ಭುವನೇಶ್ವರ: ಒಡಿಶಾದ ಸಂಬಲ್‌ಪುರದಲ್ಲಿ ನಡೆದ ಹೋಮ್ ಗಾರ್ಡ್ ನೇಮಕಾತಿ ಪರೀಕ್ಷೆಯು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.ಕೇವಲ 187 ಹೋಮ್ ಗಾರ್ಡ್ ಹುದ್ದೆಗೆ ಬರೋಬ್ಬರಿ 8,000ಕ್ಕೂ ಹೆಚ್ಚು ಅಭ್ಯರ್ಥಿಗಳು ಆಗಮಿಸಿದ್ದರಿಂದ, ಸ್ಥಳದ ಅಭಾವದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ವಿಮಾನ ನಿಲ್ದಾಣದ ರನ್‌ವೇ ಮೇಲೆಯೇ ನಡೆಸಲಾಗಿದೆ.ಹೌದು ಸಂಬಲ್‌ಪುರ ಜಿಲ್ಲೆಯ 24 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಖಾಲಿ ಇರುವ 187 ಹೋಮ್ ಗಾರ್ಡ್ ಹುದ್ದೆಗಳಿಗೆ ಇತ್ತೀಚೆಗೆ ನೇಮಕಾತಿ ಪರೀಕ್ಷೆ ಹಮ್ಮಿಕೊಳ್ಳಲಾಗಿತ್ತು. ಪರೀಕ್ಷೆಗೆ ನಿರೀಕ್ಷೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಅಂದರೆ 8,000ಕ್ಕೂ ಹೆಚ್ಚು ಅಭ್ಯರ್ಥಿಗಳು ಬಂದಿದ್ದರು. ಸಾಮಾನ್ಯ ಶಾಲೆ ಅಥವಾ ಕಾಲೇಜುಗಳಲ್ಲಿ ಇಷ್ಟೊಂದು ಜನರಿಗೆ ವ್ಯವಸ್ಥೆ ಮಾಡುವುದು ಕಷ್ಟ ಎಂದು ಅರಿತ ಪೊಲೀಸರು, ಪರೀಕ್ಷೆಯನ್ನು ಮುಕ್ತ ಪ್ರದೇಶವಾದ ಜಮಾದರ್‌ಪಾಲಿ ವಿಮಾನ ನಿಲ್ದಾಣದ ರನ್‌ವೇ ಮೇಲೆಯೇ ನಡೆಸಲು ತೀರ್ಮಾನಿಸಿದರು.ಅಚ್ಚರಿಯ ವಿಷಯವೆಂದರೆ, ಈ ಹುದ್ದೆಗೆ ಕನಿಷ್ಠ ವಿದ್ಯಾರ್ಹತೆ ಕೇವಲ 5ನೇ ತರಗತಿ ಎಂದು ನಿಗದಿಪಡಿಸಲಾಗಿತ್ತು. ಆದರೆ, ಉದ್ಯೋಗದ ಕೊರತೆಯಿಂದಾಗಿ ಎಂ.ಬಿ.ಎ, ಎಂ.ಸಿ.ಎ ಮತ್ತು ತಾಂತ್ರಿಕ ಪದವಿ ಪಡೆದ ಯುವಕರೂ ಸಹ ಬಿಸಿಲಿನಲ್ಲಿ ರನ್‌ವೇ ಮೇಲೆ ಕುಳಿತು ಪರೀಕ್ಷೆ ಬರೆದಿದ್ದಾರೆ.
ಡೋನ್ ಕಣ್ಣಾವಲು:ಇಷ್ಟು ದೊಡ್ಡ ಸಂಖ್ಯೆಯ ಅಭ್ಯರ್ಥಿಗಳನ್ನು ನಿಯಂತ್ರಿಸಲು ಮತ್ತು ಪರೀಕ್ಷೆಯಲ್ಲಿ ಅಕ್ರಮ ನಡೆಯದಂತೆ ತಡೆಯಲು ಸಂಬಲ್‌ಪುರ ಪೊಲೀಸರು ಡೋನ್‌ಗಳ ಮೂಲಕ ನಿಗಾ ಇರಿಸಿದ್ದರು. 90 ನಿಮಿಷಗಳ ಕಾಲ ನಡೆದ ಈ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ನೆಲದ ಮೇಲೆಯೇ ಕುಳಿತು ಪತ್ರಿಕೆಯನ್ನು ಬರೆದಿದ್ದಾರೆ.













































