ನಾಡಿನೆಲ್ಲಡೆ ಇಂದು ವಿಜಯದಶಮಿಯ ಸಂಭ್ರಮ ಮನೆಮಾಡಿದ್ದು, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಶ್ವವಿಖ್ಯಾತ ದಸರಾ ಮಹೋತ್ಸವದ ಅಂತಿಮ ದಿನದ ಸಂಭ್ರಮ ಕಳೆಗಟ್ಟಿದೆ. ಐತಿಹಾಸಿಕ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಈ ಬಾರಿ ಕ್ಯಾಪ್ಟನ್ ಪ್ರಶಾಂತ ಆನೆ ಮೊದಲ ಬಾರಿಗೆ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ಗಾಂಭೀರ್ಯದಿಂದ ಹೆಜ್ಜೆ ಹಾಕಲಿದೆ. ಈ ಹಿಂದೆ ಆರು ಬಾರಿ ಅಂಬಾರಿ ಹೊತ್ತಿದ್ದ ಅಭಿಮನ್ಯು ಈ ಬಾರಿ ನಿಶಾನೆ ಆನೆಯಾಗಿ ಮೆರವಣಿಗೆಯಲ್ಲಿ ಸಾಗಲಿದ್ದಾನೆ.
ಜಂಬೂಸವಾರಿ ಇಂದಿನ ಪ್ರಮುಖ ಕಾರ್ಯಕ್ರಮಗಳ ವೇಳಾಪಟ್ಟಿ:
ಬೆಳಗ್ಗೆ 8.30 & 10: ಅರಮನೆಯ ಕರಿಕಲ್ಲು ತೊಟ್ಟಿಯಲ್ಲಿ ಜಟ್ಟಿಕಾಳಗ ಹಾಗೂ ವಜ್ರಮುಷ್ಟಿ ಕಾಳಗ.
ಬೆಳಗ್ಗೆ 10.30 & 11: ಯದುವೀರ್ ಅವರ ವಿಜಯಯಾತ್ರೆ ಹಾಗೂ ಬನ್ನಿಮರಕ್ಕೆ ಪೂಜೆ.
ಮಧ್ಯಾಹ್ನ 1.36ರಿಂದ 1.50: ಶುಭ ಮಕರ ಲಗ್ನದಲ್ಲಿ ನಂದಿಧ್ವಜಕ್ಕೆ ಪೂಜೆ.
ಸಂಜೆ 4.10ರಿಂದ 4.35: ಶುಭ ಮೀನ ಲಗ್ನದಲ್ಲಿ ಚಿನ್ನದ ಅಂಬಾರಿಯಲ್ಲಿರುವ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ.
ಸಂಜೆ 4.35: ಅಂಬಾವಿಲಾಸ ಅರಮನೆಯಿಂದ ವಿಶ್ವವಿಖ್ಯಾತ ಜಂಬೂಸವಾರಿ ಆರಂಭ.
ಸಂಜೆ 7 & ರಾತ್ರಿ 8: ಬನ್ನಿಮಂಟಪ ಮೈದಾನದಲ್ಲಿ ಪಂಜಿನ ಕವಾಯತು ಹಾಗೂ ಆಕರ್ಷಕ ಡ್ರೋನ್ ಪ್ರದರ್ಶನ.
48 ಕಲಾತಂಡಗಳು ಹಾಗೂ 53 ಸ್ತಬ್ಧಚಿತ್ರಗಳ ಮೆರುಗು:
ಈ ಬಾರಿಯ ಜಂಬೂಸವಾರಿ ಮೆರವಣಿಗೆಯಲ್ಲಿ ವೀರಗಾಸೆ, ಡೊಳ್ಳು ಕುಣಿತ, ಕಂಸಾಳೆ ಸೇರಿದಂತೆ 48 ಕಲಾತಂಡಗಳು ಹಾಗೂ 53 ಸ್ತಬ್ಧಚಿತ್ರಗಳು ಭಾಗವಹಿಸಲಿವೆ. ಕರ್ನಾಟಕದ ಜೊತೆಗೆ ತಮಿಳುನಾಡು, ಕೇರಳ ಮತ್ತು ಮಣಿಪುರದ ಕಲಾವಿದರು ಸಹ ಮೆರವಣಿಗೆಗೆ ಮೆರುಗು ನೀಡಲಿದ್ದಾರೆ.










































