
ಅಹಮದಾಬಾದ್: ಏರ್ ಇಂಡಿಯಾ ವಿಮಾನ ಪತನವಾದ ಸ್ಥಳಕ್ಕೆ ಇಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಬಳಿಕ ಅವರು, ನಗರದ ಸಿವಿಲ್ ಆಸ್ಪತ್ರೆಗೆ ತೆರಳಿ ದುರಂತದಲ್ಲಿ ಗಾಯಗೊಂಡವರ ಆರೋಗ್ಯ ವಿಚಾರಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಕಿಂಜರಾಪು, ಕೇಂದ್ರ ಸಚಿವ ಮುರಳೀಧರ್ ಮೊಹೋಲ್ ಮತ್ತು ರಾಜ್ಯ ಗೃಹ ಸಚಿವ ಹರ್ಷ ಸಂಘವಿ ಜೊತೆಯಾದರು. ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೈದ್ಯಕೀಯ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿ, ಪ್ರಧಾನಿ ಮಾತುಕತೆ ನಡೆಸಿದರು.ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, ”ಅಹಮದಾಬಾದ್‌ನಲ್ಲಿ ಸಂಭವಿಸಿದ ವಾಯು ದುರಂತವು ವಿನಾಶಕಾರಿಯಾಗಿದ್ದು, ನಾವೆಲ್ಲರೂ ತೀವ್ರ ದುಃಖಿತರಾಗಿದ್ದೇವೆ. ಹಠಾತ್ ಮತ್ತು ಹೃದಯವಿದ್ರಾವಕ ರೀತಿಯಲ್ಲಿ ಹಲವಾರು ಜೀವಗಳನ್ನು ಕಳೆದುಕೊಂಡಿರುವುದು ಪದಗಳಿಗೆ ನಿಲುಕದ್ದು. ಎಲ್ಲಾ ದುಃಖಿತ ಕುಟುಂಬಗಳಿಗೆ ಸಂತಾಪಗಳು. ಅವರ ನೋವು ನಮಗೆ ಅರ್ಥವಾಗುತ್ತದೆ. ಓಂ ಶಾಂತಿ” ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇಂದು ಬೆಳಗ್ಗೆಯೇ ನಗರಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯನ್ನು ಗುಜರಾತ್ ಸಿಎಂ ಭೂಪೇಂದ್ರ ಪಟೇಲ್, ರಾಮ್ ಮೋಹನ್ ನಾಯ್ಡು ಕಿಂಜರಾಪು, ಮತ್ತು ಕೇಂದ್ರ ಸಚಿವ ಸಿ.ಆರ್. ಪಾಟೀಲ್ ಬರಮಾಡಿಕೊಂಡರು.













































