್ತಿದ್ದ ಡಿಜಿಟಲ್ ಅರೆಸ್ಟ್ ವಂಚನೆ, ಸೆಕ್ಸ್ಟಾರ್ಷನ್ ಹಾಗೂ ಸೈಬರ್ ಹಣಕಾಸು ವಂಚನೆಗಳೊಂದಿಗೆ ನಂಟಿರುವ ಬಲವಾದ ಶಂಕೆ ವ್ಯಕ್ತವಾಗಿದೆ. ಈ ಜಾಲದ ಮೂಲಕ ನೂರಾರು ಕೋಟಿ ರೂಪಾಯಿಗಳಿಗೂ ಅಧಿಕ ಹಣಕಾಸು ವಂಚನೆ ನಡೆದಿರುವ ಸಾಧ್ಯತೆಯಿದ್ದು, ಆ ಬಗ್ಗೆಯೂ ತನಿಖೆ ಮುಂದುವರಿದಿದೆ.
ಮಹಾರಾಷ್ಟ್ರದಿಂದ ಸಿಮ್ ಪೂರೈಕೆ:ಮಹಾರಾಷ್ಟ್ರದ ತಿರೋಡಾದಲ್ಲಿ ಸಿಮ್ ಕಾರ್ಡ್ಗಳನ್ನು ಖರೀದಿಸಿ, ನಂತರ ಅವುಗಳನ್ನು ಇ-ಸಿಮ್ಗಳಾಗಿ (e-SIM) ಪರಿವರ್ತಿಸಿ ಬೆಂಗಳೃತೂರಿಗೆ ಪೂರೈಸಲಾಗುತ್ತಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ. ಸದ್ಯ ಈ ಪ್ರಕರಣದಲ್ಲಿ ಮಹಾರಾಷ್ಟ್ರದ ನಾಲ್ವರನ್ನು ಬಂಧಿಸಲಾಗಿದ್ದು, ಈ ಜಾಲದಲ್ಲಿ ಇನ್ನು ಯಾರ್ಯಾರು ಭಾಗಿಯಾಗಿದ್ದಾರೆ ಎಂಬ ಬಗ್ಗೆ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.












































