ಬಾಂಬ್ ಎಸೆದು RSS ಕಾರ್ಯಕರ್ತರ ಕೊಲೆಯತ್ನ : ಸಿಪಿಎಂ ನ 10 ಸದಸ್ಯರಿಗೆ ಜೈಲು ಶಿಕ್ಷೆ

Picture of Savistara

Savistara

Bureau Report

ಕಣ್ಣೂರು (ಕೇರಳಂ): ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ಕಾರ್ಯಕರ್ತರು 2011ರಲ್ಲಿ ಪ್ರಯಾಣಿಸುತ್ತಿದ್ದ ವಾಹನದತ್ತ ಬಾಂಬ್ ಎಸೆದು, ಅವರನ್ನು ಕೊಲೆ ಮಾಡಲು ಯತ್ನಿಸಿದ ಪ್ರಕರಣದಲ್ಲಿ ಸಿಪಿಎಂನ ಒಬ್ಬ ಸದಸ್ಯನಿಗೆ 25 ವರ್ಷ ಹಾಗೂ 9 ಮಂದಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿ ಇಲ್ಲಿನ ಸೆಷನ್ಸ್ ನ್ಯಾಯಾಲಯ ಶನಿವಾರ ಆದೇಶಿಸಿದೆ.

‘ಈ ಪ್ರಕರಣದ ಅಪರಾಧಿಗಳಿಗೆ ಐಪಿಸಿ. ಸ್ಫೋಟಕಗಳ ಕಾಯ್ದೆಯ ವಿವಿಧ ಅವಕಾಶಗಳಡಿ ಜೈಲು ಶಿಕ್ಷೆ ಹಾಗೂ ತಲಾ ₹2.6 ಲಕ್ಷ ದಂಡ ವಿಧಿಸಿ ತಳಿಪರಂಬದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಪ್ರಶಾಂತ್ ಕೆ.ಎನ್ಆದೇಶಿಸಿದ್ದಾರೆ’ ಎಂದು ಸರ್ಕಾರಿ ವಕೀಲ ಯು. ರಮೇಶನ್‌ ತಿಳಿಸಿದ್ದಾರೆ.

ಸಿಪಿಎಂನ ಸದಸ್ಯರಾದ ಇತರ 9 ಮಂದಿ ಅಪರಾಧಿಗಳಾದ ಎಂ.ಕೆ.ಪ್ರದೀಪ್‌ಕುಮಾ‌ರ್, ಪಿ.ಪಿ.ಸತ್ಯನ್, ಪಂಚಾಯತ್ ಸದಸ್ಯ ಪಿ.ವಿ.ಬಾಬುರಾಜ್, ಇ.ವಿ.ವಿನೋದಕುಮಾರ್, ವಿಜಯನ್, ಕೆ.ಪಿ.ಸುರೇಶ್‌, ಟೋಬಿ, ಜನಾರ್ದನ್ ಕೆ.ವಿ ಹಾಗೂ ಶಿವಪ್ರಕಾಶ್‌ಗೆ 10 ವರ್ಷ ಸೆರೆವಾಸ ವಿಧಿಸಲಾಗಿದೆ’ ಎಂದು ತಿಳಿಸಿದ್ದಾರೆ.

ಏನಿದು ಪ್ರಕರಣ?:ನಗರದಲ್ಲಿ ಆರ್‌ಎಸ್‌ಎಸ್‌ ಶಾಖೆ ತೆರೆಯುವ ವಿಚಾರವಾಗಿ 2011ರ ನವೆಂಬರ್ 27ರಂದು ಸಿಪಿಎಂ ಹಾಗೂ ಆರ್‌ಎಸ್‌ಎಸ್-ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿತ್ತು. ಮಾರನೇ ದಿನ, ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ಕಾರ್ಯಕರ್ತರಿದ್ದ ವಾಹನ ಥಿಮಿರಿ ಕಾಲೇಜು ಬಳಿ ಸಾಗುತ್ತಿದ್ದಾಗ, ವಾಹನದತ್ತ ಬಾಂಬ್ ಎಸೆಯಲಾಗಿತ್ತು. ವಾಹನದಲ್ಲಿ 30 ಕಾರ್ಯಕರ್ತರು ಪ್ರಯಾಣಿಸುತ್ತಿದ್ದರು. ಬಾಂಬ್ ದಾಳಿಯಲ್ಲಿ 9 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.

[t4b-ticker]
error: Content is protected !!