ಐಪಿಎಲ್ 2026: ಗುಜರಾತ್ ಟೈಟನ್ಸ್ ಮಣಿಸಿ ಸತತ ಎರಡನೇ ಬಾರಿ ಐಪಿಎಲ್‌ ಮುಕುಟ ಧರಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು!

Picture of Savistara

Savistara

Bureau Report

ಅಹಮದಾಬಾದ್ (ಮೇ 31): ಅಹಮದಾಬಾದ್‌ನ ನರೇಂದ್ರ ಮೋದಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಐಪಿಎಲ್ 2026ರ ರೋಚಕ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಗುಜರಾತ್ ಟೈಟನ್ಸ್ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಟಾಸ್‌ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಆರ್‌ಸಿಬಿ ನಾಯಕ ರಜತ್ ಪಾಟೀದಾರ್ ಅವರ ತೀರ್ಮಾನವನ್ನು ಬೌಲರ್‌ಗಳು ಸಂಪೂರ್ಣವಾಗಿ ಸಮರ್ಥಿಸಿಕೊಂಡರು. ಶಿಸ್ತುಬದ್ಧ ಬೌಲಿಂಗ್ ದಾಳಿ ಸಂಘಟಿಸಿದ ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹೇಜಲ್‌ವುಡ್ ತಲಾ ಎರಡು ವಿಕೆಟ್ ಕಸಿದು ಗುಜರಾತ್ ಟೈಟನ್ಸ್ ತಂಡವನ್ನು 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 155 ರನ್‌ಗಳ ಸಾಧಾರಣ ಮೊತ್ತಕ್ಕೆ ನಿಯಂತ್ರಿಸಿದರು. ಗುಜರಾತ್ ಪರ ವಾಷಿಂಗ್ಟನ್ ಸುಂದರ್ (50 ರನ್) ಅರ್ಧಶತಕ ಗಳಿಸಿ ತಂಡಕ್ಕೆ ಆಸರೆಯಾದರು.

ಬಳಿಕ 156 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ತಂಡಕ್ಕೆ ವಿರಾಟ್ ಕೊಹ್ಲಿ ಸ್ಪೋಟಕ ಆರಂಭನೀಡಿದರು. ಗಾಯದ ಸಮಸ್ಯೆಯ ನಡುವೆಯೂ ಅದ್ಭುತ ಬ್ಯಾಟಿಂಗ್‌ ಪ್ರದರ್ಶಿಸಿದ ಕೊಹ್ಲಿ, ಕೇವಲ 42 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 9 ಬೌಂಡರಿಗಳ ನೆರವಿನಿಂದ 75 ರನ್ ಚಚ್ಚಿ ತಮ್ಮ ಐಪಿಎಲ್ ಇತಿಹಾಸದ ಅತ್ಯಂತ ವೇಗದ ಅರ್ಧಶತಕವನ್ನು ದಾಖಲಿಸಿದರು. ಮಧ್ಯಮ ಕ್ರಮಾಂಕದಲ್ಲಿ ಟಿಮ್ ಡೇವಿಡ್ (24 ರನ್) ರನ್ ವೇಗಕ್ಕೆ ಗತಿ ನೀಡಿದರು. ಕೊನೆಯಲ್ಲಿ ಆರ್‌ಸಿಬಿ 18 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿ ಇನ್ನು 12 ಎಸೆತಗಳು ಬಾಕಿ ಇರುವಂತೆಯೇ ಸುಲಭವಾಗಿ ವಿಜಯದ ನಗೆ ಬೀರಿತು.

ಈ ಐತಿಹಾಸಿಕ ಗೆಲುವಿನೊಂದಿಗೆ ರಜತ್ ಪಾಟೀದಾ‌ರ್ ನೇತೃತ್ವದ ಆರ್‌ಸಿಬಿ, ಎಂ.ಎಸ್. ಧೋನಿ ಮತ್ತು ರೋಹಿತ್ ಶರ್ಮಾ ಅವರ ಬಳಿಕ ಐಪಿಎಲ್ ಇತಿಹಾಸದಲ್ಲಿ ಸತತ ಎರಡು ಬಾರಿ ಟ್ರೋಫಿ ಗೆದ್ದ ಮೂರನೇ ನಾಯಕ ಹಾಗೂ ತಂಡ ಎಂಬ ಅಪರೂಪದ ಕೀರ್ತಿಗೆ ಭಾಜನವಾಗಿದೆ. ಭರ್ಜರಿ ಗೆಲುವು ಸಾಧಿಸಿದ ಬೆಂಗಳೂರು ತಂಡದ “ಈ ಸಲ ಕಪ್ ನಮ್ಮೆ” ಎನ್ನುವ ಘೋಷಣೆ ಸತತ ಎರಡನೇ ವರ್ಷವೂ ನಿಜವಾಗಿದ್ದು, ಅಭಿಮಾನಿಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದೆ.

[t4b-ticker]
error: Content is protected !!