ಸಂವಿಧಾನದ ಆಶಯಗಳನ್ನು ಓದುವುದಷ್ಟೇ ಸಾಲದು, ಅವುಗಳನ್ನು ನಮ್ಮ ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು”: ಸಂಸದ ಬಿ.ವೈ. ರಾಘವೇಂದ್ರ

Picture of Savistara

Savistara

Bureau Report

ಶಿವಮೊಗ್ಗ, 28 ನವೆಂಬರ್ 2026: ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಅತ್ಯಂತ ಶಕ್ತಿಶಾಲಿಯಾದದ್ದು ಮೊಬೈಲ್ ಫೋನ್ ಅಲ್ಲ, ಕೈಯಲ್ಲಿರುವ ಪೆನ್ನು ಕೂಡ ಅಲ್ಲ, ವ್ಯಕ್ತಿಯ ಕನಸುಗಳೇ ಅತ್ಯಂತ ಶಕ್ತಿಶಾಲಿಯಾದದ್ದು, ಭಾರತದ ಪ್ರತಿಯೊಬ್ಬ ನಾಗರಿಕನ ಕನಸುಗಳು, ಆಶೋತ್ತರಗಳು ಮತ್ತು ಹಕ್ಕುಗಳನ್ನು ರಕ್ಷಿಸುವ ಮಹತ್ವದ ಗ್ರಂಥವೇ ನಮ್ಮ ಸಂವಿಧಾನ ಎಂದು ಶಿವಮೊಗ್ಗ ಸಂಸದರಾದ ಬಿ.ವೈ.ರಾಘವೇಂದ್ರ ಹೇಳಿದರು. ಇಂದು ಪ್ರೇರಣಾ ಎಜುಕೇಷನಲ್ ಅಂಡ್ ಸೋಷಿಯಲ್ ಟ್ರಸ್ಟ್ (ರಿ.), ವತಿಯಿಂದ ಶಿವಮೊಗ್ಗ ನಗರದ PESIT ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಸಂವಿಧಾನ ಗೌರವ ದಿವಸ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದು ನಾನು ಸಂಸದನಾಗಿ ಭಾಷಣ ಮಾಡಲು ಬಂದಿಲ್ಲ. ನಿಮ್ಮೆಲ್ಲರಂತೆಯೇ ಒಬ್ಬ ಸಹ ನಾಗರಿಕನಾಗಿ ನಮ್ಮೆಲ್ಲರ ಬದುಕಿನಲ್ಲಿ ಅತ್ಯಂತ ಮಹತ್ವ ಹೊಂದಿರುವ ಸಂವಿಧಾನದ ಕುರಿತು ಕೆಲವು ವಿಚಾರಗಳನ್ನು ಹಂಚಿಕೊಳ್ಳಲು ಬಂದಿದ್ದೇನೆ ಎಂದು ತಿಳಿಸಿದರು.ಸುಮಾರು 2 ವರ್ಷ, 11 ತಿಂಗಳು ಹಾಗೂ 18 ದಿನಗಳ ಸುದೀರ್ಘ ಪರಿಶ್ರಮದ ಫಲವಾಗಿ ರೂಪುಗೊಂಡ ನಮ್ಮ ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾಗಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಮಹತ್ವದ ಜವಾಬ್ದಾರಿಯನ್ನು ನಿರ್ವಹಿಸಿದರು.

Advertisement

2015 ರಲ್ಲಿ ಭಾರತ ರತ್ನ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ 125ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ನವೆಂಬರ್ 26 ಅನ್ನು ಅಧಿಕೃತವಾಗಿ ಸಂವಿಧಾನ ದಿನವನ್ನಾಗಿ ಆಚರಿಸಲು ಘೋಷಿಸಿತು. ಅಂದಿನಿಂದ ಪ್ರತಿವರ್ಷ ಸಂವಿಧಾನದ ಮಹತ್ವವನ್ನು ಸ್ಮರಿಸುವುದರ ಜೊತೆಗೆ ಡಾ. ಅಂಬೇಡ್ಕರ್ ಅವರ ಅಮೂಲ್ಯ ಕೊಡುಗೆಯನ್ನು ಗೌರವಿಸಲಾಗುತ್ತಿದೆ ಎಂದು ಸಂಸದ ರಾಘವೇಂದ್ರ ತಿಳಿಸಿದರು.ನಮ್ಮ ಸಂವಿಧಾನವು ಕೇವಲ ಕಾನೂನುಗಳ ಸಂಗ್ರಹವಲ್ಲ. ಅದು ಪ್ರತಿಯೊಬ್ಬ ಭಾರತೀಯನ ಹಕ್ಕು, ಸ್ವಾತಂತ್ರ್ಯ, ಸಮಾನತೆ ಮತ್ತು ಘನತೆಯನ್ನು ಕಾಪಾಡುವ ಶಕ್ತಿಯಾಗಿದೆ. ಕಾನೂನಿನ ದೃಷ್ಟಿಯಿಂದ ಆಧುನಿಕವಾಗಿರುವ ನಮ್ಮ ಸಂವಿಧಾನವು ಭಾರತದ ಶ್ರೀಮಂತ ನಾಗರಿಕತೆ ಮತ್ತು ಸಾಂಸ್ಕೃತಿಕ ಮೌಲ್ಯಗಳ ತಳಹದಿಯನ್ನು ಹೊಂದಿದೆ.

Advertisement

Advertisement

ಸಂವಿಧಾನ ರಚನೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರೊಂದಿಗೆ ಸಂವಿಧಾನ ಸಭೆಯ ಕರಡು ಸಲಹೆಗಾರರಾಗಿದ್ದ ಬಿ.ಎನ್. ರಾವ್ ಅವರ ಕೊಡುಗೆಯೂ ಸ್ಮರಣೀಯವಾಗಿದೆ ಎಂದು ಹೇಳಿದರು. ಸಂವಿಧಾನದ ಮಹತ್ವವನ್ನು ಅರ್ಥಮಾಡಿಕೊಳ್ಳುವಾಗ ಅದರ ಆಶಯಗಳನ್ನು ಅನುಷ್ಠಾನಗೊಳಿಸುವವರ ಜವಾಬ್ದಾರಿಯನ್ನೂ ನಾವು ಮರೆಯಬಾರದು. ಜಗತ್ತಿನ ಅತ್ಯುತ್ತಮ ಸಂವಿಧಾನವೂ ಅದನ್ನು ಅನುಷ್ಠಾನಗೊಳಿಸುವವರು ಸಮರ್ಥರಾಗಿಲ್ಲದಿದ್ದರೆ ವಿಫಲವಾಗಬಹುದು. ಸಾಮಾನ್ಯ ಸಂವಿಧಾನವೂ ಅದನ್ನು ಜಾರಿಗೆ ತರುವವರು ಉತ್ತಮರಾಗಿದ್ದರೆ ಯಶಸ್ವಿಯಾಗಿ ಕಾರ್ಯನಿರ್ವಹಿಸಬಹುದು ಎಂಬ ಆಶಯವನ್ನು ಅವರು ರಾಘವೇಂದ್ರ ವ್ಯಕ್ತಪಡಿಸಿದರು.

Advertisement

Advertisement

ತುರ್ತು ಪರಿಸ್ಥಿತಿ: 1975ರ ಜೂನ್ 25ರ ಮಧ್ಯರಾತ್ರಿ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರು ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದರು. 1977ರ ಮಾರ್ಚ್ ವರೆಗೆ ಸುಮಾರು 21 ತಿಂಗಳುಗಳ ಕಾಲ ಮುಂದುವರಿದ ಈ ಅವಧಿಯಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ದುರ್ಬಲಗೊಂಡವು, ನಾಗರಿಕರ ಮೂಲಭೂತ ಹಕ್ಕುಗಳಿಗೆ ನಿರ್ಬಂಧ ವಿಧಿಸಲಾಯಿತು, ಅನೇಕ ವಿರೋಧ ಪಕ್ಷಗಳ ನಾಯಕರು ಹಾಗೂ ರಾಜಕೀಯ ಕಾರ್ಯಕರ್ತರನ್ನು ಬಂಧಿಸಲಾಯಿತು ಮತ್ತು ಪತ್ರಿಕಾ ಸ್ವಾತಂತ್ರ್ಯಕ್ಕೂ ಕಡಿವಾಣ ಹಾಕಲಾಯಿತು. ಇದು ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿನ ಅತ್ಯಂತ ಕರಾಳ ಅಧ್ಯಾಯಗಳಲ್ಲಿ ಒಂದಾಗಿದೆ. ಈ ಘಟನೆ ನಮಗೆ ಪ್ರಜಾಪ್ರಭುತ್ವದ ಮೌಲ್ಯಗಳು, ಸಂವಿಧಾನದ ಆಶಯಗಳು ಮತ್ತು ನಾಗರಿಕರ ಸ್ವಾತಂತ್ರ್ಯವನ್ನು ಸದಾ ರಕ್ಷಿಸಬೇಕಾದ ಮಹತ್ವದ ಪಾಠವನ್ನು ಕಲಿಸುತ್ತದೆ ಎಂದು ಸಂಸದ ರಾಘವೇಂದ್ರ ಹೇಳಿದರು.

Advertisement

Advertisement

ಸಂವಿಧಾನವನ್ನು ಗೌರವಿಸುವುದು ಎಂದರೆ ಕೇವಲ ಅದರ ಪ್ರತಿಯನ್ನು ಕೈಯಲ್ಲಿ ಹಿಡಿದುಕೊಳ್ಳುವುದಲ್ಲ. ಅದರ ಆಶಯಗಳನ್ನು ನಮ್ಮ ನಡವಳಿಕೆಯಲ್ಲಿ ಅಳವಡಿಸಿಕೊಳ್ಳುವುದಾಗಿದೆ. ಸಂವಿಧಾನದ 51ಎ ವಿಧಿಯಲ್ಲಿ ಉಲ್ಲೇಖಿಸಿರುವ ಮೂಲಭೂತ ಕರ್ತವ್ಯಗಳು ಪ್ರತಿಯೊಬ್ಬ ನಾಗರಿಕನಿಗೂ ಮಾರ್ಗದರ್ಶಿಯಾಗಿವೆ.

ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಗೆ ಗೌರವ ಸಲ್ಲಿಸುವುದು, ಪರಿಸರವನ್ನು ರಕ್ಷಿಸುವುದು, ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವುದು ಹಾಗೂ ಮಹಿಳೆಯರ ಘನತೆ ಮತ್ತು ಗೌರವವನ್ನು ಎತ್ತಿಹಿಡಿಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು. ಸಂವಿಧಾನವನ್ನು ಓದುವುದು ಮತ್ತು ಅರ್ಥಮಾಡಿಕೊಳ್ಳುವುದು ಎಷ್ಟು ಮುಖ್ಯವೋ,

ಅದರ ಮೌಲ್ಯಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಪಾಲಿಸುವುದು ಅಷ್ಟೇ ಮುಖ್ಯ. ನಮ್ಮ ಸಂವಿಧಾನದ ಪ್ರಮುಖ ಆಶಯಗಳಾದ ಭ್ರಾತೃತ್ವ, ಸಮಾನತೆ ಮತ್ತು ಸಾಮಾಜಿಕ ನ್ಯಾಯಗಳು ಸಾವಿರಾರು ವರ್ಷಗಳಿಂದ ನಮ್ಮ ನೆಲದ ಸಂಸ್ಕೃತಿಯ ಭಾಗವಾಗಿವೆ. ಈ ಮೌಲ್ಯಗಳು ಭಾರತೀಯರಾದ ನಮ್ಮೆಲ್ಲರನ್ನೂ ಒಗ್ಗೂಡಿಸುವುದರ ಜೊತೆಗೆ ಪ್ರತಿಯೊಬ್ಬ ನಾಗರಿಕನಿಗೂ ಗೌರವ, ಘನತೆ ಮತ್ತು ಸಮಾನ ಅವಕಾಶ ದೊರೆಯಬೇಕೆಂಬ ಸಂದೇಶವನ್ನು ಸಾರುತ್ತವೆ.ವಿಶೇಷವಾಗಿ ಯುವಜನತೆ ಸಂವಿಧಾನದ ಬಗ್ಗೆ ತಿಳಿದುಕೊಳ್ಳಬೇಕು.

ಸಂವಿಧಾನದ ಪ್ರಮುಖ ಆಶಯಗಳನ್ನು ಓದಬೇಕು, ಅದರಲ್ಲಿರುವ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಅರ್ಥಮಾಡಿಕೊಳ್ಳಬೇಕು ಹಾಗೂ ಯಾವುದೇ ಮಾಹಿತಿಯನ್ನು ಸ್ವೀಕರಿಸುವ ಮೊದಲು ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಇಂದಿನ ಯುವಜನತೆಯೇ ನಾಳಿನ ನಾಯಕರು, ಅಧಿಕಾರಿಗಳು ಮತ್ತು ಉದ್ಯಮಿಗಳು. 2047ರ ವಿಕಸಿತ ಭಾರತದ ಕನಸನ್ನು ನನಸಾಗಿಸುವ ಮಹತ್ವದ ಜವಾಬ್ದಾರಿ ನಿಮ್ಮ ಮೇಲಿದೆ.

ಆದ್ದರಿಂದ ಸಂವಿಧಾನದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ದೇಶದ ಪ್ರಗತಿಗೆ ಕೊಡುಗೆ ನೀಡಬೇಕು ಎಂದು ಸಂಸದರು ಯುವಜನರಿಗೆ ಕರೆ ನೀಡಿದರು. ನಮ್ಮ ಸಂವಿಧಾನಕ್ಕೆ ನಾವು ಸಲ್ಲಿಸುವ ನಿಜವಾದ ಗೌರವವೆಂದರೆ ವರ್ಷಕ್ಕೊಮ್ಮೆ ಸಂವಿಧಾನ ದಿನವನ್ನು ಆಚರಿಸುವುದಷ್ಟೇ ಅಲ್ಲ;

ಪ್ರತಿದಿನ ನಮ್ಮ ನಡೆ, ನುಡಿ ಮತ್ತು ಕಾರ್ಯಗಳ ಮೂಲಕ ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುವುದಾಗಿದೆ. ಬಲಿಷ್ಠ, ನ್ಯಾಯಯುತ ಮತ್ತು ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಸಂಸದರು ಹೇಳಿದರು.

ಕಾರ್ಯಕ್ರಮದಲ್ಲಿ ಶಿವಮೊಗ್ಗ ನಗರದ ಶಾಸಕರಾದ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಶಾಸಕರಾದ ಡಿ.ಎಸ್. ಅರುಣ್,

ಡಾ. ಧನಂಜಯ ಸರ್ಜಿ, ಮಾಜಿ ವಿಧಾನ ಪರಿಷತ್ ಶಾಸಕರಾದ ಸಿದ್ರಾಮಣ್ಣ ಕೆ.ಆರ್., ಜಿಲ್ಲಾ ಬಿಜೆಪಿ ಅಧ್ಯಕ್ಷ ಜಗದೀಶ್ ಎನ್.ಕೆ., ಕಾಲೇಜಿನ ಪ್ರಾಂಶುಪಾಲರಾದ ಡಿ.ಆರ್. ಸ್ವಾಮಿ, ಹರೀಶ್, ರಾಮು, ಗುಡ್ಡಪ್ಪ, ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

[t4b-ticker]
error: Content is protected !!