Norway Chess: ವಿಶ್ವದ ನಂ.1 ಮ್ಯಾಗ್ನಸ್ ಕಾರ್ಲ್‌ನ್ ವಿರುದ್ಧ ಪ್ರಜ್ಞಾನಂದ ಭರ್ಜರಿ ಜಯ

Picture of Savistara

Savistara

Bureau Report

ನಾರ್ವೆ: ಭಾರತದ ಯುವ ಗ್ರಾಂಡ್‌ಮಾಸ್ಟರ್ ಆರ್. ಪ್ರಜ್ಞಾನಂದ ಅವರು ಇಲ್ಲಿ ನಡೆಯುತ್ತಿರುವ ‘ನಾರ್ವೆ ಚೆಸ್’ ಟೂರ್ನಿಯಲ್ಲಿ ಜಗತ್ತೇ ಬೆರಗಾಗುವಂತಹ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಟೂರ್ನಿಯ 8ನೇ ಸುತ್ತಿನಲ್ಲಿ ವಿಶ್ವದ ನಂ.1 ಆಟಗಾರ, ನಾರ್ವೆಯ ಮ್ಯಾಗ್ನಸ್ ಕಾರ್ಲ್‌ನ್ ಅವರನ್ನು 2ನೇ ಬಾರಿಗೆ ಮಣಿಸುವ ಮೂಲಕ ಪ್ರಜ್ಞಾನಂದ ಇತಿಹಾಸ ಬರೆದಿದ್ದಾರೆ. ಈ ಗೆಲುವಿನೊಂದಿಗೆ, ಒಂದೇ ಟೂರ್ನಿಯಲ್ಲಿ ಕಾರ್ಲ್‌ನ್‌ರನ್ನು ಎರಡು ಬಾರಿ ಸೋಲಿಸಿದ ವಿಶ್ವದ ಅತ್ಯಪರೂಪದ ಆಟಗಾರರ ಸಾಲಿಗೆ ಚೆನ್ನೈನ 20 ವರ್ಷದ ಯುವ ಆಟಗಾರ ಸೇರ್ಪಡೆಯಾಗಿದ್ದಾರೆ.

ಕಳೆದ ಮೇ 27 ರಂದು ನಡೆದ 3ನೇ ಸುತ್ತಿನ ಪಂದ್ಯದಲ್ಲಿ ಬಿಳಿ ದಾಳಗಳೊಂದಿಗೆ ಆಡಿ ಕಾರ್ಲ್‌ನ್‌ಗೆ ಶಾಕ್ ನೀಡಿದ್ದ ಪ್ರಜ್ಞಾನಂದ, ಇದೀಗ 8ನೇ ಸುತ್ತಿನಲ್ಲಿ ಕಪ್ಪು ದಾಳಗಳೊಂದಿಗೆ ಆಡಿಯೂ ಜಯಭೇರಿ ಬಾರಿಸುವ ಮೂಲಕ ತಾವೊಬ್ಬ ಅಸಾಧಾರಣ ಪ್ರತಿಭೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ವಿಶೇಷವೆಂದರೆ, 2024ರ ನಾರ್ವೆ ಚೆಸ್‌ ಆವೃತ್ತಿಯಲ್ಲೂ ಪ್ರಜ್ಞಾನಂದ ಅವರು ಕಾರ್ಲ್‌ಸನ್ ವಿರುದ್ಧ ಜಯ ಗಳಿಸಿದ್ದರು.

ಆನಂದ್‌ ಸಾಧನೆ ಸರಿಗಟ್ಟಿದ ಯುವ ಪ್ರತಿಭೆ

ಕ್ಲಾಸಿಕಲ್ ಚೆಸ್ ಇತಿಹಾಸದಲ್ಲಿ ಕಳೆದ 19 ವರ್ಷಗಳಲ್ಲಿ ಯಾವುದೇ ಆಟಗಾರ ಒಂದೇ ಟೂರ್ನಿಯಲ್ಲಿ ಕಾರ್ಲ್‌ನ್‌ ಅವರನ್ನು ಎರಡು ಬಾರಿ ಸೋಲಿಸಲು ಸಾಧ್ಯವಾಗಿರಲಿಲ್ಲ. ಇದೀಗ ಪ್ರಜ್ಞಾನಂದ ಆ ಅಸಾಧ್ಯವನ್ನು ಸಾಧ್ಯವಾಗಿಸಿದ್ದಾರೆ. ಇದಕ್ಕೂ ಮುನ್ನ 2007ರ ‘ಲಿನಾರೆಸ್ ಇಂಟರ್ನ್ಯಾಷನಲ್ ಚೆಸ್’ ಟೂರ್ನಿಯಲ್ಲಿ ಭಾರತದ ದಿಗ್ಗಜ ವಿಶ್ವನಾಥನ್ ಆನಂದ್ ಅವರು ಕಾರ್ಲ್‌ನ್ ಅವರನ್ನು ಎರಡು ಬಾರಿ ಸೋಲಿಸಿದ್ದರು. ಆನಂದ್ ಅವರ ಈ 19 ವರ್ಷಗಳ ಹಳೆಯ ದಾಖಲೆಯನ್ನು ಇದೀಗ ಪ್ರಜ್ಞಾನಂದ ಸರಿಗಟ್ಟಿದ್ದಾರೆ.

ಹೊಗಳಿಕೆಗೆ ತಲೆಕೆಡಿಸಿಕೊಳ್ಳದ ಚೆನ್ನೈ ಹುಡುಗ

ಇಷ್ಟು ದೊಡ್ಡ ಐತಿಹಾಸಿಕ ಗೆಲುವು ಸಾಧಿಸಿದರೂ ಯುವ ಆಟಗಾರ ಪ್ರಜ್ಞಾನಂದ ಮಾತ್ರ ತಮಗೆ ಸಿಗುತ್ತಿರುವ ಅತಿಯಾದ ಪ್ರಶಂಸೆ ಹಾಗೂ ಪ್ರಚಾರದಿಂದ ದೂರವುಳಿದಿದ್ದಾರೆ. ಪಂದ್ಯದ ಬಳಿಕ ‘ಚೆಸ್ ಬೇಸ್ ಇಂಡಿಯಾ’ ಜೊತೆ ಮಾತನಾಡಿದ ಅವರು, “ಮ್ಯಾಗ್ನಸ್ ಕಾರ್ಲ್‌ನ್‌ ಅವರಂತಹ ದಿಗ್ಗಜನನ್ನು ಸೋಲಿಸುವುದಕ್ಕಿಂತ, ಟೂರ್ನಿಯ ಈ ಹಂತದಲ್ಲಿ ಪಂದ್ಯವನ್ನು ಗೆಲ್ಲುವುದು ನನಗೆ ತುಂಬಾ ಮುಖ್ಯವಾಗಿತ್ತು. ಈ ಗೆಲುವು ಸಾಧಿಸಿದ್ದಕ್ಕೆ ನನಗೆ ಖುಷಿಯಿದೆ” ಎಂದು ಅತ್ಯಂತ ವಿನಮ್ರವಾಗಿ ಉತ್ತರಿಸಿದ್ದಾರೆ.

ಕಾರ್ಲ್‌ನ್ ಅವರ ಆಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಜ್ಞಾನಂದ,”ಅವರು ಅತ್ಯುತ್ತಮವಾಗಿ ಡಿಫೆಂಡ್ ಮಾಡುತ್ತಿದ್ದರು. ಬೇರೆ ಯಾವುದೇ ಆಟಗಾರನಾಗಿದ್ದರೆ ಒತ್ತಡದ ಸಮಯದಲ್ಲಿ ಸಣ್ಣಪುಟ್ಟ ತಪ್ಪುಗಳನ್ನು ಮಾಡುತ್ತಿದ್ದರು. ಆದರೆ ಕಾರ್ಲ್ಟನ್ ನಿಖರವಾದ ನಡೆಗಳನ್ನೇ ಇಡುತ್ತಿದ್ದರು. ಪಂದ್ಯವು ಡ್ರಾ ಆಗಲಿದೆ ಎಂದೇ ನಾನು ಭಾವಿಸಿದ್ದೆ. ಆದರೆ ಕೊನೆಯಲ್ಲಿ ಅವರು ಅನಿರೀಕ್ಷಿತವಾಗಿ ದೊಡ್ಡ ತಪ್ಪು (Blunder) ಎಸಗಿದರು” ಎಂದು ಪಂದ್ಯದ ರೋಚಕತೆಯನ್ನು ಬಿಚ್ಚಿಟ್ಟಿದ್ದಾರೆ.

ಟೂರ್ನಿಯ ಸದ್ಯದ ಪರಿಸ್ಥಿತಿ: ಸದ್ಯ ಪ್ರಜ್ಞಾನಂದ 12ಅಂಕಗಳೊಂದಿಗೆ ಟೂರ್ನಿಯ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಅಮೆರಿಕದ ವೆಸ್ಲಿ ಸೋ (14 ಅಂಕ) ಮೊದಲ ಸ್ಥಾನದಲ್ಲಿದ್ದರೆ, ಅಲಿರೆಜಾ ಫಿರೌಜ್ಜಾ (13 ಅಂಕ) ಎರಡನೇ ಸ್ಥಾನದಲ್ಲಿದ್ದಾರೆ.ಟೂರ್ನಿಯಲ್ಲಿ ಇನ್ನು ಕೇವಲ ಎರಡು ಸುತ್ತುಗಳು ಬಾಕಿ ಉಳಿದಿದ್ದು, ಮುಂದಿನ ಪಂದ್ಯದಲ್ಲಿ ಪ್ರಜ್ಞಾನಂದ ಅವರು ಸದ್ಯದ ವಿಶ್ವ ಚಾಂಪಿಯನ್ ಡಿ. ಗುಕೇಶ್ ವಿರುದ್ಧ ಹಾಗೂ ಅಂತಿಮ ಸುತ್ತಿನಲ್ಲಿ ಜರ್ಮನಿಯ ವಿನ್ಸೆಂಟ್ ಕೀಮ‌ರ್ ವಿರುದ್ಧ ಸೆಣಸಲಿದ್ದಾರೆ. ಭರ್ಜರಿ ಫಾರ್ಮ್‌ನಲ್ಲಿರುವ ಭಾರತದ ಯುವ ತಾರೆ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಜಿದ್ದಾಜಿದ್ದಿನ ರೇಸ್‌ನಲ್ಲಿದ್ದಾರೆ.

[t4b-ticker]
error: Content is protected !!