
ಮಂಗಳೂರು : ನೈಋತ್ಯ ಮುಂಗಾರು ಗುರುವಾರ ಕೇರಳವನ್ನು ಪ್ರವೇಶಿಸಿದ್ದು, ಶುಕ್ರವಾರ ಸಂಜೆಯಿಂದ ಕರಾವಳಿಯಾದ್ಯಂತ ಭಾರೀ ಮಳೆ ಸುರಿಯುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗತೊಡಗಿದ್ದು, ನಿನ್ನೆ ರಾತ್ರಿ ಹಾಗೂ ಇಂದು ಬೆಳಿಗ್ಗಿನಿಂದಲೇ ಕರಾವಳಿಯಲ್ಲಿ ಉತ್ತಮ ಮಳೆಯಾಗುತ್ತಿದೆ. ಭಾರೀ ಗಾಳಿ ಮಳೆಗೆ ತಗ್ಗು ಪ್ರದೇಶಗಳು ಜಲಾವೃತವಾಗತೊಡಗಿದೆ. ನಗರ ಹೊರವಲಯದ ಸುರತ್ಕಲ್‌ನಲ್ಲಿ ಕೃತಕ ನೆರೆ ಸೃಷ್ಟಿಯಾಗಿದ್ದು,ರಸ್ತೆಯಲ್ಲಿ ಹರಿದ ಕೃತಕ ನೆರೆ ಮನೆಯಂಗಳಕ್ಕೆ ನುಗ್ಗಿದೆ. ಇನ್ನು ಬೆಳ್ತಂಗಡಿ, ಬಂಟ್ವಾಳ, ಪುತ್ತೂರು, ಸೇರಿದಂತೆ ಸುಳ್ಯದಲ್ಲೂ ಭಾರೀ ಮಳೆಯಾಗುತ್ತಿರುವ ಬಗ್ಗೆ ವರದಿಯಾಗಿದೆ. ಐಎಂಡಿ ಪ್ರಕಟಣೆಯ ಪ್ರಕಾರ, ನೈಋತ್ಯ ಮುಂಗಾರು ಅರಬ್ಬಿ ಸಮುದ್ರದ ನೈಋತ್ಯ ಮತ್ತು ಆಗ್ನೇಯ ಭಾಗಗಳ ಉಳಿದ ಪ್ರದೇಶಗಳಿಗೆ, ಪಶ್ಚಿಮ-ಮಧ್ಯ ಮತ್ತು ಪೂರ್ವ-ಮಧ್ಯ ಅರಬ್ಬಿ ಸಮುದ್ರದ ಕೆಲವು ಭಾಗಗಳಿಗೆ, ಲಕ್ಷದ್ವೀಪ ದ್ವೀಪಸಮೂಹದ ಸಂಪೂರ್ಣ ಪ್ರದೇಶಕ್ಕೆ, ಕೇರಳ, ಕರ್ನಾಟಕ ಹಾಗೂ ತಮಿಳುನಾಡಿನ ಕೆಲವು ಭಾಗಗಳಿಗೆ, ಕನ್ಯಾಕುಮಾರಿ ಸುತ್ತಮುತ್ತಲಿನ ಸಮುದ್ರ ಪ್ರದೇಶಗಳಿಗೆ, ಉಳಿದ ಭಾಗಗಳಿಗೆ ಹಾಗೂ ಬಂಗಾಳ ಕೊಲ್ಲಿಯ ಆಗ್ನೇಯ, ನೈಋತ್ಯ, ಪಶ್ಚಿಮ-ಮಧ್ಯ, ಪೂರ್ವ-ಮಧ್ಯ ಮತ್ತು ಈಶಾನ್ಯ ಭಾಗಗಳ ಇನ್ನಷ್ಟು ಪ್ರದೇಶಗಳಿಗೆ ವಿಸ್ತರಿಸಿದೆ.
ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಗುರುವಾರ ಸಂಜೆಯಿಂದ ಭಾರೀ ಮಳೆಯಾಗುತ್ತಿದ್ದು ಕೆಲವು ಕಡೆ ಕೃತಕ ನೆರೆ ಉಂಟಾಗಿದ್ದು, ಕಿನ್ನಿಗೋಳಿ ಬಸ್ ನಿಲ್ದಾಣದಲ್ಲಿ ಕೃತಕ ನೆರೆ ಉಂಟಾಗಿದ್ದು 6 ಅಂಗಡಿ ಒಳಗೆ ನೀರು ನುಗ್ಗಿದೆ. ಈ ಮಳೆಯ ಅವಾಂತರಕ್ಕೆ ಮಾಲಕರು ಸುಸ್ತಾಗಿದ್ದಾರೆ. ಮಳೆಗಾಲಕ್ಕೂ ಮುನ್ನ ಚರಂಡಿ ಕಾಮಗಾರಿ ನಡೆಸಿದರೂ ಕೆಲವೊಂದು ಕಡೆ ನೀರು ಹಾದು ಹೋಗುವ ಮೋರಿ ಬ್ಲಾಕ್ ಇದ್ದ ಕಾರಣ ನೀರು ಸರಾಗವಾಗಿ ಹರಿದುಹೋಗಲು ಸಾದ್ಯವಾಗಿಲ್ಲ. ಶುಕ್ರವಾರ ಬೆಳಿಗ್ಗೆ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಅಧ್ಯಕ್ಷರು, ಸದಸ್ಯರು ಪಂಚಾಯತ್ ಸಿಬ್ಬಂದಿಗಳೊಂದಿಗೆ ಜೆಸಿಬಿ ಮೂಲಕ ಸರಿಪಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡರು.ಇನ್ನು ಭಾರೀ ಮಳೆ ಹಿನ್ನೆಲೆಯಲ್ಲಿ ಮೀನುಗಾರರ ಕಡಲಿಗೆ ತೆರಳದಂತೆ ಮುನ್ಸೂಚನೆ ನೀಡಲಾಗಿದೆ.










































