ಸುಳ್ಯ : ಶಾಲಾ ಪ್ರಾರಂಭೋತ್ಸವ, ಮೆಗಾ ಪೋಷಕರ ಸಭೆ | ಕಲಿಕಾ ಸಾಮಗ್ರಿ, ಇನ್‌ವರ್ಟರ್ ಹಸ್ತಾಂತರ; ನೀರಿನ ಘಟಕ, ಪೌಷ್ಟಿಕ ಕೈತೋಟ ನಿರ್ಮಾಣಕ್ಕೆ ಗುದ್ದಲಿಪೂಜೆ | ವಿದ್ಯಾರ್ಥಿಗಳಿಗೆ ಪುಷ್ಪವೃಷ್ಟಿಯ ಸ್ವಾಗತ; ಆಕರ್ಷಕ ಅಲಂಕಾರ

Picture of Savistara

Savistara

Bureau Report

ಮುಕ್ಕೂರು: ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳು ಕೇವಲ ಶಿಕ್ಷಣ ಕೇಂದ್ರಗಳಾಗಿರದೆ ಗ್ರಾಮದ ಅಭಿವೃದ್ಧಿಯ ಪ್ರತೀಕಗಳಾಗಿದ್ದು, ಶತಮಾನದ ಹೊಸ್ತಿಲಿನಲ್ಲಿರುವ ಮುಕ್ಕೂರು ಶಾಲೆಯ ಬೆಳವಣಿಗೆಯಲ್ಲಿ ದಾನಿಗಳು, ಗ್ರಾಮಸ್ಥರು, ಹಳೆ ವಿದ್ಯಾರ್ಥಿಗಳು ಹಾಗೂ ನೇಸರ ಯುವಕ ಮಂಡಲ ನೀಡುತ್ತಿರುವ ಸಹಕಾರ ಇತರರಿಗೆ ಮಾದರಿಯಾಗಿದೆ ಎಂದು ಪ್ರಗತಿಪರ ಕೃಷಿಕ ಹಾಗೂ ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಸುಬ್ರಾಯ ಭಟ್ ನೀರ್ಕಜೆ ಹೇಳಿದರು.

ಮುಕ್ಕೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾಲಾ ಪ್ರಾರಂಭೋತ್ಸವ, ‘ಪುಸ್ತಕ ನೀಡೋಣ ಬನ್ನಿ’ ಅಭಿಯಾನದಡಿ ಸಂಗ್ರಹವಾದ ಬರವಣಿಗೆ ಪುಸ್ತಕ ಹಾಗೂ ಕಲಿಕಾ ಸಾಮಗ್ರಿಗಳ ವಿತರಣೆ, ‘ನಮ್ಮ ಶಾಲೆ-ನಮ್ಮ ಕೊಡುಗೆ’ ಅಭಿಯಾನದಡಿ ದಾನಿಗಳು ನೀಡಿದ ಮೂಲಸೌಕರ್ಯಗಳ ಹಸ್ತಾಂತರ, ಇನ್‌ವರ್ಟರ್ ಹಸ್ತಾಂತರ, ಕೈ ತೊಳೆಯುವ ನೀರಿನ ಘಟಕ ಹಾಗೂ ನೇಸರ ಪೌಷ್ಟಿಕ ಕೈತೋಟ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪುಸ್ತಕ ನೀಡೋಣ ಬನ್ನಿ’ ಅಭಿಯಾನದಲ್ಲಿ 400 ಪುಸ್ತಕಗಳ ಕೊಡುಗೆ ನೀಡಿದ ಪೆರುವಾಜೆಯ ಡಾ. ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಕ್ಷಿತ್ ಪೆರುವಾಜೆ ಮಾತನಾಡಿ, ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಆ ನಿಟ್ಟಿನಲ್ಲಿ ತಾನು ಸಣ್ಣ ಪ್ರಯತ್ನ ಮಾಡಿದ್ದು, ಊರಿನಲ್ಲಿ ನೇಸರ ಸಂಘಟನೆ ಸೇರಿದಂತೆ ದಾನಿಗಳು ಶಾಲೆಗೆ ನೀಡುತ್ತಿರುವ ಪ್ರೋತ್ಸಾಹ ಶ್ಲಾಘನೀಯ ಎಂದು ಹೇಳಿದರು.

ಮುಕ್ಕೂರು ನೇಸರ ಯುವಕ ಮಂಡಲದ ಗೌರವಾಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಮಾತನಾಡಿ, ಸರ್ಕಾರಿ ಶಾಲೆಗಳ ಉಳಿವು ಇಂದಿನ ಅಗತ್ಯವಾಗಿದೆ. ಗ್ರಾಮಸ್ಥರು ಹಾಗೂ ಯುವ ಸಮುದಾಯ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಶಾಲೆಗಳ ಅಭಿವೃದ್ಧಿ ಸಾಧ್ಯ. ಮುಕ್ಕೂರು ಶಾಲೆಯ ಅಭಿವೃದ್ಧಿಗೆ ಮುಂದೆಯೂ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.*ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಜಯಂತ ಗೌಡ ಕುಂಡಡ್ಕ ಮಾತನಾಡಿ,* ಶಾಲೆಯ ಸೌಲಭ್ಯಗಳ ವೃದ್ಧಿಗೆ ಪೋಷಕರು, ದಾನಿಗಳು ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳ ಬೆಂಬಲ ನಿರಂತರವಾಗಿ ದೊರೆಯುತ್ತಿರುವುದು ಸಂತಸದ ವಿಷಯ ಎಂದರು.

ಶಾಲಾ ಮುಖ್ಯಗುರು ಲತಾ ಕುಮಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ಶಾಲೆಯಲ್ಲಿ ಜಾರಿಯಲ್ಲಿರುವ ದ್ವಿಭಾಷಾ ಶಿಕ್ಷಣ ವ್ಯವಸ್ಥೆ, ಕಲಿಕಾ ಚಟುವಟಿಕೆಗಳು ಹಾಗೂ ಈ ವರ್ಷ ದಾಖಲಾತಿಯಲ್ಲಿ ಕಂಡುಬಂದಿರುವ ಏರಿಕೆಯ ಬಗ್ಗೆ ಮಾಹಿತಿ ನೀಡಿದರು. ಗುಣಮಟ್ಟದ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಶಾಲೆ ಒತ್ತು ನೀಡುತ್ತಿದೆ ಎಂದರು.*ಹಸ್ತಾಂತರ, ಶಿಲಾನ್ಯಾಸ*ಈ ಸಂದರ್ಭದಲ್ಲಿ ‘ಪುಸ್ತಕ ನೀಡೋಣ ಬನ್ನಿ’ ಅಭಿಯಾನದಡಿ ಸಂಗ್ರಹಿಸಲಾದ ಪುಸ್ತಕಗಳು ಹಾಗೂ ವಿವಿಧ ಕಲಿಕಾ ಸಾಮಗ್ರಿಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

ಪುಸ್ತಕ ಅಭಿಯಾನದ ಉಳಿಕೆ ಮೊತ್ತದಿಂದ ಖರೀದಿಸಲಾದ ಇನ್‌ವರ್ಟರ್‌ನ್ನು ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಕೋಶಾಧಿಕಾರಿ ಜೈನುದ್ದೀನ್ ತೋಟದಮೂಲೆ ಉದ್ಘಾಟಿಸಿದರು.

ಶಾಲೆಯ ಹಿರಿಯ ವಿದ್ಯಾರ್ಥಿನಿ ರುಮೈಝಾ ಕುಂಡಡ್ಕ ಅವರು ₹25 ಸಾವಿರ ವೆಚ್ಚದಲ್ಲಿ ಕೊಡುಗೆಯಾಗಿ ನೀಡಿದ ಕೈ ತೊಳೆಯುವ ನೀರಿನ ಘಟಕಕ್ಕೆ ನೇಸರ ಯುವಕ ಮಂಡಲದ ಗೌರವಾಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಶಿಲಾನ್ಯಾಸ ನೆರವೇರಿಸಿದರು.

ಮುಕ್ಕೂರು ನೇಸರ ಯುವಕ ಮಂಡಲ ಮತ್ತು ಯುವತಿ ಮಂಡಲದ ಸಹಯೋಗದಲ್ಲಿ ರೂಪುಗೊಳ್ಳಲಿರುವ ‘ನೇಸರ ಪೌಷ್ಟಿಕ ಕೈತೋಟ’ ನಿರ್ಮಾಣಕ್ಕೆ ಪ್ರಗತಿಪರ ಕೃಷಿಕ ಸುಬ್ರಾಯ ಭಟ್ ನೀರ್ಕಜೆ ಗುದ್ದಲಿಪೂಜೆ ನೆರವೇರಿಸಿದರು.ವೇದಿಕೆಯಲ್ಲಿ ಶಾಲಾ ಹಿತಚಿಂತಕ ಸಮಿತಿ ಕೋಶಾಧಿಕಾರಿ ಹೊನ್ನಪ್ಪ ಗೌಡ ಚಾಮುಂಡಿಮೂಲೆ, ಮುಕ್ಕೂರು ನೇಸರ ಯುವಕ ಮಂಡಲದ ಅಧ್ಯಕ್ಷ ರಕ್ಷಿತ್ ಗೌಡ ಕಾನಾವು, ಮುಕ್ಕೂರು ನೇಸರ ಯುವತಿ ಮಂಡಲದ ಅಧ್ಯಕ್ಷೆ ಬೃಂದಾ ಪೂಜಾರಿ ಮುಕ್ಕೂರು, ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಗುಲಾಬಿ ಬೊಮ್ಮೆಮ್ಮಾರು, ಮುಕ್ಕೂರು ಅಂಗನವಾಡಿ ಕಾರ್ಯಕರ್ತೆ ರೂಪಾ ಹಾಗೂ ಪೋಷಕಿ ಸುಮಿತ್ರಾ ಕಂರ್ಬುತ್ತೋಡಿ ಉಪಸ್ಥಿತರಿದ್ದರು.ಶಿಕ್ಷಕಿ ಕವಿತಾ ಪ್ರಾರ್ಥಿಸಿದರು. ಮುಕ್ಕೂರು ನೇಸರ ಯುವಕ ಮಂಡಲದ ಪ್ರಧಾನ ಕಾರ್ಯದರ್ಶಿ ತೇಜಸ್ವಿತ್ ಅಡ್ಯತಕಂಡ ವಂದಿಸಿದರು. ಪುರುಷೋತ್ತಮ ಕುಂಡಡ್ಕ ಕಾರ್ಯಕ್ರಮ ನಿರೂಪಿಸಿದರು.

ಪುಷ್ಪವೃಷ್ಟಿಯ ಸ್ವಾಗತ

ಆಕರ್ಷಕ ಅಲಂಕಾರ

ದ್ವಿಭಾಷಾ ಶಿಕ್ಷಣಕ್ಕೆ ಚಾಲನೆಶಾಲಾ ಪ್ರಾರಂಭೋತ್ಸವದ ಹಿನ್ನೆಲೆಯಲ್ಲಿ ಶಾಲಾ ಆವರಣವನ್ನು ಆಕರ್ಷಕವಾಗಿ ಅಲಂಕರಿಸಲಾಗಿತ್ತು. ಒಂದನೇ ತರಗತಿಗೆ ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳನ್ನು ಪುಷ್ಪವೃಷ್ಟಿ ಹಾಗೂ ಬ್ಯಾಂಡ್ ವಾದನದೊಂದಿಗೆ ಆತ್ಮೀಯವಾಗಿ ಸ್ವಾಗತಿಸಲಾಯಿತು. ಇದೇ ಸಂದರ್ಭದಲ್ಲಿ ಶಾಲೆಯಲ್ಲಿ ಜಾರಿಯಲ್ಲಿರುವ ದ್ವಿಭಾಷಾ ಶಿಕ್ಷಣ ಪದ್ಧತಿಗೆ ಅಧಿಕೃತ ಚಾಲನೆ ನೀಡಲಾಯಿತು. ಬಳಿಕ ಶಾಲಾ ಪ್ರಾರಂಭೋತ್ಸವ ಹಾಗೂ ಮೆಗಾ ಪೋಷಕರ ಸಭೆ ನಡೆಯಿತು. ಮುಕ್ಕೂರು ನೇಸರ ಯುವಕ ಮಂಡಲದ ವತಿಯಿಂದ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.

[t4b-ticker]
error: Content is protected !!