ಖಾಸಗಿ ಆಸ್ಪತ್ರೆಗಳಿಗೆ ತೆರಳಿದರೆ ಚಿಕಿತ್ಸೆಯ ವೆಚ್ಚಕ್ಕಿಂತ ಔಷಧ ಹಾಗೂ ವೈದ್ಯಕೀಯ ಉಪಕರಣಗಳ ಹೆಸರಿನಲ್ಲಿ ನೀಡಲಾಗುವ ಭಾರಿ ಬಿಲ್ ನೋಡಿ ರೋಗಿಗಳು ಬೆಚ್ಚಿಬೀಳುವುದು ಸಾಮಾನ್ಯ. ಆಸ್ಪತ್ರೆಗಳು ಔಷಧಗಳನ್ನು ಎಷ್ಟು ಕಡಿಮೆ ಬೆಲೆಗೆ ಖರೀದಿ ಮಾಡಿ, ಎಷ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತವೆ ಎಂಬ ಕಳ್ಳಾಟಕ್ಕೆ ಬ್ರೇಕ್ ಹಾಕಲು ಆರೋಗ್ಯ ಇಲಾಖೆ ಮಹತ್ವದ ಆದೇಶ ಹೊರಡಿಸಿದ್ದು, ನವೆಂಬರ್ 1ರಿಂದ ರಾಜ್ಯದ ಎಲ್ಲಾ ಸರ್ಕಾರಿ, ಖಾಸಗಿ ಹಾಗೂ ಟ್ರಸ್ಟ್ ಆಸ್ಪತ್ರೆಗಳಲ್ಲಿ ಹೊಸ ಬಿಲ್ಲಿಂಗ್ ನಿಯಮ ಕಡ್ಡಾಯವಾಗಿ ಜಾರಿಗೆ ಬರಲಿದೆ.
ಹೊಸ ಬಿಲ್ಲಿಂಗ್ ನಿಯಮದ ಪ್ರಮುಖ ಅಂಶಗಳು:ಖರೀದಿ ಬೆಲೆ ಮತ್ತು MRP ನಮೂದು ಕಡ್ಡಾಯ: ರೋಗಿಗಳಿಗೆ ನೀಡುವ ಬಿಲ್‌ನಲ್ಲಿ ಔಷಧಗಳ ನೈಜ ಖರೀದಿ ಬೆಲೆ (Purchase Price) ಮತ್ತು ಗರಿಷ್ಠ ಚಿಲ್ಲರೆ ಬೆಲೆ (MRP) ಎರಡನ್ನೂ ಕಡ್ಡಾಯವಾಗಿ ನಮೂದಿಸಬೇಕು. ಇದರಿಂದ ಆಸ್ಪತ್ರೆಗಳು ಪಡೆಯುವ ಲಾಭ ಎಷ್ಟು ಎಂಬುದು ಸಾರ್ವಜನಿಕರಿಗೆ ಸ್ಪಷ್ಟವಾಗಲಿದೆ.
ಚಿಕಿತ್ಸಾ ದರಪಟ್ಟಿ ಪ್ರದರ್ಶನ: ಆಸ್ಪತ್ರೆಯಲ್ಲಿ ಲಭ್ಯವಿರುವ ಎಲ್ಲಾ ಚಿಕಿತ್ಸೆಗಳು ಹಾಗೂ ಅವುಗಳ ದರಪಟ್ಟಿಯನ್ನು (Tariff Chart) ನೋಂದಣಿ ಕೌಂಟರ್ ಮುಂಭಾಗದಲ್ಲೇ ಎಲ್ಲರಿಗೂ ಕಾಣುವಂತೆ ಪ್ರದರ್ಶಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ವೈದ್ಯಕೀಯ ಉಪಕರಣಗಳ ವಿವರ: ಕೇವಲ ಮಾತ್ರೆಗಳಷ್ಟೇ ಅಲ್ಲದೆ, ಸ್ಟೆಂಟ್‌ಗಳು ಹಾಗೂ ಸರ್ಜಿಕಲ್ ಬಿಡಿ ಸಾಮಗ್ರಿಗಳ ಖರೀದಿ ಬೆಲೆ ಮತ್ತು ರೋಗಿಗೆ ವಿಧಿಸಲಾದ ದರವನ್ನು ಬಿಲ್‌ನಲ್ಲಿ ಪ್ರತ್ಯೇಕವಾಗಿ ನಮೂದಿಸಬೇಕಿದೆ.
ದಾಖಲೆಗಳ ಪರಿಶೀಲನೆ ಹಾಗೂ ಕಠಿಣ ಕ್ರಮ: ಆಸ್ಪತ್ರೆಗಳು ಔಷಧ ಖರೀದಿ ಇನ್‌ವಾಯ್ಸ್ ದಾಖಲೆಗಳನ್ನು ಕನಿಷ್ಠ 3 ವರ್ಷ ಕಾಯ್ದಿರಿಸಬೇಕು. ನಿಯಮ ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ.











































