ಸಮುದ್ರ ಅತ್ಯಂತ ಭಯಾನಕ, ರೋಚಕ ಎಂಬಿತ್ಯಾದಿ ಮಾತುಗಳ ಹೊರತಾಗಿಯೂ ಸಮುದ್ರ ಎನ್ನುವುದು ಹಲವರಿಗೆ ಇಷ್ಟವಾಗುತ್ತದೆ. ಸಮುದ್ರವನ್ನು ನೋಡಬೇಕೆಂಬ ಹೆಬ್ಬಯಕೆ ಎಲ್ಲರಲ್ಲೂ ಇರುತ್ತದೆ. ಸಮುದ್ರದ ಅಲೆಗಳು ದಡದ ಕಡೆ ಬಂದಾಗ ಅದರಲ್ಲಿ ಕಾಲನ್ನು ಅದ್ದಿ ಸಂತೋಷ ಪಡಬೇಕೆಂಬ ಮನಸ್ಸಿರುತ್ತದೆ. ಸಮುದ್ರವೆಂದರೆ ನಿಜವಾಗಿಯೂ ಅಪಾಯಕಾರಿಯೇ ಎಂಬ ಪ್ರಶ್ನೆಗೆ ಹೌದೆಂದರೆ ಹೌದು..! ಇಲ್ಲವೆಂದರೆ ಇಲ್ಲ…! ಕಡಲೊರೆತ, ಸುನಾಮಿ ಇತ್ಯಾದಿಗಳಿಂದ ಕರಾವಳಿ ಪ್ರದೇಶದ ಜನ ತತ್ತರಿಸಿ ಹೋಗುತ್ತಾರೆ. ಆಗ ಖಂಡಿತ ಸಮುದ್ರವೆಂದರೆ ಅಪಾಯಕಾರಿಯೇ. ಅದನ್ನು ಹೊರತುಪಡಿಸಿ ಸಮುದ್ರ ಕೋಟ್ಯಂತರ ಜನರ ಉದರ ಪೊರೆಯುತ್ತಿದೆ. ಆದ್ದರಿಂದ ಸಮುದ್ರ ಮನುಷ್ಯರಿಗೆ ಉಪಕಾರಿ.ಸಮುದ್ರದಲ್ಲಿ ಮೈಲುಗಟ್ಟಲೆ ಈಜುವವರಿದ್ದಾರೆ. ಸಮುದ್ರವನ್ನು ಈಜಿಕೊಂಡು ದಾಟುವವರೂ ಇದ್ದಾರೆ. ಸಮುದ್ರದ ಮೇಲೆ ತೇಲುವವರಿದ್ದಾರೆ; ಆಳಕ್ಕಿಳಿದು ಸಂಶೋಧನೆ ಮಾಡುವವರೂ ಇದ್ದಾರೆ. ಆದರೆ ಸಮುದ್ರದಲ್ಲಿ ಸ್ನಾನ ಮಾಡುವುದೇ ಒಂದು ಮಧುರಾನುಭೂತಿ. ಅದು ಅನಿರ್ವಚನೀಯ; ಅವರ್ಣನೀಯ. ನಮ್ಮ ಕರಾವಳಿಯಲ್ಲಿ ಸಮುದ್ರ ಸ್ನಾನಕ್ಕೆ ವಿಶೇಷ ಸ್ಥಾನವಿದೆ. ಒಂದಿಷ್ಟು ವಿಶೇಷ ದಿನಗಳಲ್ಲಿ ಸಮುದ್ರ ಸ್ನಾನ ಮಾಡುವ ಸಲುವಾಗಿಯೇ ದೂರದೂರದ ಊರುಗಳಿಂದ ಬರುವವರು ಇದ್ದಾರೆ. ವರ್ಷಕೊಮ್ಮೆ ಸಮುದ್ರ ಸ್ನಾನವನ್ನು ಮಾಡಿದರೆ ಉತ್ತಮವೆಂದು ಬಲ್ಲವರು ಹೇಳುತ್ತಾರೆ. ಉಪ್ಪು ನೀರಿನಲ್ಲಿ ಸ್ನಾನ ಮಾಡಿದರೆ ಕೆಲವೊಂದು ಚರ್ಮರೋಗಗಳು
ಉಪಶಮನವಾಗುತ್ತದೆ ಎಂಬ ನಂಬಿಕೆ ಅವರದ್ದು. ಆದ್ದರಿಂದಲೇ ಒಬ್ಬೊಬ್ಬರು ಒಂದೊಂದು ಕಾರಣ ಕೊಟ್ಟು ಸಮುದ್ರ ಸ್ನಾನ ಮಾಡುತ್ತಾರೆ. ವರ್ಷಕ್ಕೆ ಒಂದೆರಡು ಬಾರಿ ಸಮುದ್ರ ಸ್ನಾನ ಮಾಡುವುದರಿಂದ, ಈ ನೆಪದಲ್ಲಾದರೂ ಸಮುದ್ರದೊಂದಿಗೆ ನಮ್ಮ ಬಾಂಧವ್ಯ ಬೆಳೆಯುತ್ತದೆ.ಕೆಲವರು ಸಮುದ್ರದ ಈಜನ್ನು, ಸಮುದ್ರ ಸ್ನಾನವೆಂದರ್ಥದಲ್ಲಿ ವ್ಯಾಖ್ಯಾನಿಸುತ್ತಾರೆ. ಸಮುದ್ರ ಸ್ನಾನವೇ ಬೇರೆ, ಸಮುದ್ರದ ಈಜೇ ಬೇರೆ. ಸಮುದ್ರ ಸ್ನಾನ ಈಜು ಗೊತ್ತಿಲ್ಲದವರೂ ಮಾಡಬಹುದು. ಆದರೆ ಸಮುದ್ರದಲ್ಲಿ ಈಜಬೇಕಾದರೆ, ಈಜು ತಿಳಿದಿರಲೇಬೇಕು. ಈಜುವಿಕೆ, ಮೋಜು ಮತ್ತು ಸಾಧನೆಯ ಭಾಗವಾದರೆ, ಸಮುದ್ರ ಸ್ನಾನಕ್ಕೆ ಧಾರ್ಮಿಕತೆಯ ನಂಟಿದೆ; ಆರೋಗ್ಯದ ಗುಟ್ಟಿದೆ; ಸಾವಿರಾರು ವರ್ಷಗಳ ನಂಬಿಕೆಯಿದೆ. ಸಮುದ್ರ ಸ್ನಾನವನ್ನೂ ಸಹ ಮೋಜೆಂದು ಭಾವಿಸುವವರಿದ್ದಾರೆ. ಅಂಥವರಿಗೆ ಸ್ನಾನದ ಸವಿ ಸಿಗುವುದಿಲ್ಲ.ಸ್ನಾನವೆಂಬುದೊಂದು ಧ್ಯಾನ; ಮೌನ. ಬಾಹ್ಯ ಶುದ್ಧತೆಯೊಂದಿಗೆ ಅಂತರಂಗವನ್ನು ಸಮ್ಮಿಳಿತಗೊಳಿಸುವ ಬೆಳಕಿಂಡಿ. ಅಂತರಂಗದೊಂದಿಗೆ ಸಂಭಾಷಿಸುವ, ಸಂಲಗ್ನಗೊಳಿಸುವ ಪರಸ್ಪರ ಪ್ರಕ್ರಿಯೆ. ಸ್ನಾನವೆಂದ ಕೂಡಲೇ ಸಾಬೂನು ಹಾಕಿ, ತಿಕ್ಕಿಕೊಂಡು ಮೈಯಲ್ಲಿರುವ ಕೊಳೆಯನ್ನು ಶುದ್ದೀಕರಿಸುವುದು ಎಂದೇ ಹೇಳುತ್ತಾರೆ. ಲವಣಯುಕ್ತವಾದ ಗಡಸು ನೀರಾದ ಕಾರಣ ಸಮುದ್ರದ ನೀರಿನಲ್ಲಿ ಯಾವ ಸಾಬೂನು ಸಹ ನೊರೆ ಕೊಡುವುದಿಲ್ಲ. ಆದ್ದರಿಂದ ಸಾಬೂನು ಬಳಸುವುದು ದೂರದ ಮಾತು. ಸಾಬೂನಿನ ನೊರೆಯಿಲ್ಲದೆ ಅದೆಂತಹ ಸ್ನಾನ ಎಂದು ಹುಬ್ಬೇರಿಸಬೇಡಿ. ಕರಾವಳಿಯಲ್ಲಿ ಸಮುದ್ರಸ್ನಾನ ತನ್ನದೇ ಆದ ಮಹತ್ವ ಪಡೆದಿರುವುದಂತು ಸತ್ಯ.
ಕರ್ಕಾಟಕ ಅಮಾವಾಸ್ಯೆಯ ದಿನ ಸೋಮೇಶ್ವರ, ಮಲ್ಪೆ, ಮರವಂತೆ ಮೊದಲಾದ ಕಡಲ ತೀರಗಳಲ್ಲಿ ಸಹಸ್ರಾರು ಮಂದಿ ಸಮುದ್ರಸ್ನಾನ ಮಾಡುತ್ತಾರೆ. ಈ ದಿನದಂದು ಸಮುದ್ರ ಸ್ನಾನ ಮಾಡಿದರೆ ಪಾಪಗಳು ತೊಳೆದು ಹೋಗುವ ಜತೆಗೆ ಪುಣ್ಯಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಎಳ್ಳಮಾವಾಸ್ಯೆಯ ದಿನ ಸಮುದ್ರ ಸ್ನಾನದೊಂದಿಗೆ, ಮರಣ ಹೊಂದಿದವರಿಗೆ ಎಳ್ಳನ್ನು ಬಿಡುವ ಪದ್ಧತಿಯೂ ಇದೆ. ಸೂರ್ಯಗ್ರಹಣ ಅಥವಾ ಚಂದ್ರಗ್ರಹಣ ಮುಗಿದ ತತ್‌ಕ್ಷಣ ಸಮುದ್ರ ಸ್ನಾನ ಮಾಡುವವರಿದ್ದಾರೆ. ಸಮುದ್ರದಲ್ಲಿ ಪಿಂಡ ಪ್ರದಾನ ಮಾಡಿ, ಸಮುದ್ರ ಸ್ನಾನ ಮಾಡುವವರೂ ಇದ್ದಾರೆ. ಬಾವಿಯ ನೀರಿಗಿಂತ ಸಮುದ್ರದ ನೀರಿಗೆ ಅಪಾರ ಶಕ್ತಿಯಿದೆ ಎಂಬ ನಂಬಿಕೆ ಜನರಲ್ಲಿ ಬೇರೂರಿದೆ. ಮುದುಕರು, ಹೆಂಗಸರು, ಚಿಕ್ಕ ಮಕ್ಕಳೂ ಸಹ ಆ ದಿನ ಸಮುದ್ರದಲ್ಲಿ ಮುಳುಗು ಹಾಕುತ್ತಾರೆ. ಹಾಗಂತ ವರ್ಷದ ಎಲ್ಲ ದಿನಗಳಲ್ಲಿ ಸಮುದ್ರ ಸ್ನಾನ ಮಾಡಲಾಗುವುದಿಲ್ಲ; ಎಲ್ಲ ಸ್ಥಳಗಳಲ್ಲೂ ಸಾಧ್ಯವಿಲ್ಲ. ಏಕೆಂದರೆ ಕೆಲವು ದಿನಗಳಲ್ಲಿ ಸಮುದ್ರ ಅತ್ಯಂತ ಬಿರುಸುಗೊಂಡಿರುತ್ತದೆ. ಅಳಿವೆಯ ಸಮೀಪ, ಆಳ ಹೆಚ್ಚಿರುವ ಕಡೆ ಸಮುದ್ರ ಸ್ನಾನಕ್ಕೆ ಯಾರೂ ಇಳಿಯುವುದಿಲ್ಲ.
ಸಮುದ್ರ ಸ್ನಾನ, ಸಾಮಾನ್ಯ ಸ್ನಾನದಂತೆ ಗಂಟೆಗಟ್ಟಲೆ ನಡೆಯುವ ಪ್ರಕ್ರಿಯೆಯಲ್ಲ. ಒಂದೇ ಒಂದು ಮುಳುಗು ಹಾಕಿದರೂ ಸಮುದ್ರ ಸ್ನಾನ ಎನಿಸಿಕೊಳ್ಳುತ್ತದೆ. ಸಮುದ್ರಸ್ನಾನ ಮಾಡಿ ಒಂದರ್ಧ ದಿನ ಹಾಗೆಯೇ ಒದ್ದೆ ಮೈಯಲ್ಲಿ ಇರುವವರೂ ಇದ್ದಾರೆ. ಕಜ್ಜಿ, ತುರಿಕೆ, ಚರ್ಮ ಸಂಬಂಧಿತ ರೋಗ ಇದ್ದವರಿಗೆ ಪ್ರತಿದಿನ ಸಮುದ್ರ ಸ್ನಾನ ಮಾಡಲು ಸಲಹೆ ನೀಡುವ ಚರ್ಮರೋಗ ತಜ್ಞರೂ ಇದ್ದಾರೆ. ಇಂಥವರು ಸ್ನಾನದ ಬಳಿಕ ಮೈ ಒರೆಸಿಕೊಳ್ಳದೆ ಮೈಯಲ್ಲಿ ನೀರು ಒಣಗುವಂತೆ ಜಾಗ್ರತೆ ವಹಿಸುತ್ತಾರೆ. ಹೀಗೆ ಗಂಟೆಗಟ್ಟಲೆ ಉಪ್ಪಿನ ಅಂಶ ಚರ್ಮದಲ್ಲಿ ಉರಿಯುವ ಅನುಭವ ನೀಡಬಹುದು. ಆದರೆ ಆ ರೀತಿ ಉರಿ ಇದ್ದರೆ ಒಳ್ಳೆಯದೆಂದು ಭಾವಿಸಿ ಆ ಮಧುರವಾದ ನೋವನ್ನು ಆಸ್ವಾದಿಸುತ್ತಾರೆ. ಸಮುದ್ರ ಸ್ನಾನವನ್ನು ಬೆಳಗ್ಗೆ ಅಥವಾ ಸಂಜೆಯ ಸಮಯದಲ್ಲಿ ಮಾಡುವುದರಿಂದ ಸೂರ್ಯನ “ಡಿ’ ಜೀವಸಣೀ ವಿಪುಲವಾಗಿ ಸಿಗುವುದರಿಂದ ಆರೋಗ್ಯ ಇನ್ನಷ್ಟು ಸುಧಾರಿಸುತ್ತದೆ. ಈಜುಕೊಳಗಳಲ್ಲಿ ನೀರು ತುಂಬಾ ದಿನಗಳವರೆಗೆ ಹಾಳಾಗದಂತೆ ಸಂರಕ್ಷಿಸಲು ಅಪಾರ ಪ್ರಮಾಣದಲ್ಲಿ ರಾಸಾಯನಿಕವನ್ನು ಬಳಸುತ್ತಾರೆ. ಇದರಿಂದ ಕೆಲವರಿಗೆ ಕಣ್ಣುರಿ, ತಲೆಗೂದಲು ಉದುರುವ ಸಮಸ್ಯೆ ಕಾಡಬಹುದು. ಆದರೆ ಸಮುದ್ರದ ನೀರು ಸ್ವಾಭಾವಿಕವಾಗಿರುವ ಕಾರಣ ಇದ್ಯಾವ ಸಮಸ್ಯೆಯೂ ಕಾಡದು. ಉಪ್ಪು ನೀರಿನಿಂದ ತತ್ಕಾಲಕ್ಕೆ ಕಣ್ಣುರಿ ಎನಿಸಿದರೂ ಅದರಿಂದ ಯಾವ ಅಡ್ಡ ಪರಿಣಾಮವೂ ಇಲ್ಲ.
ಹೀಗೆ ಬೇರೆ ಬೇರೆ ಕಾರಣಗಳಿಂದ ನಾವು ಸಮುದ್ರದಲ್ಲಿ ಸ್ನಾನ ಮಾಡುತ್ತೇವೆ. ಕಾರಣಗಳು ಯಾವುದೇ ಇರಬಹುದು, ಸಮುದ್ರಸ್ನಾನವು ನಮ್ಮ ಮತ್ತು ಸಮುದ್ರದ ನಡುವೆ ಬಾಂಧವ್ಯವನ್ನಂತು ಬೆಸೆಯುತ್ತದೆ. ಸಮುದ್ರದ ಕುರಿತಾದ ಭಯವನ್ನು ತಕ್ಕಮಟ್ಟಿಗೆ ನಿವಾರಿಸುತ್ತದೆ. ಪ್ರಕೃತಿಯೊಂದಿಗೆ ಬೆರೆಯಲು ಒಂದು ಸದಾವಕಾಶವನ್ನು ಒದಗಿಸುತ್ತದೆ. ಆದರೆ ಸಮುದ್ರಸ್ನಾನ ಮಾಡುವಾಗ ಗಮನಿಸಬೇಕಾದ ಮುಖ್ಯ ವಿಚಾರವೆಂದರೆ ಸಮುದ್ರ ಉಬ್ಬರವಿಳಿತದ ಕಲ್ಪನೆಯಿರಬೇಕು; ಆಳ ಅಗಲದ ಪರಿಜ್ಞಾನವಿರಬೇಕು; ಸಮುದ್ರ ಜೀವಿಗಳ ಅಪಾಯದ ಅರಿವಿರಬೇಕು. ಜತೆಯಲ್ಲಿ ಉದ್ದೇಶದ ಅರಿವು ಸರಿಯಾಗಿದ್ದರೆ ಸಮುದ್ರಸ್ನಾನವು ಮನಸ್ಸನ್ನೂ, ದೇಹವನ್ನೂ ಶುದ್ದೀಕರಿಸುತ್ತದೆ.













































