ರಾಜ್ಯದಾದ್ಯಂತ 60.16 ಲಕ್ಷ ಮಕ್ಕಳಿಗೆ ಪೋಲಿಯೊ ಹನಿ

Picture of Savistara

Savistara

Bureau Report

ಬೆಂಗಳೂರು: ಆರೋಗ್ಯ ಇಲಾಖೆಯು ರಾಜ್ಯದಾದ್ಯಂತ ಭಾನುವಾರ ಹಮ್ಮಿಕೊಂಡಿದ್ದ ಪಲ್ಸ್ ಪೋಲಿಯೊ ಲಸಿಕೆ ವಿತರಣೆ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಿಗದಿಪಡಿಸಲಾಗಿದ್ದ 5 ವರ್ಷದೊಳಗಿನ ಮಕ್ಕಳಲ್ಲಿ 60.16 ಲಕ್ಷ ಮಕ್ಕಳು ಪೋಲಿಯೊ ಹನಿ ಹಾಕಿಸಿಕೊಂಡಿದ್ದಾರೆ.

ಇಲಾಖೆಯು ಈ ಬಾರಿ 62.40 ಲಕ್ಷ ಮಕ್ಕಳಿಗೆ ಲಸಿಕೆ ವಿತರಿಸುವ ಗುರಿ ಹಾಕಿಕೊಂಡಿತ್ತು. ಶೇ 96ರಷ್ಟು ಗುರಿ ತಲುಪಿದ್ದು, ಬಿಟ್ಟು ಹೋದ ಹಾಗೂ ಅಭಿಯಾನದಿಂದ ಹೊರಗುಳಿದ ಮಕ್ಕಳಿಗೆ ಇದೇ 24 ರವರೆಗೆ ಮನೆ- ಮನೆಗೆ ತೆರಳಿ ಪೋಲಿಯೊ ಹನಿ ಹಾಕಲಾಗುತ್ತದೆ. ಆರೋಗ್ಯ ಕೇಂದ್ರಗಳ ಜತೆಗೆ ರೈಲ್ವೆ ನಿಲ್ದಾಣ, ಬಸ್‌ ನಿಲ್ದಾಣ, ಮೆಟ್ರೊ ನಿಲ್ದಾಣ ಸೇರಿದಂತೆ ವಿವಿಧ ಸಾರ್ವಜನಿಕ ಪ್ರದೇಶಗಳಲ್ಲಿಯೂ ಲಸಿಕೆ ವಿತರಣೆಗೆ ವ್ಯವಸ್ಥೆ ಮಾಡಲಾಗಿತ್ತು. ಈ ಅಭಿಯಾನದಲ್ಲಿ ಲಸಿಕೆ ವಿತರಣೆಗೆ 1.13 ಲಕ್ಷ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗಿತ್ತು.ಜಿಬಿಎ (ಗ್ರೇಟ‌ರ್ ಬೆಂಗಳೂರು ಪ್ರಾಧಿಕಾರ) ವ್ಯಾಪ್ತಿಯಲ್ಲಿ ಗರಿಷ್ಠ ಮಕ್ಕಳಿಗೆ (10.77 ಲಕ್ಷ) ಪೋಲಿಯೊ ಹನಿ ಹಾಕಲಾಗಿದೆ. ಜಿಲ್ಲಾವಾರು ನಿಗದಿಪಡಿಸಲಾದ ಗುರಿಯಲ್ಲಿ ಉತ್ತರ ಕನ್ನಡ ಜಿಲ್ಲೆ ಅಗ್ರ ಸ್ಥಾನ ಪಡೆದುಕೊಂಡಿದೆ. ಅಲ್ಲಿ 89 ಸಾವಿರ ಮಕ್ಕಳಿಗೆ ಲಸಿಕೆ ಹಾಕುವ ಗುರಿ ನೀಡಲಾಗಿತ್ತು. 95 ಸಾವಿರ ಮಕ್ಕಳಿಗೆ ಲಸಿಕೆ ಒದಗಿಸಲಾಗಿದ್ದು, ಶೇ 107 ಸಾಧನೆಯಾಗಿದೆ. ಕೊಡಗು, ಮಂಡ್ಯ, ಉಡುಪಿ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು ಹಾಗೂ ಚಿತ್ರದುರ್ಗ ಜಿಲ್ಲೆಗಳೂ ಶೇ 100 ಹಾಗೂ ಅದಕ್ಕಿಂತ ಹೆಚ್ಚಿನ ಸಾಧನೆ ಮಾಡಿವೆ.ಯಾದಗಿರಿ ಜಿಲ್ಲೆ ಕಡೆಯ ಸ್ಥಾನದಲ್ಲಿದ್ದು, ಅಲ್ಲಿ 1.67 ಲಕ್ಷ ಮಕ್ಕಳಿಗೆ ಪೋಲಿಯೊ ಹನಿ ಹಾಕುವ ಗುರಿ ನೀಡಲಾಗಿತ್ತು. ಆದರೆ, 1.53 ಲಕ್ಷ ಮಕ್ಕಳಿಗೆ ಲಸಿಕೆ ಒದಗಿಸಲಾಗಿದ್ದು, ಶೇ 92ರಷ್ಟು ಗುರಿ ತಲುಪಿದೆ.

[t4b-ticker]
error: Content is protected !!