ವಿಜಯದಶಮಿ (ದಸರಾ) ಹಬ್ಬದ ಪವಿತ್ರ ಸಂದರ್ಭದಲ್ಲಿ ದೇಶದ ಜನತೆಗೆ ರಾಷ್ಟ್ರಪತಿ ದೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಸೇರಿದಂತೆ ಹಲವು ಗಣ್ಯರು ಶುಭ ಹಾರೈಸಿದ್ದು ಅಧರ್ಮದ ಮೇಲಿನ ಧರ್ಮದ ಗೆಲುವಿನ ಸಂದೇಶವನ್ನು ಸಾರಿದ್ದಾರೆ.
ದೇಶ ಹಾಗೂ ವಿದೇಶಗಳಲ್ಲಿ ನೆಲೆಸಿರುವ ಎಲ್ಲಾ ಭಾರತೀಯರಿಗೆ ವಿಜಯದಶಮಿಯ ಶುಭ ಹಾರೈಕೆಗಳನ್ನು ತಿಳಿಸಿರುವ ಪ್ರಧಾನಿ ನರೇಂದ್ರ ಮೋದಿ, ಈ ಹಬ್ಬವು ಪ್ರತಿಯೊಬ್ಬರ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಯಶಸ್ಸನ್ನು ತರಲಿ ಎಂದು ಆಶಿಸಿದ್ದಾರೆ. ಧರ್ಮ, ಸತ್ಯ ಮತ್ತು ಶೌರ್ಯದ ಪ್ರತೀಕವಾದ ಭಗವಾನ್ ಶ್ರೀರಾಮನ ಆದರ್ಶಗಳನ್ನು ಪ್ರಧಾನಿ ಈ ವೇಳೆ ಸ್ಮರಿಸಿದ್ದಾರೆ.
ರಾಷ್ಟ್ರಪತಿ ದೌಪದಿ ಮುರ್ಮು ಅವರು ತಮ್ಮ ಸಂದೇಶದಲ್ಲಿ ವಿಜಯದಶಮಿಯು ರಾವಣನ ಮೇಲಿನ ಶ್ರೀರಾಮನ ವಿಜಯ ಹಾಗೂ ಅಧರ್ಮದ ಮೇಲಿನ ಧರ್ಮದ ಅಂತಿಮ ಗೆಲುವನ್ನು ಸಂಕೇತಿಸುತ್ತದೆ ಎಂದು ತಿಳಿಸಿದ್ದಾರೆ. ನಮ್ಮ ಭಾರತೀಯ ಸಂಸ್ಕೃತಿಯು ನೈತಿಕತೆ ಮತ್ತು ಕರ್ತವ್ಯದ ಮೌಲ್ಯಗಳ ಮೇಲೆ ನೆಲೆಸಿದ್ದು, ಪ್ರತಿಯೊಬ್ಬರೂ ಒಮ್ಮಸ್ಸಿನಿಂದ ವಿಕಸಿತ ಭಾರತ’ ನಿರ್ಮಾಣಕ್ಕೆ ಹಾಗೂ ಒಂದು ಒಳಗೊಳ್ಳುವ ಸಮಾಜದ ಸೃಷ್ಟಿಗೆ ಶ್ರಮಿಸಬೇಕು ಎಂದು ಕರೆ ನೀಡಿದ್ದಾರೆ. ಇನ್ನು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ದಸರಾ ಹಬ್ಬವು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಏಕತೆಯಲ್ಲಿ ಅಖಂಡತೆಯನ್ನು ಬಿಂಬಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಇತರ ನಾಯಕರು ಕೂಡ ಜನತೆಗೆ ವಿಜಯದಶಮಿಯ ಶುಭಕೋರಿದ್ದಾರೆ. ಎಲ್ಲಿ ಧರ್ಮವಿರುತ್ತದೋ ಅಲ್ಲಿ ಖಂಡಿತ ಜಯವಿರುತ್ತದೆ ಎಂದು ಪ್ರತಿಪಾದಿಸಿರುವ ಸಿಎಂ ಯೋಗಿ ಆದಿತ್ಯನಾಥ್, ಅಹಂಕಾರ ಮತ್ತು ನಕಾರಾತ್ಮಕತೆಯನ್ನು ತೊರೆದು ಸತ್ಯ ಹಾಗೂ ಸಮಾಜದ ಕಲ್ಯಾಣದ ಹಾದಿಯಲ್ಲಿ ಸಾಗಲು ಹಬ್ಬವು ಪ್ರೇರೇಪಿಸುತ್ತದೆ ಎಂದಿದ್ದಾರೆ. ಕೆಟ್ಟದ್ದರ ಮೇಲಿನ ಒಳ್ಳೆಯದರ ವಿಜಯವನ್ನು ಸಾರುವ ವಿಜಯದಶಮಿ ಹಬ್ಬವನ್ನು ದೇಶಾದ್ಯಂತ ಅತ್ಯಂತ ಸಡಗರದಿಂದ ಆಚರಿಸಲಾಗುತ್ತಿದ್ದು, ರಾವಣ ದಹನ ಹಾಗೂ ದುರ್ಗಾ ಪೂಜೆಯ ವಿಸರ್ಜನೆಯೊಂದಿಗೆ ಹಬ್ಬದ ಸಂಭ್ರಮ ಕಳೆಗಟ್ಟಿದೆ.










































