ಇಂದು ದೇಶಾದ್ಯಂತ ವಿಜಯದಶಮಿ ಸಂಭ್ರಮ ಮನೆಮಾಡಿದೆ. ನವರಾತ್ರಿ ಆಚರಣೆಗೂ ಮುನ್ನ ಆಚರಣೆ ಮಾಡುತ್ತಿರುವುದು ಯಾಕೆ ಎಂದು ತಿಳಿದುಕೊಳ್ಳುವುದು ಮುಖ್ಯವಾಗಿದೆ. ನವರಾತ್ರಿ ಹಾಗೂ ವಿಜಯದಶಮಿಯ ಕಥೆ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ..ನವರಾತ್ರಿ ಎಂದರೆ ಒಂಬತ್ತುರಾತ್ರಿಗಳು ಎಂದರ್ಥ. ಒಂಬತ್ತು ದಿನಗಳ ಕಾಲ ದುಷ್ಟಶಕ್ತಿಗಳ ವಿರುದ್ಧ ದೈವಿಕ ಶಕ್ತಿಗಳು ಹೋರಾಡಿ ಜಯಗಳಿಸಿದ ದಿನಗಳು. ದುರ್ಗಾದೇವಿಯು ವಿಭಿನ್ನ ಅವತಾರಗಳನ್ನು ತಾಳಿ ರಾಕ್ಷಸರ ವಧೆ ಮಾಡಿರುವ ಸಮಯ ಇದಾಗಿದೆ.ಪುರಾಣಗಳ ಪ್ರಕಾರ, ಮಹಿಷಾಸುರ ಎನ್ನುವ ರಾಕ್ಷಸನು ಕಠಿಣ ತಪಸ್ಸುಗಳನ್ನು ಮಾಡಿ ಬ್ರಹ್ಮದೇವನಿಂದ ವರಗಳನ್ನು ಪಡೆದಿರುತ್ತಾನೆ. ದೇವತೆಗಳ ಹಾಗೂ ಭೂಮಿಯಲ್ಲಿದ್ದ ಮನುಷ್ಯರಿಗೆ ಹಿಂಸೆ ನೀಡುತ್ತಾನೆ. ಯಾವ ಗಂಡಸೂ ಅಥವಾ ಅವರ ಶಕ್ತಿಯು ನನ್ನನ್ನು ಕೊಲ್ಲಬಾರದು ಎನ್ನುವ ವರವನ್ನು ಪಡೆದಿರುತ್ತಾನೆ.
ದೇವತೆಗಳು ಆದಿಶಕ್ತಿಯ ಮೊರೆ ಹೋಗುತ್ತಾರೆ. ಆಗ ಎಲ್ಲ ದೇವತೆಗಳ ತೇಜಸ್ಸು ಮತ್ತು ಶಕ್ತಿ ಒಂದಾಗಿ ಮಹಾಶಕ್ತಿ ದೇವಿಯು (ದುರ್ಗಾದೇವಿ) ಪ್ರಕಟಗೊಂಡಳು. ದೇವಿಯು ಮಹಿಷಾಸುರನೊಂದಿಗೆ ಒಂಬತ್ತು ದಿನಗಳ ಕಾಲ ಭೀಕರ ಯುದ್ಧ ಮಾಡಿ, ಹತ್ತನೇ ದಿನವಾದ ವಿಜಯದಶಮಿಯಂದು ಆ ರಾಕ್ಷಸನನ್ನು ಸಂಹಾರ ಮಾಡಿದಳು. ಇದು ಕೆಟ್ಟದ್ದರ ಮೇಲೆ ಒಳ್ಳೆಯದು ಗೆದ್ದ ದಿನದ ಸಂಕೇತವಾಗಿದೆ.ಶೈಲಪುತ್ರಿ ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಂಡಾ, ಸ್ಕಂದಮಾತಾ, ಕತ್ಯಾಯನಿ, ಕಾಳರಾತ್ರಿ, ಮಹಾಗೌರಿ ಹಾಗೂ ಸಿದ್ಧಿಧಾತ್ರಿ ನವದುರ್ಗೆಯ ಒಂಬತ್ತು ರೂಪಗಳಾಗಿವೆ.










































