ಯಾವತ್ತೂ ಪಾಕಿಸ್ತಾನ್ ಜಿಂದಾಬಾದ್ ಎಂದು ಹೇಳುವ ಪ್ರಮೇಯ ಇಲ್ಲ
ಇಸ್ಲಾಮಾಬಾದ್: ಪಹಲ್ಲಾಮ್ ನಲ್ಲಿ ಪ್ರವಾಸಿಗರ ಮೇಲೆಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 26 ಮಂದಿ ಹ*ತ್ಯೆಗೀಡಾದ ಘಟನೆ ನಂತರ ಭಾರತ ಮತ್ತು ಪಾಕ್ ನಡುವಿನ ಯುದ್ಧ ಸಂಘರ್ಷ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಏತನ್ಮಧ್ಯೆ ಪಾಕಿಸ್ತಾನದ ನಾಗರಿಕರು ಸ್ವಯಂ ಆಗಿ ಪಾಕ್ ಸೇನೆ ವಿರುದ್ಧ ತಿರುಗಿ ಬಿದ್ದಿರುವುದಾಗಿ ವರದಿ ತಿಳಿಸಿದೆ.ಇತ್ತೀಚೆಗೆ ಇಸ್ಲಾಮಾಬಾದ್ ನ ಲಾಲ್ ಮಸೀದಿಯಲ್ಲಿ ನಡೆದ ಧರ್ಮೋಪದೇಶದ ಸಂದರ್ಭದಲ್ಲಿ ಮೌಲಾನಾ ಅಬ್ದುಲ್ ಅಝೀಜ್, ಭಾರತದ ಜೊತೆ ಯುದ್ಧ ನಡೆದರೆ ಪಾಕಿಸ್ತಾನದ ಪರವಾಗಿರುವವರು ಕೈ ಎತ್ತುವುದಾಗಿ ಹೇಳಿದ್ದರು. ಆದರೆ ಒಬ್ಬರೇ ಒಬ್ಬ ವ್ಯಕ್ತಿಯೂ ಕೈ ಎತ್ತದಿರುವ ವಿಚಾರದ ವಿಡಿಯೋ ವೈರಲ್ ಆಗಿದೆ.ಈ ಸಂದರ್ಭದಲ್ಲಿ ಮಾತನಾಡಿದ ಮೌಲ್ವಿ ಅಝೀಜ್, ಭಾರತಕ್ಕಿಂತ ಪಾಕಿಸ್ತಾನವೇ ಹೆಚ್ಚು ದಬ್ಬಾಳಿಕೆ ನಡೆಸಿದೆ. ಕನಿಷ್ಠ ಪಕ್ಷ ಭಾರತ ಯಾವತ್ತೂ ಲಾಲ್ ಮಸೀದಿ ಅಥವಾ ವಜಿರಿಸ್ತಾನ್ ಮೇಲೆ ಬಾಂಬ್ ಹಾಕಿಲ್ಲ ಎಂದು ಪಾಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವುದಾಗಿ ವರದಿ ತಿಳಿಸಿದೆ.
ತಮ್ಮದೇ ದೇಶವಾದ ಪಾಕ್ ಸೇನಾ ಕಾರ್ಯಾಚರಣೆ ಉಲ್ಲೇಖಿಸಿ ಮಾತನಾಡಿರುವ ಅಝಿಜ್, 2007ರ ಲಾಲ್ ಮಸೀದಿ ಮುತ್ತಿಗೆ ಕಾರ್ಯಾಚರಣೆ ಹಾಗೂ ವಜೀರಿಸ್ತಾನ್ ಮೇಲಿನ ವೈಮಾನಿಕ ದಾಳಿಯ ಮೂಲಕ ನಡೆಸಿರುವ ದಬ್ಬಾಳಿಕೆಯ ಉದಾಹರಣೆ ನೀಡಿ ಪಾಕ್ ನ ಆಂತರಿಕ ದಮನ ನೀತಿ ಬಗ್ಗೆ ಕಿಡಿಕಾರಿದ್ದಾರೆ.ಪ್ರಸ್ತುತ ಆಡಳಿತಾವಧಿಯಲ್ಲಿ ಪತ್ರಕರ್ತರು, ಧಾರ್ಮಿಕ ಮೌಲ್ವಿಗಳು, ಪಾಕಿಸ್ತಾನ್ ಇ ಇನ್ಸಾಫ್ ಕಾರ್ಯಕರ್ತರು, ಬಲೂಚ್, ಪಶುನ್ ಜನರು ಕೇಸುಗಳಿಂದ ತತ್ತರಿಸಿ ಹೋಗಿರುವುದಾಗಿ ಅಝೀಜ್ ವಾಗ್ದಾಳಿ ನಡೆಸಿದ್ದಾರೆ.ಇತ್ತೀಚೆಗಷ್ಟೇ ಮತ್ತೊಬ್ಬ ಇಸ್ಲಾಮಿಕ್ ಮೌಲ್ವಿಯೊಬ್ಬರು, ಪಾಕಿಸ್ತಾನ ಸೇನೆ ಪಶುನ್ ಜನರ ಮೇಲೆ ನಡೆಸಿದ ಪೈಶಾಚಿಕ ದಾಳಿಯನ್ನು ಕಟುವಾಗಿ ಖಂಡಿಸಿ, ಆಕ್ರೋಶ ಹೊರಹಾಕಿದ್ದರು. ಒಂದು ವೇಳೆ ಭಾರತ ಪಾಕಿಸ್ತಾನ್ ಮೇಲೆ ದಾಳಿ ನಡೆಸಿದರೆ, ಪಸ್ತುನ್ ಜನರು ಭಾರತೀಯ ಸೇನೆಯ ಜೊತೆ ಕೈಜೋಡಿಸಲಿದೆ. ಪಶುನ್ ಜನರ ಮೇಲೆ ದಬ್ಬಾಳಿಕೆ ನಡೆಸಿದ ದಬ್ಬಾಳಿಕೆಗೆ ಮಿತಿ ಇಲ್ಲ..ಹಾಗಾಗಿ ನಾವು ಯಾವತ್ತೂ ಪಾಕಿಸ್ತಾನ್ ಜಿಂದಾಬಾದ್ ಎಂದು ಹೇಳುವ ಪ್ರಮೇಯ ಇಲ್ಲ ಎಂದು ಮೌಲ್ವಿ ಹೇಳಿದ್ದರು.
ದೇಶದಲ್ಲಿ ಪಾಕ್ ಸೇನೆ, ಪಾಕ್ ಆಡಳಿತದ ವಿರುದ್ಧ ಆಕ್ರೋಶ ಭುಗಿಲೇಳತೊಡಗಿರುವುದು ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ನಾಗರಿಕ ದಂಗೆ ಏಳುವ ಸಾಧ್ಯತೆ ಇದ್ದಿರುವುದಾಗಿ ವರದಿ ತಿಳಿಸಿದೆ.ಮತ್ತೊಂದೆಡೆ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ ಪಾಕ್ ನಗರದ ಮೇಲೆ ದಾಳಿ ನಡೆಸಿ, ತನ್ನ ಕೈ ವಶ ಮಾಡಿಕೊಂಡಿರುವುದಾಗಿ ವರದಿಯಾಗಿದೆ.













































