ಬನ್ನಡ್ಕದ ಜನರ ಆಗ್ರಹಕ್ಕೆ ಸ್ಪಂದಿಸಿದ ಸಂಸದ ಬ್ರಿಜೇಶ್ ಚೌಟ: ಅಪಘಾತ ವಲಯಕ್ಕೆ ಭೇಟಿ, ಸರ್ವಿಸ್ ರಸ್ತೆ ಹಾಗೂ ಕ್ರಾಸ್ಸಿಂಗ್ ಲೈನ್ ನ ಭರವಸೆ

Picture of Savistara

Savistara

Bureau Report

ಮೂಡುಬಿದಿರೆ: ವಾಹನ ಅಪಘಾತಗಳಾಗಿ ಹಲವು ಜನ ಪ್ರಾಣ ಕಳೆದುಕೊಂಡು ಇತ್ತೀಚಿನ ದಿನಗಳಲ್ಲಿ ಅಪಘಾತ ವಲಯವೆಂದೇ ಗುರುತಿಸಿಕೊಂಡಿರುವ ಬನ್ನಡ್ಕ ಪ್ರದೇಶಕ್ಕೆ ಮಂಗಳೂರು ಸಂಸದ ಬ್ರಿಜೇಶ್ ಚೌಟ ಅವರು ಭಾನುವಾರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.ರಾ.ಹೆ. ನಿರ್ಮಾಣದ ಸಂದರ್ಭದಲ್ಲಿ ಇಲಾಖೆಯು ಬನ್ನಡ್ಕದಲ್ಲಿ ಸರ್ವೀಸ್ ರಸ್ತೆಯನ್ನು ನಿರ್ಮಿಸದೆ ಇರುವುದರಿಂದ ಆಗಿರುವ ಸಮಸ್ಯೆಯ ಬಗ್ಗೆ ಸ್ಥಳೀಯರು ಸಂಸದರ ಗಮನಕ್ಕೆ ತಂದಾಗ, ಸರ್ವಿಸ್ ಕ್ರಾಸ್ಸಿಂಗ್ ಲೈನ್ ಅಳವಡಿಸುವ ಭರವಸೆ ನೀಡಿದ ಅವರು ಕಾಮಗಾರಿಯನ್ನು ಸೂಕ್ತ ರೀತಿಯಲ್ಲಿ ನಡೆಸುವಂತೆ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಂತರ ಮಾಧ್ಯಮದೊಂದಿಗೆ ಮಾತನಾಡಿದ ಚೌಟರು 600 ಮೀಟರ್ ಗ್ಯಾಪ್‌ನಲ್ಲಿ ಸರ್ವಿಸ್ ರಸ್ತೆ ನಿರ್ಮಿಸುವಂತೆ ಎಲ್ಲರ ಬೇಡಿಕೆ ಇತ್ತು. ಈ ನಿಟ್ಟಿನಲ್ಲಿ ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಇಲಾಖೆ ಸಚಿವರು ಹಾಗೂ ಬೆಂಗಳೂರಿನ ಪ್ರಾದೇಶಿಕ ಕಚೇರಿ ಅಧಿಕಾರಿಯೊಂದಿಗೆ ಮಾತುಕತೆ ನಡೆಸಲಾಗಿದೆ. ಅಂದಾಜು ಪಟ್ಟಿ ಸಿದ್ಧಪಡಿಸುವ ಕೆಲಸ ಪ್ರಾರಂಭವಾಗಿದ್ದು, ಪ್ರೊಸೀಜರಲ್ ಅನುಮೋದನೆ ಸಿಕ್ಕ ತಕ್ಷಣ ಸರ್ವಿಸ್ ರಸ್ತೆ ಕಾಮಗಾರಿ ಮಾಡಲಾಗುವುದು.ರಸ್ತೆ ದಾಟಲು ಸೈ ವಾಕ್ (ಕ್ರಾಸಿಂಗ್) ವ್ಯವಸ್ಥೆ ಬೇಕೆಂಬುದು ಜನರ ಪ್ರಮುಖ ಬೇಡಿಕೆಯಾಗಿದ್ದು ಶಾಸಕರು ಹಾಗೂ ಸಾರ್ವಜನಿಕರೊಂದಿಗೆ ಚರ್ಚಿಸಿ, ಮುಂದಿನ ದಿನಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.ಎರಡು-ಮೂರು ಕಡೆಗಳಲ್ಲಿ ಭೂಸ್ವಾಧೀನದ (ಲ್ಯಾಂಡ್ ಅಕ್ವಿಸಿಷನ್) ಸಮಸ್ಯೆ ಇದೆ. ಆದರೂ ಹಳೆಯ ಯೋಜನೆಯ (ಪ್ಲಾನ್) ಅನುಗುಣವಾಗಿಯೇ ಕೆಲಸಗಳನ್ನು ಮಾಡಲಾಗುತ್ತದೆ ಎಂದು ಸಂಸದರು ಸ್ಪಷ್ಟಪಡಿಸಿದರು.

ಹಿಂದೆ ಇದ್ದ ಹೆದ್ದಾರಿ ಚಿಕ್ಕದಾಗಿತ್ತು, ಈಗ ಅದು ನಾಲ್ಕು ಪಥಗಳ ದೊಡ್ಡ ಹೆದ್ದಾರಿಯಾಗಿ ಬದಲಾಗುತ್ತಿದೆ. ಆದ್ದರಿಂದ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಸಾರ್ವಜನಿಕರು ಅತ್ಯಂತ ಎಚ್ಚರಿಕೆಯಿಂದ ರಸ್ತೆಗಳಲ್ಲಿ ಸಂಚರಿಸಬೇಕು. ಅಪಘಾತ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ಕಡೆಗಳಲ್ಲಿ ಸೈನ್ ಬೋರ್ಡ್‌ಗಳನ್ನು ಅಳವಡಿಸುವಂತೆ ಹೆದ್ದಾರಿ ಇಲಾಖೆ ಮತ್ತು ಕಾಂಟ್ರಾಕ್ಟರ್‌ಗಳಿಗೆ ಸೂಚಿಸಲಾಗಿದೆ. ಸರ್ವಿಸ್ ರಸ್ತೆ ಕೆಲಸವನ್ನು ಆದಷ್ಟು ಶೀಘ್ರ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದ ಅವರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯು ಆದಷ್ಟು ಬೇಗ ಪೂರ್ಣಗೊಳ್ಳಬೇಕೆಂದು ನಮ್ಮ ಇಚ್ಛೆಯಾಗಿದೆ ಎಂದರು.ಆದಷ್ಟು ಬೇಗ ಸರ್ವೀಸ್ ರಸ್ತೆ ನಿರ್ಮಾಣ, ಕ್ರಾಸಿಂಗ್ ವ್ಯವಸ್ಥೆ, ಎಸ್ ಕೆಎಫ್ ಬಳಿ ರಸ್ತೆಯನ್ನು ಸಮತಟ್ಟು ಮಾಡುವಂತೆ ಸ್ಥಳೀಯರಾದ ಸೂರಜ್ ಜೈನ್, ಅಕ್ಷಯ್ ಬನ್ನಡ್ಕ ಅವರು ಸಂಸದರಿಗೆ ಮನವಿ ನೀಡಿದರು.ಶಾಸಕ ಉಮಾನಾಥ ಎ. ಕೋಟ್ಯಾನ್, ಮಂಡಲಾಧ್ಯಕ್ಷ ದಿನೇಶ್ ಪುತ್ರನ್, ಯುವ ಮೋರ್ಚಾದ ಅಧ್ಯಕ್ಷ ಕುಮಾರ್ ಪ್ರಸಾದ್, ಭರತ್ ಶೆಟ್ಟಿ,ಗೋಪಾಲ್ ಶೆಟ್ಟಿಗಾರ್, ಪಂಚಾಯತ್ ನ ಮಾಜಿ ಸದಸ್ಯರುಗಳಾದ ನಿತಿನ್ ಕೋಟ್ಯಾನ್, ಟೆಸ್ಲಿನಾ ರೊಡ್ರಿಗಸ್, ಸ್ಥಳೀಯರಾದ ದಯಾನಂದ ಪೈ, ರಮೇಶ್ ಶೆಟ್ಟಿ ಮಾರ್ನಾಡ್, ಸತೀಶ್ ಭಟ್, ರಾಜೇಶ್ ಶೆಟ್ಟಿ, ಅಕ್ಷಯ್ ಬನ್ನಡ್ಕ, ಸಂತೋಷ್ ನಾಯ್, ರೋಷನ್ ಕರ್ಕೇರಾ, ವೇಣುಗೋಪಾಲ ಶೆಟ್ಟಿ, ರಾ. ಹೆ. ಯೋಜನಾ ನಿರ್ದೇಶಕ ಜಾವೆದ್ ಮತ್ತಿತರರು ಈ ಸಂದರ್ಭದಲ್ಲಿದ್ದರು.

[t4b-ticker]
error: Content is protected !!