ನವದೆಹಲಿ: ಚುನಾವಣಾ ಆಯೋಗದ ವಿರುದ್ಧ ಇಂಡಿಯಾಕೂಟದ ಪಕ್ಷಗಳು ನಡೆಸುತ್ತಿರುವ ಪ್ರತಿಭಟನೆಗಳು ಸಾಂವಿಧಾನಿಕ ಸಂಸ್ಥೆಗಳ ಮೇಲಿನ ಸಾರ್ವಜನಿಕ ನಂಬಿಕೆಯನ್ನು ಕುಂದಿಸುವ ಮತ್ತು ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳನ್ನು ದುರ್ಬಲಗೊಳಿಸುವ ವ್ಯವಸ್ಥಿತ ಯತ್ನಗಳಾಗಿವೆ ಎಂದು ಹಾರ್ವಡ್್ರ, ಆಕ್ಸ್‌ಫರ್ಡ್, ಕೇಂಬ್ರಿಡ್ಜ್ ಸೇರಿದಂತೆ 27 ದೇಶಗಳ ವಿವಿಧ ವಿಶ್ವವಿದ್ಯಾನಿಲಯಗಳ 400ಕ್ಕೂ ಹೆಚ್ಚು ಭಾರತೀಯ ಮೂಲದ ವಿದ್ಯಾರ್ಥಿಗಳು, ಸಂಶೋಧಕರು, ಶಿಕ್ಷಣ ತಜ್ಞರು ಹಾಗೂ ಹಳೆ ವಿದ್ಯಾರ್ಥಿಗಳು ತೀವ್ರವಾಗಿ ಖಂಡಿಸಿದ್ದಾರೆ.’ಭಾರತವನ್ನು ಅರಾಜಕತೆಯಿಂದ ಪಾರು ಮಾಡಿ’ ಎಂಬ ಶೀರ್ಷಿಕೆಯಡಿ ಜಂಟಿ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಪ್ರಜಾಪ್ರಭುತ್ವವನ್ನು ರಕ್ಷಿಸುವ ಹೆಸರಿನಲ್ಲಿ ಅದೇ ಪ್ರಜಾಪ್ರಭುತ್ವವನ್ನೇ ಬುಡಮೇಲು ಮಾಡುವ ಅರಾಜಕ ಬೀದಿ ಪ್ರತಿಭಟನೆಗಳ ವಿರುದ್ಧ ಎಚ್ಚರಿಕೆಯಿಂದರಬೇಕು ಎಂದು ಹೇಳಿದ್ದಾರೆ. ಚುನಾವಣಾ ಪ್ರಕ್ರಿಯೆಗಳ ಸಮಗ್ರತೆಯನ್ನು ಪ್ರಶ್ನಿಸಿ ಮತ್ತು ಅಕ್ರಮಗಳ ಆರೋಪ ಹೊರಿಸಿ ವಿರೋಧ ಪಕ್ಷಗಳು ಚುನಾವಣಾ ಆಯೋಗದ ವಿರುದ್ಧ ಮುಷ್ಕರ ಹಾಗೂ ಪ್ರತಿಭಟನೆಗಳನ್ನು ನಡೆಸುತ್ತಿರುವ ಬೆನ್ನಲ್ಲೇ ಈ ಹೇಳಿಕೆ ಹೊರಬಂದಿರುವುದು ಗಮನಾರ್ಹ.
ನ್ಯಾಯಾಲಯದ ವಿಚಾರಣೆಗೆ ಬಾಕಿ ಇರುವ ವಿಷಯಗಳನ್ನು ರಾಜಕೀಯ ಅಸ್ತ್ರವಾಗಿ ಬಳಸಿ, ಭಾರತದ ಪ್ರಜಾಪ್ರಭುತ್ವದ ಬಗ್ಗೆ ಅಪನಂಬಿಕೆ ಬಿತ್ತುವ ಹುನ್ನಾರ ನಡೆಸಲಾಗಿದೆ ಎಂದು ಹೇಳಿಕೆಯಲ್ಲಿ ಆರೋಪಿಸಲಾಗಿದೆ. ಪ್ರಜಾಪ್ರಭುತ್ವವನ್ನು ರಕ್ಷಿಸುವ ಸೋಗಿನಲ್ಲಿ ಸಾಂವಿಧಾನಿಕ ಆಡಳಿತದಲ್ಲಿ ನಂಬಿಕೆ ಇಲ್ಲದ ಅರಾಜಕ ಶಕ್ತಿಗಳನ್ನು ಬೀದಿಗಿಳಿಸಲಾಗುತ್ತಿದೆ ಎಂದೂ ಅವರು ಕಳವಳ ವ್ಯಕ್ತಪಡಿಸಿದ್ದಾರೆ.ಚುನಾವಣೆಯ ಸೋಲುಗಳಿಂದಾಗಿ ಚುನಾವಣೆಯ ಕಾರ್ಯವಿಧಾನದ ಸಮಗ್ರತೆಯನ್ನೇ ಪ್ರಶ್ನಿಸುವುದು ಹಾಸ್ಯಾಸ್ಪದ ಎಂದೂ ತಿಳಿಸಲಾಗಿದೆ.










































