ಬೆಂಗಳೂರು: ‘ವೀರಶೈವ- ಲಿಂಗಾಯತರು ಧರ್ಮ ಮತ್ತು ಜಾತಿಯನ್ನು ತಮಗೆ ಹೇಗೆ ಬೇಕೋ ಹಾಗೆ ಬರೆಸಿಕೊಳ್ಳಲಿ’ ಎಂದು ಸಿದ್ದರಾಮಯ್ಯ ಹೇಳಿದರು.
‘ವೀರಶೈವ ಲಿಂಗಾಯತರು ಹಿಂದೂ ಧರ್ಮ ಎಂಬುದನ್ನು ಬಳಸದೇ ಲಿಂಗಾಯತ ಧರ್ಮ ಎಂದೇ ನಮೂದಿಸಬೇಕು ಎಂದು ಕೆಲವರು ಪ್ರಚಾರ ಮಾಡುತ್ತಿದ್ದಾರೆ. ಆದರೆ, ಧರ್ಮದ ಪಟ್ಟಿಯಲ್ಲಿ ಲಿಂಗಾಯತ ಧರ್ಮದ ಉಲ್ಲೇಖ ಇಲ್ಲ. ಹೀಗಾಗಿ ಏನೆಂದು ಬರೆಸಬೇಕೆಂಬ ಗೊಂದಲಕ್ಕೆ ಆ ಸಮುದಾಯದ ಜನ ಸಿಲುಕಿದ್ದಾರೆ’ ಎಂಬ ಪ್ರಶ್ನೆಗೆ ಅವರು ಮೇಲಿನಂತೆ ಉತ್ತರಿಸಿದರು.“ಅವರು ‘ವೀರಶೈವ-ಲಿಂಗಾಯತ’ ಧರ್ಮ ಅಂತ ಬರೆಯಿಸಲಿ, ‘ವೀರಶೈವ’ ಧರ್ಮ ಅಂತಾನೆ ಬರೆಯಿಸಲಿ, ಕೇವಲ ವೀರಶೈವ ಅಥವಾ ಲಿಂಗಾಯತ ಅಂತ ಬೇಕಾದರೂ ಬರೆಯಿಸಿಕೊಳ್ಳಲಿ. ನಮಗೆ ಬೇಕಾಗಿರುವುದು ಅವರ ಶೈಕ್ಷಣಿಕ, ಸಾಮಾಜಿಕ ಸ್ಥಿತಿಗತಿ ಮಾತ್ರ. ಏನು ಬೇಕಾದರೂ ಬರೆಯಿಸಿಕೊಳ್ಳಲಿ’ ಎಂದು ಹೇಳಿದರು. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಲಿಂಗಾಯತ ಧರ್ಮ ಎಂದೇ ಬರೆಯಿಸಬೇಕು ಎಂದು ಆ ಸಮುದಾಯದ ಕೆಲವು ಮಠಾಧೀಶರು ಮತ್ತು ಪ್ರಮುಖರು ಪ್ರಚಾರ ನಡೆಸುತ್ತಿದ್ದಾರೆ.ಆದರೆ, ಹಿಂದುಳಿದ ವರ್ಗಗಳ ಆಯೋಗ ಪ್ರಕಟಿಸಿರುವ ಸಮೀಕ್ಷೆಯ ಕೈಪಿಡಿಯಲ್ಲಿ ಹಿಂದೂ, ಇಸ್ಲಾಂ, ಕ್ರೈಸ್ತ, ಜೈನ, ಸಿಖ್, ಬೌದ್ಧ, ಪಾರ್ಸಿ, ನಾಸ್ತಿಕ, ಗೊತ್ತಿಲ್ಲ, ತಿಳಿಸಲು ನಿರಾಕರಿಸುತ್ತಾರೆ ಮತ್ತು ಇತರೆ ಎಂದು ಇದೆ. ‘ಪ್ರಮುಖ 7 ಧರ್ಮಗಳ ಹೊರತಾಗಿ ಇತರೆ ಧರ್ಮಗಳಿದ್ದಲ್ಲಿ, ಅವುಗಳನ್ನು ಇತರೆ ವಿಭಾಗದಲ್ಲಿ ಕೋಡ್ ಸಂಖ್ಯೆ 11ರಲ್ಲಿ ನಮೂದಿಸಬಹುದು’ ಎಂದು ಸೂಚಿಸಲಾಗಿದೆ.











































