ಗ್ಯಾಂಗ್ಟಕ್: ದುಷ್ಯಂತ್ ಕುಮಾರ್ ಗೌತಮ್ ಅವರುಸೋಮವಾರ ಗ್ಯಾಂಗ್ಟಕ್ನ ಲೋಕಭವನದಲ್ಲಿ ನಡೆದ ಸಮಾರಂಭದಲ್ಲಿ ಸಿಕ್ಕಿಂನ 19ನೇ ರಾಜ್ಯಪಾಲರಾಗಿ ಪ್ರಮಾಣವಚನ ಸ್ವೀಕರಿಸಿದರು. ಅಂಕಿತಾ ಭಂಡಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ವಿವಾದದಲ್ಲಿ ಅವರ ಹೆಸರು ಕೇಳಿಬಂದಿರುವ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಅವರ ನೇಮಕಾತಿಗೆ ವಿರೋಧ ವ್ಯಕ್ತವಾಗುತ್ತಿರುವ ನಡುವೆಯೇ ಅವರು ಅಧಿಕಾರ ಸ್ವೀಕರಿಸಿದ್ದಾರೆ.ಸಿಕ್ಕಿಂ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಎ. ಮುಹಮ್ಮದ್ ಮುಸ್ತಾಕ್ ಅವರು ನೂತನ ರಾಜ್ಯಪಾಲರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣವಚನ ಬೋಧಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್, ಸಚಿವ ಸಂಪುಟದ ಸದಸ್ಯರು, ಸಿಕ್ಕಿಂ ವಿಧಾನಸಭೆಯ ಸ್ಪೀಕರ್, ಹೈಕೋರ್ಟ್ ನ್ಯಾಯಮೂರ್ತಿಗಳು, ಲೋಕಸಭಾ ಸದಸ್ಯರು, ಶಾಸಕರು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.ಪ್ರಮಾಣವಚನ ಸ್ವೀಕಾರ ಸಮಾರಂಭದ ಬಳಿಕ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಅವರು ವಿಧಾನಸಭೆಯ ಸ್ಪೀಕರ್, ಸಚಿವ ಸಂಪುಟದ ಸದಸ್ಯರು, ಶಾಸಕರು ಹಾಗೂ ಇತರ ಗಣ್ಯರನ್ನು ನೂತನ ರಾಜ್ಯಪಾಲರಿಗೆ ಪರಿಚಯಿಸಿದರು. ಬಳಿಕ ಸಿಕ್ಕಿಂ ಸಶಸ್ತ್ರ ಪೊಲೀಸ್ ಪಡೆ ವತಿಯಿಂದ ರಾಜ್ಯಪಾಲರಿಗೆ ಗೌರವ ವಂದನೆ ಸಲ್ಲಿಸಲಾಯಿತು.
ರಾಷ್ಟ್ರಪತಿ ದೌಪದಿ ಮುರ್ಮು ಅವರು 2026ರ ಅಕ್ಟೋಬರ್ 12ರಂದು ದುಷ್ಯಂತ್ ಕುಮಾರ್ ಗೌತಮ್ ಅವರನ್ನು ಸಿಕ್ಕಿಂ ರಾಜ್ಯಪಾಲರನ್ನಾಗಿ ನೇಮಕ ಮಾಡಿದ್ದರು. ಅವರು ಈ ಹಿಂದೆ ರಾಜ್ಯಪಾಲರಾಗಿದ್ದ ಓಂ ಪ್ರಕಾಶ್ ಮಾಥುರ್ ಅವರ ಉತ್ತರಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಇದೇ ವೇಳೆ, ರಾಜ್ಯಪಾಲರ ನೇಮಕಾತಿಯನ್ನು ವಿರೋಧಿಸಿ ಕಳೆದ ವಾರ ಗ್ಯಾಂಗ್ಟಕ್ನ ಜಿಲ್ಲಾ ಆಡಳಿತ ಕೇಂದ್ರದ ಎದುರು ರಾಜಕೀಯ ಪಕ್ಷಗಳೊಂದಿಗೆ ಸಂಬಂಧ ಹೊಂದಿರದ ಯುವಕರು ಹಾಗೂ ನಾಗರಿಕರು ಶಾಂತಿಯುತ ಧರಣಿ ನಡೆಸಿದ್ದರು.2022ರಲ್ಲಿ ನಡೆದ ಅಂಕಿತಾ ಭಂಡಾರಿ ಕೊಲೆ ಪ್ರಕರಣದಲ್ಲಿ ಪ್ರಭಾವಿ ವ್ಯಕ್ತಿಯೊಬ್ಬರ (ವಿಐಪಿ) ಪಾತ್ರವಿದೆ ಎಂಬ ಆರೋಪದ ಕುರಿತು ನಡೆಯುತ್ತಿರುವ ಸಿಬಿಐ ತನಿಖೆ ಪೂರ್ಣಗೊಳ್ಳುವವರೆಗೆ ದುಷ್ಯಂತ್ ಕುಮಾರ್ ಗೌತಮ್ ಅವರ ನೇಮಕಾತಿಯನ್ನು ಮುಂದೂಡಬೇಕು ಎಂದು ಪ್ರತಿಭಟನಾಕಾರರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.










































