ಟೆಹರಾನ್: ಅಮೆರಿಕ ದಾಳಿಗೆ ಪ್ರತಿಯಾಗಿ ಅದರಮಿತ್ರರಾಷ್ಟ್ರಗಳಾದ ಬಹರೇನ್ ಹಾಗೂ ಕುವೈತ್ ಗುರಿಯಾಗಿಸಿ ಇರಾನ್ ಪ್ರತಿದಾಳಿ ನಡೆಸಿದೆ. ಇದರಿಂದ ಕದನ ವಿರಾಮ ಹಾಗೂ ಶಾಂತಿ ಮಾತುಕತೆಗೆ ಸಂಬಂಧಿಸಿದಂತೆ ಅನಿಶ್ಚಿತತೆ ಮುಂದುವರಿದಿದೆ.
ಶಾಂತಿ ಮಾತುಕತೆ ಅಂತಿಮ ಹಂತದಲ್ಲಿರುವಾಗ ಸಂಘರ್ಷದ ವಾತಾವರಣ ಮುಂದುವರಿದಿದೆ. ಬಹರೇನ್ ಹಾಗೂ ಕುವೈತ್ ಗುರಿಯಾಗಿ ಇರಾನ್ ಡೋನ್ ಹಾಗೂ ಕ್ಷಿಪಣಿ ದಾಳಿ ನಡೆಸಿದೆ.ಹೊರ್ಮುಜ್ ಜಲಸಂಧಿ ಮುಚ್ಚಿದ್ದರಿಂದ ಜಾಗತಿಕ ತೈಲ ಪೂರೈಕೆ ಸರಪಳಿಗೆ ಅಡ್ಡಿಯಾಗಿದೆ. ಇದರಿಂದಾಗಿ ವಿಶ್ವದೆಲ್ಲೆಡೆ ಇಂಧನ ಬೆಲೆ ಗಣನೀಯವಾಗಿ ಏರಿಕೆಯಾಗಿವೆ.ಇರಾನ್ ಹಾರಿಸಿದ ಡೋನ್‌ಗಳನ್ನು ಹೊಡೆದುರುಳಿಸಲಾಗಿದೆ. ಬಳಿಕ ಇರಾನ್‌ನ ರಾಡಾರ್ ತಾಣಗಳನ್ನು ಗುರಿಯಾಗಿಸಲಾಗಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ಹೇಳಿದೆ.
ಮತ್ತೊಂದೆಡೆ ವೈರಿಗಳ ನೆಲೆಗಳನ್ನು ಗುರಿಯಾಗಿಸಿ ಕ್ಷಿಪಣಿಗಳ ಮೂಲಕ ಉತ್ತರ ನೀಡಲಾಗಿದೆ ಎಂದು ಇರಾನ್ ರೆವಲ್ಯೂಷನರಿ ಗಾರ್ಡ್ ತಿಳಿಸಿದೆ.ಬಹರೇನ್ ಹಾಗೂ ಕುವೈತ್‌ನತ್ತ ಇರಾನ್ ಏಳು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದೆ. ಈ ಪೈಕಿ ಆರು ಕ್ಷಿಪಣಿಗಳನ್ನು ಹೊಡೆದುರುಳಿಸಲಾಗಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ಹೇಳಿದೆ.ಇರಾನ್ ದಾಳಿಯನ್ನು ಬಹರೇನ್ ಹಾಗೂ ಕುವೈತ್ ತೀವ್ರವಾಗಿ ಖಂಡಿಸಿದೆ. ಬಹರೇನ್‌ನಲ್ಲಿ ಸೈರನ್ ಮೊಳಗಿದ್ದು, ಸ್ಫೋಟದ ಶಬ್ದಗಳು ಕೇಳಿಸಿವೆ. ಇರಾನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಸ್ಫೋಟದ ಶಬ್ದ ಕೇಳಿಸಿವೆ ಎಂದು ಎಎಫ್‌ಪಿ ವರದಿ ಮಾಡಿದ್ದಾರೆ.










































