ಮಂಗಳೂರು: ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಹತ್ಯೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆ ಪ್ರಕಟವಾಗಿರುವ ಹಿನ್ನೆಲೆಯಲ್ಲಿ, ಅವರ ಶಾಸಕ ಸ್ಥಾನದ ಭವಿಷ್ಯದ ಬಗ್ಗೆ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಸ್ಪಷ್ಟನೆ ನೀಡಿದ್ದಾರೆ.ಸೋಮವಾರ (ಏ.20) ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, “ಶಾಸಕ ವಿನಯ್ ಕುಲಕರ್ಣಿ ಅವರಿಗೆ ಶಿಕ್ಷೆಯಾಗಿರುವ ಬಗ್ಗೆ ಮಾಹಿತಿ ಇದೆ. ಆದರೆ, ಈ ಕುರಿತು ನ್ಯಾಯಾಲಯದಿಂದ ನಮಗೆ ಇನ್ನೂ ಅಧಿಕೃತ ಆದೇಶದ ಪ್ರತಿ ಸಿಕ್ಕಿಲ್ಲ. ಕೋರ್ಟ್ ಆರ್ಡರ್ ಕೈ ಸೇರಿದ ಬಳಿಕವಷ್ಟೇ ಮುಂದಿನ ಕಾನೂನು ಕ್ರಮಗಳ ಬಗ್ಗೆ ನಿರ್ಧರಿಸಲಾಗುವುದು,” ಎಂದು ತಿಳಿಸಿದರು.ಶಾಸಕ ಸ್ಥಾನ ಮುಂದುವರಿಯುವ ಸಾಧ್ಯತೆಗಳ ಬಗ್ಗೆ ವಿವರಿಸಿದ ಅವರು ಕೆಳಹಂತದ ನ್ಯಾಯಾಲಯ ನೀಡಿದ ತೀರ್ಪಿನ ವಿರುದ್ಧ ಮೇಲಿನ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಒಂದು ವೇಳೆ ಮೇಲಿನ ನ್ಯಾಯಾಲಯವು ಶಿಕ್ಷೆಗೆ ತಡೆಯಾಜ್ಞೆ ನೀಡಿದರೆ, ಅವರ ಶಾಸಕ ಸ್ಥಾನ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ ಎಂದ ಅವರು ಸಂವಿಧಾನದ ಚೌಕಟ್ಟಿನಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಎಲ್ಲ ಸದಸ್ಯರ ಹಿತರಕ್ಷಣೆ ಮಾಡುವುದು ಸಭಾಧ್ಯಕ್ಷನಾಗಿ ನನ್ನ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.
20 ವರ್ಷದ ನಂತರ ಸಿಎಂ ಸ್ಥಾನದ ಬಗ್ಗೆ ಚಿಂತನೆ!
ಇದೇ ವೇಳೆ ತಮ್ಮ ರಾಜಕೀಯ ಭವಿಷ್ಯದ ಕುರಿತು ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಖಾದರ್, “ಸದ್ಯ ನಾನು ಸಂವಿಧಾನಬದ್ಧವಾದ ಉನ್ನತ ಹುದ್ದೆಯಲ್ಲಿದ್ದೇನೆ. ಪಕ್ಷ ಟಿಕೆಟ್ ನೀಡಿ, ಕ್ಷೇತ್ರದ ಜನರು ನನ್ನನ್ನು ಮತ್ತೆ ಮತ್ತೆ ಗೆಲ್ಲಿಸಿದರೆ, ಇಂದಿನಿಂದ 20 ವರ್ಷಗಳ ನಂತರ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಯೋಚಿಸುವೆ,” ಎಂದು ಚಮತ್ಕಾರಿಕವಾಗಿ ಉತ್ತರಿಸಿದರು.

















































